ಐಸಿಸ್ ಪ್ರೇರಿತ ಮೂಲಭೂತವಾದಿ ಬಾಲಕ ವಶ, ಸಹಚರ ಶಹನವಾಜ್ ಬಂಧನ!

ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಐಸಿಸ್ ಮತ್ತು ಜೈಶ್-ಎ-ಮೊಹಮ್ಮದ್ ಹಾಗೂ ಲಷ್ಕರ್-ಎ-ತಯ್ಯಬಾ ಸಂಘಟನೆಗಳಿಂದ ಪ್ರಚೋದನೆಗೊಂಡು ಮೂಲಭೂತವಾದಿಯಾಗಿ ಕೆಲಸ ಮಾಡುತ್ತಿದ್ದ ಕೆಜಿಎಫ್ ಮೂಲದ 15 ವರ್ಷದ ಬಾಲಕನನ್ನು ವಶಕ್ಕೆ ಪಡೆದಿರುವ ಕೇಂದ್ರದ ತನಿಖಾ ಸಂಸ್ಥೆಗಳು ಮತ್ತು ರಾಜ್ಯದ ಗುಪ್ತಚರ ಅಧಿಕಾರಿಗಳು, ಆತನಿಗೆ ನೆರವು ನೀಡಿದ ಬೆಂಗಳೂರಿನ ಶಹನವಾಜ್ ಎಂಬಾತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಾಲಕನು ಆತ್ಮಾಹುತಿ ದಾಳಿ, ಜೆಹಾದ್ ಬಗ್ಗೆ ಶೋಧಿಸಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಮೂಲದ ಬಾಲಕನಿಂದ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಪರಿಶೀಲಿಸಿದಾಗ ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆಯಪ್‌ಗಳನ್ನು ಬಳಸುತ್ತಿದ್ದ. ಒಂದು ಮೊಬೈಲ್‌ನಲ್ಲಿ ಬೇಸ್ಡ್ ಖಲೀಫ್, ಬೇಸ್ಡ್ ಖಲೀಫ್-72, ಮುಸ್ಲಿಂ ಎಕ್ಸ್ ಖಲೀಫ್, ಖಲೀಫ್ ಭಗವಾನ್, ಝೋಯ್ ರೂಲ್ಸ್, ಖಲೀಫ್ ರಿಟರ್ನ್ಸ್ ಎಂಬ ಇನ್‌ಸ್ಟಾಗ್ರಾಂ ಖಾತೆಗಳನ್ನು ಹೊಂದಿದ್ದಾನೆ ಎಂಬುದು ಗೊತ್ತಾಗಿದೆ.
ವಿವಿಧ ಗ್ರೂಪ್‌ಗಳ ಸಂದೇಶ ರವಾನೆ
ಜಸ್ಬಾತಿ ಜೆಹಾದಿ, ಟೀಂ ಬೇಸ್ಡ್, ಲಷ್ಕರ್ ಅಡ್ಮಿನ್ ಎಂಬ ಗ್ರೂಪ್ ಗಳಿಗೆ ಬಿಹಾರ ಮೂಲದ ಮಿಸ್ಟರ್ ಖುರೇಷಿ ಎಂಬಾತ ಸಂದೇಶ ಕಳುಹಿಸುತ್ತಿದ್ದ. ನಂತರ ಜಸ್ಬಾತಿ ಜೆಹಾದ್ ಗ್ರೂಪ್‌ನ ಅಡ್ಮಿನ್‌ಗಳಾದ ಮುಂಬಯಿಯ ಗುಲ್ಜಾರ್, ಖೀಲ್ಜಿ ಎಂಬವರೂ ಇದೇ ಗ್ರೂಪ್‌ಗಳಿಗೆ ಸಂದೇಶ ಕಳುಹಿಸುತ್ತಿದ್ದರು. ಅನಂತರ ಬಿಹಾರ ಮೂಲದ ಸಲಾವುದ್ದೀನ್ ಅಲಿಯಾಸ್ ರಾಶಿ ಆಲಂ ಎಂಬಾತ ಕೂಡ ಈ ಗ್ರೂಪ್‌ಗಳಿಗೆ ಸಂದೇಶ ಕಳುಹಿಸುತ್ತಿದ್ದರು.
ಈ ಗ್ರೂಪ್‌ಗಳನ್ನು ಫಾಲೋ ಮಾಡುತ್ತಿದ್ದ ಬಾಲಕನು ಅವುಗಳನ್ನು ಗಮನಿಸಿ ತಾನೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಖಾತೆಗಳನ್ನು ತೆರೆದು ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಕೆಲವೊಂದು ಗ್ರೂಪ್‌ಗಳಿಗೆ ಕಳುಹಿಸುತ್ತಿದ್ದೆ. ಜತೆಗೆ ಹೆಚ್ಚಾಗಿ ಡೆಮಾಕ್ರಸಿ, ಸೆಕ್ಯೂಲರಿಸಂ, ಎಕ್ಸ್‌ಟ್ರೀಂ ಬಗ್ಗೆ ರೀ ಟ್ವೀಟ್ ಮಾಡಿ ಸಂದೇಶ ಕಳುಹಿಸುತ್ತಿದ್ದೆ ಎಂದು ವಿಚಾರಣೆ ವೇಳೆ ಮಾಹಿತಿ ನೀಡಿದ್ದಾನೆಂದು ತಿಳಿದುಬಂದಿದೆ.
ಮತ್ತೊಂದು ಮೊಬೈಲ್‌ನಲ್ಲಿ ರನ್ ಜಿವ್ ರನ್, ಜೈಶ್ ಎ-ಮೊಹಮ್ಮದ್ ಸಂಘಟನೆ ನಾಯಕ ಮೌಲಾನಾ ಮಸೂದ್ ಆಜಾದ್‌ನ ಭಾವಚಿತ್ರ ಮತ್ತು ಆತನ ಭಾಷಣಗಳ ವೀಡಿಯೋ ಪತ್ತೆಯಾಗಿದೆ. ಈ ಮೊಬೈಲ್‌ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರ್‍ಯಾಂಡಂ ಸೇನಾದಲ್ಲಿನ ಸದಸ್ಯರನ್ನು ಕೊಲ್ಲುವ ಉದ್ದೇಶದಿಂದ ಪ್ರೊಫೈಲ್ ಡೌನ್‌ಲೋಡ್ ಮಾಡುತ್ತಿದ್ದ. ಟೆಲಿಗ್ರಾಂ ಖಾತೆಯಲ್ಲಿ ಒಸಾಮಾ ಬಿನ್ ಲಾಡೆನ್ ಅವರ ಜೆಹಾದಿ ಉಗ್ರವಾದಿ ಮತ್ತು ಅಲ್‌ಖೈದಾ ಸಂಘಟನೆಗೆ ಸಂಬಂಧಿಸಿದ ವೀಡಿಯೋಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಸಿಗ್ನಲ್ ಆಯಪ್ ಬಳಕೆ
ಈ ಬಾಲಕ ಸಿಗ್ನಲ್ ಆಯಪ್ ಕೂಡ ಬಳಸುತ್ತಿದ್ದ ಎಂಬುದು ಗೊತ್ತಾಗಿದೆ. ಈ ಆಯಪ್‌ನಲ್ಲಿ ಎಕ್ಸಿಮೈನಿಂಗ್ ಐಸಿಸ್ ಸಪೋರ್ಟ್ ಆಯಂಡ್ ಅಪೋಸಿಷನ್ ನೆಟ್‌ವರ್ಕ್ ಆನ್ ಟ್ವಿಟರ್ ಜೆ ಎಂಬ ಗ್ರೂಪ್ ಕಂಡು ಬಂದಿದೆ. ಜತೆಗೆ ಫೈವ್ ಪಿಲ್ಲರ್ ಆಫ್ ಇಸ್ಲಾಂ ಎಂಬ ಆತ್ಮಾಹುತಿ ದಾಳಿ ಮತ್ತು ಜೆಹಾದ್ ಬಗ್ಗೆ ಉಲ್ಲೇಖವಿದೆ.
ಆರ್ಥಿಕ ಸಹಾಯ ಮಾಡಿದ್ದ ಶಹನವಾಜ್
ಶಹನವಾಜ್ ಎಂಬಾತ ಬಾಲಕನ ಪೋಸ್ಟ್‌ಗಳನ್ನು ಗಮನಿಸಿ ಸಾಮಾಜಿಕ ಜಾಲತಾಣದಲ್ಲಿ ಆತನನ್ನು ಸಂಪರ್ಕಿಸಿದ್ದಾನೆ. ಅಲ್ಲದೆ ಆತನನ್ನು ಬೆಂಗಳೂರಿಗೆ ಕರೆಸಿಕೊಂಡು ಭೇಟಿಯಾಗಿದ್ದ. ವಿಶೇಷವೆಂದರೆ ಕೆಜಿಎಫ್ನಿಂದ ಬೆಂಗಳೂರಿಗೆ ಬರಲು ಕಾರು ಬುಕ್ ಮಾಡಿದ್ದು, ಆ ಪ್ರಯಾಣ ದರವನ್ನು ಶಹನವಾಜ್ ಭರಿಸಿದ್ದ ಎಂದು ಮೂಲಗಳು ತಿಳಿಸಿವೆ.