ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಐಟಿ ಶಾಕ್: ಹಲವು ಕಾಲೇಜುಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ

ಪ್ರತಿಷ್ಠಿತ ಶಿಕ್ಷಣ ಸಂಸ್ಥೆ PES ಮೇಲೆ ಬೆಳ್ಳಂ ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ವಿವಿಧೆಡೆ ಇರುವ ಕಾಲೇಜುಗಳು ಸೇರಿ, ಆಂಧ್ರದ ಕುಪ್ಪಂನಲ್ಲಿರುವ ಕಾಲೇಜಿನ ಮೇಲೂ ರೇಡ್ ನಡೆದಿದೆ. ಬೆಂಗಳೂರಿನಲ್ಲಿರುವ ದಿವಂಗತ ದೊರೆಸ್ವಾಮಿ ನಾಯ್ಡು ಅವರ ಮನೆ ಸೇರಿ ಅವರ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ. ಏಕಕಾಲಕ್ಕೆ ಸುಮಾರು 200 ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಪಿಇಎಸ್ (PES) ಮೇಲೆ ಬೆಳ್ಳಂ ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ (IT Raid) ನಡೆಸಿದ್ದಾರೆ. ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಆದಾಯಕ್ಕೂ ಮೀರಿದ ಆಸ್ತಿಗಳಿಕೆ ಆರೋಪ ಹಿನ್ನೆಲೆ ದಾಳಿ ನಡೆದಿದೆ ಎನ್ನಲಾಗಿದೆ.
ಎಲ್ಲೆಲ್ಲಿ ಐಟಿ ದಾಳಿ?
ದಿವಂಗತ ದೊರೆಸ್ವಾಮಿ ನಾಯ್ಡು ಸ್ಥಾಪಿಸಿದ್ದ ಪಿಇಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು, ಎಲೆಕ್ಟ್ರಾನಿಕ್ ಸಿಟಿ ಕಾಲೇಜು, ಹನುಮಂತನಗರ ಕಾಲೇಜು, ಆಂಧ್ರದ ಕುಪ್ಪಂ ಕಾಲೇಜು ಸೇರಿದಂತೆ ಹಲವೆಡೆ ಐಟಿ ದಾಳಿ ನಡೆದಿದೆ. ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿಯ ದೊರೆಸ್ವಾಮಿ ನಾಯ್ಡು ಮನೆಯಲ್ಲೂ ಅಧಿಕಾರಿಗಳು ಶೋಧ ನಡೆಸಿದ್ದು, ದೊರೆಸ್ವಾಮಿ ಸಂಬಂಧಿಕರ ಮನೆಗಳ ಮೇಲೂ ರೇಡ್ ನಡೆದಿದೆ.
