ಇಸ್ರೇಲ್ ಬಳಸಿತು ಹೊಸ ಸ್ಪಂಜ್ ಬಾಂಬ್ ತಂತ್ರ-ಇದೆಷ್ಟು ಅಪಾಯಕಾರಿ ಎಂದು ಗೊತ್ತ?

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಮುಂದುವರಿದಿದ್ದು, 6ನೇ ದಿನಕ್ಕೆ ಕಾಲಿಟ್ಟಿದೆ. ಎರಡೂ ದೇಶಗಳು ಕ್ಷಿಪಣಿ ಮತ್ತು ಡ್ರೋನ್ಗಳಿಂದ ಭೀಕರ ದಾಳಿ ನಡೆಸುತ್ತಿವೆ. ಈಗಾಗಲೇ ಉಭಯ ದೇಶಗಳ ಕಡೆ ಸಾಕಷ್ಟು ಸಾವು-ನೋವುಗಳು ಸಂಭವಿಸಿದ್ದು, ಆಸ್ತಿಪಾಸ್ತಿ ನಷ್ಟವಾಗಿದೆ.
ಇರಾನ್ ಉಡಾಯಿಸಿದ 120ಕ್ಕೂ ಹೆಚ್ಚು ಕ್ಷಿಪಣಿಗಳನ್ನು ನಾಶಪಡಿಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಯುದ್ಧದ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಪ್ರಮುಖ ಹೇಳಿಕೆಗಳನ್ನು ನೀಡಿದ್ದು, ಟೆಹರಾನ್ನ ವಾಯುಪ್ರದೇಶವು ಈಗ ನಮ್ಮ ನಿಯಂತ್ರಣದಲ್ಲಿದೆ ಎಂದಿದ್ದಾರೆ. ಇರಾನ್ನ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಬೆದರಿಕೆಗಳನ್ನು ನಾಶಮಾಡುವ ಗುರಿಗಳನ್ನು ಸಾಧಿಸುವತ್ತ ತಮ್ಮ ದೇಶ ಸಾಗುತ್ತಿದೆ ಎಂದು ಹೇಳಿದ್ದಾರೆ.
ಅಂದಹಾಗೆ, ಇಸ್ರೇಲ್ ಕಳೆದ ಶುಕ್ರವಾರ ಮುಂಜಾನೆ ಆಪರೇಷನ್ ರೈಸಿಂಗ್ ಲಯನ್ ಅನ್ನು ಪ್ರಾರಂಭಿಸಿತು. ಇರಾನ್ನ ಪರಮಾಣು, ಕ್ಷಿಪಣಿ ಮತ್ತು ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಬಾಂಬ್ಗಳ ಮಳೆಗರೆದಿತು. ಇರಾನ್ ಕೂಡ ಪ್ರತೀಕಾರದ ದಾಳಿಗಳನ್ನು ಪ್ರಾರಂಭಿಸಿ, ಇಸ್ರೇಲ್ ಕ್ಷಿಪನಿಗಳ ಸುರಿಮಳೆಗೈದಿತು. ಕೆಲವು ಇರಾನಿನ ಕ್ಷಿಪಣಿಗಳು ಇಸ್ರೇಲ್ನ ಹೃದಯಭಾಗದಲ್ಲಿರುವ ಕಟ್ಟಡಗಳನ್ನು ಧ್ವಂಸ ಮಾಡಿವೆ.
ಇರಾನ್ ಅನ್ನು ಎದುರಿಸಲು ಇಸ್ರೇಲ್ ಕೂಡ ಅತ್ಯಂತ ಮಾರಕ ಆಯುಧವನ್ನು ಬಳಸುತ್ತಿದೆ. ಇದನ್ನು ಸ್ಪಾಂಜ್ ಬಾಂಬ್ಗಳು ಎಂದು ಕರೆಯಲಾಗುತ್ತದೆ. ಇದನ್ನು ಇಸ್ರೇಲ್ನ ‘ಹೊಸ ರಹಸ್ಯ ಆಯುಧ’ ಎಂದು ಹೇಳಲಾಗುತ್ತದೆ. ಇದು ಒಂದು ರೀತಿಯ ರಾಸಾಯನಿಕ ಗ್ರೆನೇಡ್. ಇದರಲ್ಲಿ ಸ್ಫೋಟಕಗಳಿಲ್ಲ. ಆದರೆ, ಸುರಂಗ ಪ್ರವೇಶದ್ವಾರಗಳನ್ನು ಮುಚ್ಚಲು ಅಥವಾ ನಿರ್ಬಂಧಿಸಲು ಇದನ್ನು ಬಳಸಲಾಗುತ್ತದೆ.
ವರದಿಗಳ ಪ್ರಕಾರ, ಸ್ಪಾಂಜ್ ಬಾಂಬ್ಗಳನ್ನು ಸಾಮಾನ್ಯವಾಗಿ ರಕ್ಷಣಾತ್ಮಕ ಪ್ಲಾಸ್ಟಿಕ್ ಪಾತ್ರೆಯಲ್ಲಿ ಸಂಗ್ರಹಿಸಲಾಗುತ್ತದೆ. ಇದು ಎರಡು ವಿಭಿನ್ನ ರಾಸಾಯನಿಕ ದ್ರವಗಳನ್ನು ಬೇರ್ಪಡಿಸುವ ಲೋಹದ ತಡೆಗೋಡೆಯನ್ನು ಒಳಗೊಂಡಿದೆ. ಬಾಂಬ್ ಸಕ್ರಿಯಗೊಂಡ ತಕ್ಷಣ ಈ ರಾಸಾಯನಿಕ ದ್ರವಗಳು ಒಟ್ಟಿಗೆ ಮಿಶ್ರಣಗೊಳ್ಳುತ್ತವೆ. ಹೀಗಾಗಿ, ಅವು ಗಮ್ಯಸ್ಥಾನವನ್ನು ಗುರಿಯಾಗಿಸಿಕೊಂಡು ಪ್ಲೇಗ್ನಂತೆ ಹರಡುತ್ತವೆ. ಈ ವಿಧಾನವು ಶತ್ರು ಮೂಲಸೌಕರ್ಯವನ್ನು ನಿಷ್ಕ್ರಿಯಗೊಳಿಸಬಹುದು ಎಂದು ತಜ್ಞರು ಹೇಳುತ್ತಾರೆ.