ಭಾರತ ವಿರುದ್ಧದ T20 ಸರಣಿಯಿಂದ ಗ್ಲೆನ್ ಮ್ಯಾಕ್ಸ್‌ವೆಲ್ ಹೊರಕ್ಕೆ?

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳು ಹಾಗೂ ಐದು ಟಿ20 ಮ್ಯಾಚ್ಗಳು ಜರುಗಲಿದೆ. ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್ರೌಂಡರ್ ಕಾಣಿಸಿಕೊಳ್ಳುವುದು ಅನುಮಾನ.

ಆಸ್ಟ್ರೇಲಿಯಾ ತಂಡದ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಗಾಯಗೊಂಡಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಸರಣಿಗೂ ಮುನ್ನ ಅಭ್ಯಾಸ ನಡೆಸುತ್ತಿದ್ದ ವೇಳೆ ಮ್ಯಾಕ್ಸಿ ಅವರ ಮುಂಗೈ ಮುರಿತಕ್ಕೊಳಗಾಗಿದ್ದು, ಹೀಗಾಗಿ ಕಿವೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ.
ಆಸ್ಟ್ರೇಲಿಯಾ ಹಾಗೂ ನ್ಯೂಝಿಲೆಂಡ್ ನಡುವಣ ಟಿ20 ಸರಣಿಯು ಸೆಪ್ಟೆಂಬರ್ 30 ರಿಂದ ಶುರುವಾಗಲಿದೆ. ಅಕ್ಟೋಬರ್ 4 ರಂದು ಮುಗಿಯಲಿರುವ ಈ ಸರಣಿಯ ಬಳಿಕ ಆಸೀಸ್ ಪಡೆ ಭಾರತದ ವಿರುದ್ಧ ಸರಣಿ ಆಡಲಿದೆ. ಟೀಮ್ ಇಂಡಿಯಾ ವಿರುದ್ಧ ಈ ಸರಣಿಯಲ್ಲಿ ಮೂರು ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಬೇಕಿದೆ.
ಇದೀಗ ಗಂಭೀರವಾಗಿ ಗಾಯಗೊಂಡಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತದ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅದರಂತೆ ಆಸ್ಟ್ರೇಲಿಯಾ ತಂಡದ ಮುಂದಿನ 8 ಟಿ20 ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.
ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಸರಣಿ ಮುಗಿಯುವುದು ನವೆಂಬರ್ 2 ರಂದು. ಈ ಸರಣಿಯ ಬಳಿಕ, ಅಂದರೆ ಫೆಬ್ರವರಿಯಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಅದಕ್ಕೂ ಮುನ್ನ ಗ್ಲೆನ್ ಮ್ಯಾಕ್ಸ್‌ವೆಲ್ ಸಂಪೂರ್ಣವಾಗಿ ಚೇತರಿಸಿಕೊಂಡರೆ ಮಾತ್ರ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕದನದಲ್ಲಿ ಕಣಕ್ಕಿಳಿಯಲಿದ್ದಾರೆ.
ನ್ಯೂಝೀಲೆಂಡ್ ಸರಣಿಗೆ ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಶಾನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮ್ಯಾಟ್ ಕುಹ್ನೆಮನ್, ಮಿಚೆಲ್ ಓವನ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಝಂಪಾ, ಗ್ಲೆನ್ ಮ್ಯಾಕ್ಸ್‌ವೆಲ್ (ಅಲಭ್ಯ).