ಟ್ಯಾಕ್ಸ್ ವಂಚಿಸುವವರನ್ನು ಜಾಲಾಡಲು ಸಿದ್ದವಾದ ಐಟಿ ಇಲಾಖೆ

ನವದೆಹಲಿ:ಆದಾಯ ತೆರಿಗೆಯಲ್ಲಿ (Income Tax) ಲಭ್ಯ ಇರುವ ವಿವಿಧ ಡಿಡಕ್ಷನ್, ಎಕ್ಸೆಂಪ್ಷನ್ ಇತ್ಯಾದಿ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡು ತೆರಿಗೆ ವಂಚಿಸಲಾಗುತ್ತಿರುವ ಪ್ರಕರಣಗಳನ್ನು ಐಟಿ ಇಲಾಖೆ ಜಾಲಾಡುತ್ತಿದೆ. ವೃತ್ತಿಪರ ಮಧ್ಯವರ್ತಿಗಳೊಂದಿಗೆ ಶಾಮೀಲಾಗಿ ಟ್ಯಾಕ್ಸ್ ಬೆನಿಫಿಟ್ಗಳ ದುರ್ಬಳಕೆ ಆಗುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ದೊಡ್ಡ ಮಟ್ಟದಲ್ಲಿ ಪರಿಶೀಲನಾ ಕಾರ್ಯಾಚರಣೆ ಆರಂಭಿಸಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆ ಮಾಡಿದೆ.
ಹೊಸ ಎಐ ಟೂಲ್ಗಳು, ತಳಮಟ್ಟದ ಗುಪ್ತಚರ ವ್ಯವಸ್ಥೆ, ಥರ್ಡ್ ಪಾರ್ಟಿ ಮೂಲಗಳು ಹೀಗೆ ವಿವಿಧೆಡೆಯಿಂದ ಪಡೆಯಲಾದ ಹಣಕಾಸು ಮಾಹಿತಿಯನ್ನು ಆಧರಿಸಿ ಐಟಿ ಇಲಾಖೆ ತನ್ನ ಕೆಂಪೇನ್ ನಡೆಸಿದೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್, ಪಂಜಾಬ್, ಮಧ್ಯಪ್ರದೇಶ ರಾಜ್ಯಗಳಲ್ಲಿ ಇತ್ತೀಚೆಗೆ ನಡೆಸಲಾದ ರೇಡ್ಗಳಲ್ಲಿ ಐಟಿ ಇಲಾಖೆಗೆ ಈ ಸಂಬಂಧ ಕೆಲ ಪ್ರಮುಖ ಪುರಾವೆಗಳು ಲಭಿಸಿವೆ ಎನ್ನಲಾಗಿದೆ.

ಐಟಿ ಇಲಾಖೆ ಅಡಿಯಲ್ಲಿ ಬುರವ 10(13ಎ), 80ಜಿಜಿಸಿ, 80ಇ, 80ಡಿ, 80ಇಇ, 80ಇಇಬಿ, 80ಜಿ, 80ಡಿಡಿಬಿ ಸೆಕ್ಷನ್ಗಳಲ್ಲಿ ಸಿಗುವ ಡಿಡಕ್ಷನ್ಗಳನ್ನು ಸಾಕಷ್ಟು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ತೆರಿಗೆ ಪಾವತಿದಾರರಿಗೆ ಪೂರ್ಣ ರೀಫಂಡ್ ಕೊಡಿಸುವುದಾಗಿ ಆಮಿಷವೊಡ್ಡಿ ಕಮಿಷನ್ ಪಡೆದು ಮಧ್ಯವರ್ತಿಗಳು ಈ ವಂಚನೆಯ ಕೆಲಸ ಮಾಡುತ್ತಿದ್ದಾರೆ. ಇವರುಗಳು ತಾತ್ಕಾಲಿಕ ಇಮೇಲ್ ಐಡಿಗಳನ್ನು ರಚಿಸಿ ಅವುಗಳ ಮೂಲಕ ಬಲ್ಕ್ ರಿಟರ್ನ್ಸ್ ಫೈಲ್ ಮಾಡುತ್ತಾರೆ. ಬಳಿಕ ಈ ಇಮೇಲ್ ಐಡಿಗಳನ್ನು ತ್ಯಜಿಸುತ್ತಾರೆ. ಇದರಿಂದಾಗಿ, ಐಟಿ ಇಲಾಖೆಯಿಂದ ಹೋಗುವ ನೋಟೀಸ್ಗಳು ಯಾರ ಗಮನಕ್ಕೂ ಬರುವುದಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಹಣಕಾಸು ಸಚಿವಾಲಯವು ವಿವರಿಸಿದೆ.
ಐಟಿ ರಿಟರ್ನ್ಸ್ ಅನ್ನು ತೆರಿಗೆ ಪಾವತಿದಾರರು ಸ್ವಯಂ ಆಗಿ ಮಾಡುವ ತೆರಿಗೆ ಘೋಷಣೆ. ಆದರೂ ಕೂಡ ಇಲಾಖೆಯು ಕಳೆದ ಒಂದು ವರ್ಷದಿಂದ ತೆರಿಗೆ ಪಾವತಿದಾರರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದೆ. ತಪ್ಪಾಗಿ ಐಟಿಆರ್ ಸಲ್ಲಿಸಿದವರನ್ನು ಎಸ್ಸೆಮ್ಮೆಸ್, ಇಮೇಲ್ ಇತ್ಯಾದಿ ಮೂಲಕ ಸಂಪರ್ಕಿಸಿ ಪರಿಷ್ಕೃತ ರಿಟರ್ನ್ ಸಲ್ಲಿಸಿ, ಸರಿಯಾದ ಪ್ರಮಾಣದ ತೆರಿಗೆ ಪಾವತಿಸುವಂತೆ ತಿಳಿಸುವ ಕೆಲಸ ಮಾಡುತ್ತಿದೆ.
ಒಂದು ಅಂದಾಜು ಪ್ರಕಾರ, ಕಳೆದ ನಾಲ್ಕು ತಿಂಗಳಲ್ಲಿ ಈ ಅಭಿಯಾನದ ಪರಿಣಾಮವಾಗಿ ದೇಶಾದ್ಯಂತ 40,000 ತೆರಿಗೆ ಪಾವತಿದಾರರು ತಮ್ಮ ಐಟಿಆರ್ ಅನ್ನು ಅಪ್ಡೇಟ್ ಮಾಡಿದ್ದಾರೆ. 1,045 ಕೋಟಿ ರೂ ಮೊತ್ತಕ್ಕೆ ತಪ್ಪಾಗಿ ಮಾಡಿದ್ದ ಕ್ಲೇಮ್ ಅನ್ನು ವಿತ್ಡ್ರಾ ಮಾಡಿದ್ದಾರೆ. ಆದರೂ ಕೂಡ ಬಹಳಷ್ಟು ಮಂದಿ ಸ್ಪಂದಿಸಿಲ್ಲ ಎಂಬುದು ಇಲಾಖೆ ಹೇಳಿಕೆ.
