ಈ ಪ್ರದೇಶಗಳಲ್ಲಿ ನಡೆಯುತ್ತಿದೆಯಂತೆ ಜಲ ನಿರ್ವಹಣೆಗೂ ಸ್ಪರ್ಧೆ!

ಧಾರಾಶಿವ್: ಭಾರತದ ಹಲವು ರಾಜ್ಯಗಳು ಬರಗಾಲ ಸಮಸ್ಯೆ ಎದುರಿಸುತ್ತಿರುವುದು ಹೊಸದೇನಲ್ಲ. ಪ್ರತಿ ವರ್ಷ ಈ ಸಮಸ್ಯೆ ಇದ್ದೇ ಇದೆ. ಆದರೆ ಶಾಶ್ವತ ಪರಿಹಾರ ಮಾತ್ರ ಕಂಡುಕೊಂಡಿಲ್ಲ. ಆದರೆ ಕೆಲವೇ ಕೆಲವು ಜಿಲ್ಲೆಗಳು ಬರಗಾಲವನ್ನು ಮೆಟ್ಟಿ ನಿಂತ ಉದಾಹರಣೆ ಇದೆ. ಈ ಪೈಕಿ ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆ ಕೂಡ ಒಂದು. ಮರಾಠವಾಡದ ಧಾರಾಶಿವ ಜಿಲ್ಲೆಯಲ್ಲೇ ನದಿಗಳು ಹುಟ್ಟಿದರೂ ಇಲ್ಲಿ ಮಾತ್ರ ನೀರಿಲ್ಲ. ಆದರೆ ಗ್ರಾಮಸ್ಥರ ಆಸಕ್ತಿ, ಸರ್ಕಾರದ ನೆರವಿನಿಂದ ಇದೀಗ ಜಲಬಿಕ್ಕಟ್ಟಿಗೆ ಪರಿಹಾರದ ಹಾದಿಯಲ್ಲಿದೆ.

ಇಲ್ಲಿ ಭೂಮಿ ಎಷ್ಟು ಒಣಗಿದೆಯೋ, ಇಲ್ಲಿನ ನದಿಗಳೂ ಅಷ್ಟೇ. ನದಿಗಳು ಇಲ್ಲಿಂದ ಹುಟ್ಟುತ್ತವೆ ಆದರೆ ಹುಟ್ಟಿದ ಜಿಲ್ಲೆಯಲ್ಲಿ ನೀರಿಲ್ಲ. ಈ ಹಿಂದೆ ಉಸ್ಮಾನಾಬಾದ್ ಎಂದು ಕರೆಯಲ್ಪಡುತ್ತಿದ್ದ ಈ ಜಿಲ್ಲೆ ಮಹಾರಾಷ್ಟ್ರದ ಮಳೆ ನೆರಳಿನ ಪ್ರದೇಶದಲ್ಲಿ ಬರುತ್ತದೆ. ಇಲ್ಲಿ ಪ್ರತಿ ಮೂರನೇ ವರ್ಷಕ್ಕೆ ಬರಗಾಲ ಬರುವುದು ಸಾಮಾನ್ಯ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮಸ್ಥರೇ ಈಗ ಜವಾಬ್ದಾರಿ ತೆಗೆದುಕೊಂಡು ಜಲ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಹೊರಟಿದ್ದಾರೆ. ಬಾಗಶಃ ಯಶಸ್ವಿಯಾಗಿದ್ದಾರೆ.
734 ಗ್ರಾಮಗಳಲ್ಲಿ ಜಲ ನಿರ್ವಹಣಾ ಸ್ಪರ್ಧೆ, ಪ್ರತಿ ಗ್ರಾಮಕ್ಕೂ ಅಂಕ
ಧಾರಾಶಿವ ಜಿಲ್ಲಾಡಳಿತ, ಮಹಾರಾಷ್ಟ್ರ ಸರ್ಕಾರದ ಜಲ ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಮತ್ತು ಪುಣೆಯ ವಾಟರ್‌ಶೆಡ್ ಆರ್ಗನೈಸೇಶನ್ ಟ್ರಸ್ಟ್ (WOTR) ಸಹಭಾಗಿತ್ವದಲ್ಲಿ ಇಲ್ಲಿನ 734 ಗ್ರಾಮಗಳ ನಡುವೆ ವಿಶಿಷ್ಟ ಜಲ ನಿರ್ವಹಣಾ ಸ್ಪರ್ಧೆ ಆರಂಭಿಸಲಾಗಿದೆ. ಪ್ರತಿ ಗ್ರಾಮವನ್ನು 100 ಅಂಕಗಳ ಸ್ಕೋರಿಂಗ್ ವ್ಯವಸ್ಥೆಯಲ್ಲಿ ಅಳೆಯಲಾಗುತ್ತದೆ, ಇದರಲ್ಲಿ ಜಲ ಸಂರಕ್ಷಣೆ, ಅಂತರ್ಜಲ ಮಟ್ಟ ಸುಧಾರಣೆ, ನೀರಿನ ಗುಣಮಟ್ಟ ಮತ್ತು ನೈರ್ಮಲ್ಯದಂತಹ ಮಾನದಂಡಗಳನ್ನು ಸೇರಿಸಲಾಗಿದೆ.
ಗ್ರಾಮಗಳೇ ಗುರು, ಮಾದರಿಗೆ ರಾಷ್ಟ್ರೀಯ ಪ್ರಚಾರ
ಧಾರಾಶಿವ ಜಿಲ್ಲಾ ಪರಿಷತ್‌ನ CEO ಮೈನಾಕ್ ಘೋಷ್ (Mainak Ghosh) ಮಾತನಾಡಿ, ಈ ಸ್ಪರ್ಧೆಯಿಂದ ಯಾವುದೇ ಸ್ಥಳೀಯ, ನಾವೀನ್ಯತೆ ಆಧಾರಿತ ಮತ್ತು ಸುಸ್ಥಿರ ಪರಿಹಾರ ಹೊರಬಂದರೆ, ಅದನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತೇವೆ. ಈ ಮಾದರಿ ಇಡೀ ಭಾರತದ ಗ್ರಾಮಗಳಿಗೆ ಮಾದರಿಯಾಗಬಹುದು ಎಂದಿದ್ದಾರೆ.
ಧಾರಾಶಿವದ ಕೃಷಿ ಅಧಿಕಾರಿ ರವೀಂದ್ರ ಮಾನೆ (Ravindra Mane) ಹೇಳುವಂತೆ, ಜಿಲ್ಲೆಯಲ್ಲಿ ಕಾಲುವೆ ವ್ಯವಸ್ಥೆ ತುಂಬಾ ದುರ್ಬಲವಾಗಿದೆ. ಇಲ್ಲಿಗೆ ಯಾವುದೇ ನದಿ ಹೊರಗಿನಿಂದ ನೀರನ್ನು ತರುವುದಿಲ್ಲ. ಇಲ್ಲಿ ನದಿಗಳು ಪ್ರಾರಂಭವಾಗುತ್ತವೆ ಆದರೆ ಹೊರಗಿನಿಂದ ಯಾವುದೇ ನದಿ ನೀರನ್ನು ತರುವುದಿಲ್ಲ, ಉದಾಹರಣೆಗೆ ಸೋಲಾಪುರಕ್ಕೆ ಉಜನಿ ಅಣೆಕಟ್ಟಿನಿಂದ ನೀರು ಸಿಗುತ್ತದೆ. ಆದ್ದರಿಂದ ನಮ್ಮ ಬಳಿ ಇರುವ ನೀರನ್ನು ಬಳಸಿಕೊಂಡು ಪರಿಹಾರ ಕಂಡುಕೊಳ್ಳಬೇಕು.
WOTR ನ ಹೊಸ ಮಾದರಿ: ‘ವಾಟರ್ ಗವರ್ನೆನ್ಸ್ ಸ್ಟ್ಯಾಂಡರ್ಡ್ ಅಂಡ್ ಸರ್ಟಿಫಿಕೇಶನ್ ಸಿಸ್ಟಮ್’
WOTR ನ ಜಲ ತಜ್ಞ ಡಾ. ಈಶ್ವರ್ ಕಾಳೆ ಅವರು ಗ್ರಾಮ ಮಟ್ಟದಲ್ಲಿ ಜಲ ನಿರ್ವಹಣೆಯನ್ನು ಅಳೆಯಲು ವಾಟರ್ ಗವರ್ನೆನ್ಸ್ ಸ್ಟ್ಯಾಂಡರ್ಡ್ ಅಂಡ್ ಸರ್ಟಿಫಿಕೇಶನ್ ಸಿಸ್ಟಮ್ ಅನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ವ್ಯವಸ್ಥೆಯು NITI ಆಯೋಗದ ಕಾಂಪೋಸಿಟ್ ವಾಟರ್ ಮ್ಯಾನೇಜ್‌ಮೆಂಟ್ ಇಂಡೆಕ್ಸ್‌ನಿಂದ ಪ್ರೇರಿತವಾಗಿದೆ ಆದರೆ ಗ್ರಾಮಗಳಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.
ಪ್ರೇರಣೆ ಮತ್ತು ಬಹುಮಾನ ಎರಡೂ: ಟಾಪ್ 3 ಗ್ರಾಮಗಳಿಗೆ ನಗದು ಬಹುಮಾನ
ಈ ಸ್ಪರ್ಧೆಯಲ್ಲಿ ಮೊದಲ, ಎರಡನೇ ಮತ್ತು ಮೂರನೇ ಸ್ಥಾನ ಪಡೆಯುವ ಗ್ರಾಮಗಳಿಗೆ ಕ್ರಮವಾಗಿ 5 ಲಕ್ಷ ರೂಪಾಯಿ, 3 ಲಕ್ಷ ರೂಪಾಯಿ ಮತ್ತು 1 ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ. ಈಗಾಗಲೇ 140ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ನೋಂದಣಿ ಮಾಡಿಕೊಂಡಿವೆ. ಕೊನೆಯ ದಿನಾಂಕ ಏಪ್ರಿಲ್ 15 ಆಗಿದೆ.