ದೇವಾಲಯದಲ್ಲಿ ಇಸ್ಲಾಂ ಧರ್ಮ ಪ್ರಚಾರ- ಪ್ರಚಾರ ಅಪರಾಧವಲ್ಲ ಎಂದ ಹೈಕೋರ್ಟ್

ಬೆಂಗಳೂರು – ಜಮಖಂಡಿ ನಗರದ ರಾಮತೀರ್ಥ ದೇವಾಲಯದಲ್ಲಿ ಇಸ್ಲಾಂ ಧರ್ಮದ ಪ್ರಚಾರ ಮಾಡುತ್ತಾ ಕರಪತ್ರಗಳನ್ನು ಹಂಚುತ್ತಿದ್ದ 3 ಮುಸಲ್ಮಾನರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ.

- ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವೆಂಕಟೇಶ ನಾಯಕ್ ಅವರು ಈ ಪ್ರಕರಣದಲ್ಲಿ ಯಾವುದೇ ವ್ಯಕ್ತಿ ಮತಾಂತರದ ನೇರ ಬಲಿಪಶುವಾಗಿದ್ದಾರೆ ಅಥವಾ ಅವರ ಮೇಲೆ ಒತ್ತಡ ಹೇರಲಾಗಿದೆ ಎಂದು ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕರಣದಲ್ಲಿ ಹೇಳಿರುವ ಮಾಹಿತಿ ನಿಜವೆಂದು ಪರಿಗಣಿಸಿದರೂ, ಈ ಮುಸಲ್ಮಾನರು ದೇವಾಲಯದಲ್ಲಿ ಯಾರನ್ನೂ ಬಲವಂತವಾಗಿ ಅಥವಾ ಒತ್ತಡಕ್ಕೆ ಸಿಲುಕಿಸಿ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಒತ್ತಾಯಿಸಿಲ್ಲ. ಆದ್ದರಿಂದ, ಅವರ ವಿರುದ್ಧ ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲು ಆಧಾರವಿಲ್ಲ ಮತ್ತು ಅದಕ್ಕಾಗಿಯೇ ಪ್ರಕರಣವನ್ನು ರದ್ದುಗೊಳಿಸಲಾಗುತ್ತಿದೆ.
- ದೂರಿನ ಪ್ರಕಾರ, ಮೂವರು ಆರೋಪಿಗಳು ಇಸ್ಲಾಂ ಧರ್ಮವನ್ನು ಹೊಗಳುತ್ತಿದ್ದರು ಮತ್ತು ಹಿಂದೂ ಧರ್ಮದ ಬಗ್ಗೆ ಕೆಟ್ಟ ಪದಗಳನ್ನು ಬಳಸುತ್ತಿದ್ದರು. ಅಷ್ಟೇ ಅಲ್ಲದೆ, ಇಸ್ಲಾಂ ಸ್ವೀಕರಿಸಿದರೆ ದುಬೈನಲ್ಲಿ ಕೆಲಸ ಮತ್ತು ವಾಹನಗಳನ್ನು ನೀಡುವುದಾಗಿ ಆಮಿಷವೊಡ್ಡಿದ್ದರು ಎಂದು ಆರೋಪಿಸಲಾಗಿತ್ತು. ಅವರ ವಿರುದ್ಧ ಕರ್ನಾಟಕದ ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಂಧನದ ನಂತರ ಈ ಮೂವರು ಉಚ್ಚ ನ್ಯಾಯಾಲಯಕ್ಕೆ ಪ್ರಕರಣ ರದ್ದುಪಡಿಸುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ನ್ಯಾಯಾಲಯವು ಒಪ್ಪಿಕೊಂಡಿದೆ.
