ಇಸ್ರೇಲ್ ದಾಳಿ: ನಾಸರ್ ಆಸ್ಪತ್ರೆಯ ವೈದ್ಯೆಯ 9 ಮಕ್ಕಳು ಸಾವಿಗೀಡಾದ ಘಟನೆ

ಗಾಝಾ : ಇಸ್ರೇಲ್ ಗಾಝಾ ಮೇಲೆ ದಾಳಿಯನ್ನು ಮುಂದುವರಿಸಿದೆ. ಖಾನ್ ಯೂನಿಸ್ ನಗರದಲ್ಲಿ ಮನೆಯೊಂದರ ಮೇಲೆ ನಡೆಸಿದ ದಾಳಿಯಲ್ಲಿ ನಾಸರ್ ಆಸ್ಪತ್ರೆಯ ವೈದ್ಯೆಯೋರ್ವರ 9 ಮಕ್ಕಳು ಮೃತಪಟ್ಟಿದ್ದಾರೆ ಎಂದು ಗಾಝಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ನಗರದ ನಾಸರ್ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞೆಯಾಗಿದ್ದ ಅಲಾ ಅಲ್-ನಜ್ಜರ್ ಅವರ ಮನೆಯ ಮೇಲೆ ಇಸ್ರೇಲ್ ದಾಳಿ ನಡೆಸಿದೆ.
ಅವರ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅವರ 10 ಮಕ್ಕಳಲ್ಲಿ 9 ಮಕ್ಕಳು ಮೃತಪಟ್ಟಿದ್ದಾರೆ ಎಂದು ನಾಸರ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಅಹ್ಮದ್ ಅಲ್-ಫರ್ರಾ ತಿಳಿಸಿದ್ದಾರೆ.
ಮೃತ ಮಕ್ಕಳನ್ನು ಸಿದಾರ್, ಲುಕ್ಮನ್, ಸಾದಿನ್, ರೆವಾಲ್, ರುಸ್ಲಾನ್, ಜುಬ್ರಾನ್, ಈವ್, ರಕನ್ ಮತ್ತು ಯಾಹ್ಯಾ ಎಂದು ಗುರುತಿಸಲಾಗಿದೆ ಎಂದು ಗಾಝಾ ಮಧ್ಯಮಗಳು ವರದಿ ಮಾಡಿದೆ.
ದಾಳಿಯಲ್ಲಿ ಅಲ್-ನಜ್ಜರ್ ಅವರ ಪತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ತಲೆ, ಎದೆಗೆ ಗಂಭೀರವಾದ ಗಾಯಗಳಾಗಿದೆ. ಅವರಿಗೆ ನಾಸರ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಯಲ್ಲಿ ಬದುಕುಳಿದ ದಂಪತಿಯ ಏಕೈಕ ಪುತ್ರ 11 ವರ್ಷದ ಆದಮ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಅಲ್-ಫರ್ರಾ ತಿಳಿಸಿದ್ದಾರೆ.