ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ಪ್ರಹಾರ: ಜೆರುಸಲೇಂನಲ್ಲಿ ಮೊಳಗಿದ ಸೈರನ್; ಸರಣಿ ಸ್ಫೋಟದ ಸದ್ದು

ಜೆರುಸಲೆಮ್: ಇರಾನ್ ನಿಂದ ಉಡಾಯಿಸಲಾದ ಕ್ಷಿಪಣಿಗಳು ಜೆರುಸಲೆಮ್ ನಗರದ ಮೇಲೆ ನೇರ ದಾಳಿ ನಡೆಸಿವೆ ಎಂದು Aljazeera ವರದಿ ಮಾಡಿದೆ.
ಇರಾನ್ನಿಂದ ಇಸ್ರೇಲ್ ಕಡೆಗೆ ಕ್ಷಿಪಣಿಗಳು ಹಾರಿಸಲ್ಪಟ್ಟಿರುವುದನ್ನು ಇಸ್ರೇಲ್ ಸೇನೆ ಪತ್ತೆಹಚ್ಚಿದ ಬಳಿಕ ಪಶ್ಚಿಮ ಜೆರುಸಲೆಮ್ ನಲ್ಲಿ ವಾಯುದಾಳಿ ಎಚ್ಚರಿಕಾ ಸೈರನ್ಗಳು ಮೊಳಗಿದವು. ಇದಾದ ನಂತರ ನಗರದಲ್ಲಿ ಜೋರಾಗಿ ಸರಣಿ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ವರದಿಯಾಗಿದೆ.
“ಸ್ವಲ್ಪ ಸಮಯದ ಹಿಂದೆ, ಇರಾನ್ ನಿಂದ ಇಸ್ರೇಲ್ ಕಡೆಗೆ ಉಡಾಯಿಸಲಾದ ಕ್ಷಿಪಣಿಗಳನ್ನು ನಾವು ಗುರುತಿಸಿದ್ದೇವೆ,’ ಎಂದು ಇಸ್ರೇಲ್ ಸೇನೆ ಹೇಳಿಕೆಯಲ್ಲಿ ತಿಳಿಸಿದೆ. “ಅಪಾಯವನ್ನು ತಡೆಯಲು ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ,” ಎಂದು ಸೇನೆ ಸ್ಪಷ್ಟಪಡಿಸಿದೆ.
ಸೈರನ್ ಗಳು ಮೊಳಗುತ್ತಿದ್ದಂತೆಯೇ ನಾಗರಿಕರು ಸುರಕ್ಷಿತ ಆಶ್ರಯ ಸ್ಥಳಗಳಿಗೆ ತೆರಳುವಂತೆ ಹಾಗೂ ಮುಂದಿನ ಸೂಚನೆ ಸಿಗುವವರೆಗೆ ಅಲ್ಲೇ ಉಳಿಯುವಂತೆ ಇಸ್ರೇಲಿ ಸೇನೆ ಮನವಿ ಮಾಡಿದೆ. ಪಶ್ಚಿಮ ಜೆರುಸಲೆಮ್ ನ ಹಲವು ಭಾಗಗಳಲ್ಲಿ ಸ್ಫೋಟಗಳ ಸರಣಿ ಕೇಳಿಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
