ದೆಹಲಿಯಲ್ಲಿ ಐಸಿಸ್ ಉಗ್ರರ ಸೆರೆ: ಬಾಂಬ್ ತಯಾರಿಕಾ ಘಟಕ ಪತ್ತೆ, ಐವರು ಬಂಧನ

ನವದೆಹಲಿ: ದೆಹಲಿ ಪೊಲೀಸರ ವಿಶೇಷ ಘಟಕವು ದೆಹಲಿಯಲ್ಲಿ ಐಸಿಸ್‌ಗೆ (ISIS) ಸಂಬಂಧಿಸಿದ ಐವರು ಶಂಕಿತ ಉಗ್ರರನ್ನು ಬಂಧಿಸಿದೆ. ಹಾಗೇ, ಆ ಸ್ಥಳದಲ್ಲಿ ಅಧಿಕಾರಿಗಳು ಸೋಡಿಯಂ ಬಯೋಕಾರ್ಬೊನೇಟ್, ಸರ್ಕ್ಯೂಟ್‌ಗಳು, ಸ್ಟ್ರಿಪ್‌ನಂತಹ ಎಲೆಕ್ಟ್ರಾನಿಕ್ ಘಟಕಗಳನ್ನು ಹೊಂದಿರುವ ಪೆಟ್ಟಿಗೆಯನ್ನು ಸಹ ಪತ್ತೆಹಚ್ಚಿದ್ದಾರೆ. ಬಯೋಕಾರ್ಬೊನೇಟ್ ಅನ್ನು ಸುಧಾರಿತ ಸ್ಫೋಟಕ ಸಾಧನಗಳನ್ನು (IED) ತಯಾರಿಸಲು ಬಳಸಲಾಗುತ್ತದೆ. ಈ ಬಾಂಬ್ ತಯಾರಿಕಾ ಘಟಕವನ್ನು ಕೂಡ ಪೊಲೀಸರು ಪತ್ತೆಹಚ್ಚಿ ಅಲ್ಲಿರುವ ವಸ್ತುಗಳ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಶಂಕಿತ ಉಗ್ರರಿಂದ ವೈರ್‌ಗಳು, ಡಯೋಡ್‌ಗಳು, ಮದರ್‌ಬೋರ್ಡ್ ಮತ್ತು ಉಸಿರಾಟದ ಮಾಸ್ಕ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಪೊಲೀಸರು ಕೇಂದ್ರ ಗುಪ್ತಚರ ಸಂಸ್ಥೆಗಳ ಜೊತೆ ಜಂಟಿಯಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಐಸಿಸ್ ಪ್ರೇರಿತ ಶಂಕಿತ ಭಯೋತ್ಪಾದಕ ಮಾಡ್ಯೂಲ್ ಅನ್ನು ಪತ್ತೆಹಚ್ಚಿದ್ದಾರೆ. ಈ ಐವರ ಪೈಕಿ ಮೊದಲ ಬಂಧನ ದಕ್ಷಿಣ ದೆಹಲಿಯಲ್ಲಿ ನಡೆದಿದ್ದು, ಆ ಆರೋಪಿಯನ್ನು ಅಫ್ತಾಬ್ ಎಂದು ಗುರುತಿಸಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ (ವಿಶೇಷ ಘಟಕ) ಪ್ರಮೋದ್ ಕುಶ್ವಾಹ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಇದರ ನಂತರ ಇತರ ರಾಜ್ಯಗಳಲ್ಲಿ ದಾಳಿ ನಡೆಸಲಾಯಿತು. ನಂತರ ದೆಹಲಿ ಪೊಲೀಸರ ವಿಶೇಷ ಘಟಕ ಮತ್ತು ಜಾರ್ಖಂಡ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ರಾಂಚಿಯ ಲೋವರ್ ಬಜಾರ್ ಪ್ರದೇಶದಿಂದ ಐಸಿಸ್‌ಗೆ ಸಂಬಂಧಿಸಿದ ಶಂಕಿತ ಕಾರ್ಯಕರ್ತ ಆಶರ್ ಡ್ಯಾನಿಶ್ ಎಂಬ ವ್ಯಕ್ತಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ಸಮಯದಲ್ಲಿ, ಪೊಲೀಸರು ಶಸ್ತ್ರಾಸ್ತ್ರಗಳು, ಸ್ಫೋಟಕಗಳನ್ನು ತಯಾರಿಸಲು ಬಳಸಬಹುದೆಂದು ಶಂಕಿಸಲಾದ ರಾಸಾಯನಿಕಗಳು ಮತ್ತು ಹಲವಾರು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡರು. ಲ್ಯಾಪ್‌ಟಾಪ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಅವುಗಳನ್ನು ವಿಧಿವಿಜ್ಞಾನ ಮತ್ತು ತಾಂತ್ರಿಕ ಪರೀಕ್ಷೆಗೆ ಕಳುಹಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಪ್ರಾಥಮಿಕ ತನಿಖೆಯು ಡ್ಯಾನಿಶ್ ಒಂದು ಪ್ರಮುಖ ಪಿತೂರಿಗೆ ಸಕ್ರಿಯವಾಗಿ ತಯಾರಿ ನಡೆಸುತ್ತಿದ್ದ ಎಂದು ಸುಳಿವು ನೀಡಿದೆ. ದೆಹಲಿಯಲ್ಲಿ ಅವನ ವಿರುದ್ಧ ಈಗಾಗಲೇ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು.
ಪೊಲೀಸರ ಜಂಟಿ ತಂಡವು ಜಾರ್ಖಂಡ್‌ನ ಪಲಾಮು ಜಿಲ್ಲೆಯಲ್ಲಿಯೂ ದಾಳಿ ನಡೆಸಿ, ಮತ್ತೊಬ್ಬ ಶಂಕಿತನನ್ನು ವಿಚಾರಣೆಗಾಗಿ ಬಂಧಿಸಿದೆ. ಉಳಿದ ಮೂವರು ಭಯೋತ್ಪಾದಕರನ್ನು ಅಶರ್, ಅಫ್ತಾಬ್ ಮತ್ತು ಸುಫಿಯಾನ್ ಎಂದು ಗುರುತಿಸಲಾಗಿದೆ. ಸ್ಫೋಟಕಗಳಿಗೆ ಸಂಬಂಧಿಸಿದ ವಸ್ತುಗಳು ಮತ್ತು ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳು ಭಯೋತ್ಪಾದಕ ಸಂಘಟನೆಯ ಸ್ಲೀಪರ್ ಮಾಡ್ಯೂಲ್‌ನ ಭಾಗವಾಗಿದ್ದರು. ಬಾಂಬ್‌ಗಳನ್ನು ತಯಾರಿಸುವುದು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ಮತ್ತು ಸಂಘಟನೆಯ ಬಲವನ್ನು ಹೆಚ್ಚಿಸುವ ಕಾರ್ಯವನ್ನು ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ.
ದೆಹಲಿ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ತೆಲಂಗಾಣದಲ್ಲಿ ಬಂಧನಗಳು ನಡೆದಿವೆ. ಮುಂಬೈ ನಿವಾಸಿಗಳಾದ ಅಫ್ತಾಬ್ ಮತ್ತು ಅಬು ಸುಫಿಯಾನ್ ಅವರನ್ನು ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆಶರ್ ಡ್ಯಾನಿಶ್ ಅವರನ್ನು ರಾಂಚಿಯಿಂದ ಬಂಧಿಸಲಾಗಿದೆ. ಕಮ್ರಾನ್ ಖುರೇಷಿ ಅವರನ್ನು ಮಧ್ಯಪ್ರದೇಶದ ರಾಜ್‌ಗಢದಿಂದ ಮತ್ತು ಹುಜೈಫ್ ಯೆಮೆನ್ ಅವರನ್ನು ತೆಲಂಗಾಣದಿಂದ ಬಂಧಿಸಲಾಗಿದೆ. ಈ ಭಯೋತ್ಪಾದಕರು ಪಾಕಿಸ್ತಾನದಲ್ಲಿರುವ ತಮ್ಮ ನಿರ್ವಾಹಕರೊಂದಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
