ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಧ್ವನಿ ಎತ್ತಿದ ಐಟಿ ಕಂಪನಿ

ಬೆಂಗಳೂರು ಗ್ರೇಟರ್ ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ಪುಟ್ಟ ಪುಟ್ಟ ಮಕ್ಕಳು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಅಪ್ಪ ಅಮ್ಮ ಟ್ಯಾಕ್ಸ್ ಕಟ್ಟುತ್ತಿದ್ದರೂ, ರೋಡ್ ಇಷ್ಟು ಹದಗೆಟ್ಟಿವೆ, ಯಾವಾಗ ಸರಿ ಮಾಡುತ್ತೀರಾ ಅಂತಾ ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯಗೆ ಪ್ರಶ್ನಿಸಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಐಟಿ ದಿಗ್ಗಜ ಮೋಹನ್ ದಾಸ್ ಪೈ (Mohandas Pai) ಕೂಡ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದು ಬೆಂಗಳೂರಿನಲ್ಲಿ ಆಡಳಿತದ ದೊಡ್ಡ ವೈಫಲ್ಯ ಆಗಿದೆ. ಹಲವು ಕಂಪನಿಗಳ ಸಿಐಒಗಳು ಹೊರಹೋಗುತ್ತಿದ್ದಾರೆ. ಬೆಂಗಳೂರಿನ ಔಟರ್ ರಿಂಗ್ ರಸ್ತೆಗಳಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ. ದಯವಿಟ್ಟು ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಟ್ಯಾಗ್ ಮಾಡಿದ್ದಾರೆ.
ಇನ್ನು ರಸ್ತೆ ಗುಂಡಿಗಳ ವಿರುದ್ಧ ಬ್ಲಾಕ್ ಬಕ್ ಕಂಪನಿ ಕೋ ಫೌಂಡರ್ ಮತ್ತು ಸಿಇಒ ರಾಜೇಶ್ ಯಾಬಾಜಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ಗುಂಡಿಯಿಂದ ಬೇಸತ್ತು ಕಂಪನಿ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಕಳೆದ 9 ವರ್ಷಗಳಿಂದ ಬೆಳ್ಳಂದೂರು ನಮ್ಮ ಕಚೇರಿ ಮತ್ತು ಮನೆಯಾಗಿದೆ. ಆದರೆ ಈಗ ಇಲ್ಲಿ ಮುಂದುವರಿಯುವುದು ತುಂಬಾ ಕಷ್ಟ ಎಂದಿದ್ದಾರೆ.
ಒಂದು ಸೈಡ್ ಪ್ರಯಾಣ ಮಾಡಲು ಕನಿಷ್ಠ 90 ನಿಮಿಷ ಸಮಯ ಬೇಕು. ಕಳೆದ 5 ವರ್ಷದಿಂದ ಈ ಭಾಗದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ರಸ್ತೆಗಳು ಗುಂಡಿಗಳು ಮತ್ತು ಧೂಳಿನಿಂದ ತುಂಬಿ ಹೋಗಿದೆ. ಹೀಗಾಗಿ ನಾವು ಕಂಪನಿ ಸ್ಥಳಾಂತರಕ್ಕೆ ನಿರ್ಧರಿಸಿದ್ದೇವೆ ಎಂದು ರಾಜೇಶ್ ಯಾಬಾಜಿ ಟ್ವೀಟ್ ಮಾಡಿದ್ದಾರೆ.