ಸುದೀಪ್ ಅನುಪಸ್ಥಿತಿಗೆ ‘ಕ್ರೇಜಿಸ್ಟಾರ್’ ರವಿಚಂದ್ರನ್ ಪ್ಲಾನ್ ಇತ್ತಾ? ಬಿಗ್ ಬಾಸ್ ಕನ್ನಡದ ಗುಟ್ಟು ರಟ್ಟು!

ಬಿಗ್ ಬಾಸ್ ಕನ್ನಡ ಸೀಸನ್ 12 ಅನ್ನು ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಾರಾ? ಇಲ್ವಾ? ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗಿದೆ. ಮತ್ತೆ ಬಿಗ್ ಬಾಸ್ಗೆ ಕಾಲಿಡುವುದಿಲ್ಲ ಎನ್ನುತ್ತಲೇ ಕಲರ್ಸ್ ಕನ್ನಡದ ಒತ್ತಡಕ್ಕೆ ಕಿಚ್ಚ ಸುದೀಪ್ ಮಣಿದಿದ್ದಾರೆ. ತಮ್ಮ ಹಾಗೂ ಕಲರ್ಸ್ ಕನ್ನಡದ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳು ಇದ್ದಿದ್ದನ್ನು ಸ್ವತ: ಸುದೀಪ್ ಅವರೇ ಒಪ್ಪಿಕೊಂಡಿದ್ದಾರೆ.

ಅದನ್ನು ಹೇಗೆ ಸರಿಪಡಿಸಲಾಯಿತೆಂದೂ ವೇದಿಕೆಯಲ್ಲಿ ವಿವರಿಸಿದ್ದರು.
ಹೀಗಾಗಿ ಇಷ್ಟು ದಿನ ವೀಕ್ಷಕರಲ್ಲಿ ಇದ್ದ ಗೊಂದಲ ಈಗಾಗಲೇ ತೆರೆ ಬಿದ್ದಿದೆ. ಅದೇ ಒಂದು ವೇಳೆ ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡದ ಮಧ್ಯೆ ಹೊಂದಾಣೆ ಆಗದೇ ಹೋಗಿದ್ದರೆ? ಕಿಚ್ಚ ಸುದೀಪ್ ಖಡಾ ಖಂಡಿತವಾಗಿ ನಿರೂಪಣೆ ಮಾಡುವುದಕ್ಕೆ ಒಪ್ಪದೇ ಹೋಗಿದ್ದರೆ? ಇಂತಹ ಹತ್ತು ಹಲವು ಪ್ರಶ್ನೆಗಳು ಈಗಲೂ ವೀಕ್ಷಕರನ್ನು ಕಾಡುತ್ತಲೇ ಇವೆ. ಈ ಗ್ಯಾಪ್ನಲ್ಲಿ ಕಿರುತೆರೆ ಲೋಕದಲ್ಲಿ ಹೊಸದೊಂದು ಸುದ್ದಿ ಗುಲ್ಲೆದ್ದಿದೆ.
ಕಿಚ್ಚ ಸುದೀಪ್ ಮತ್ತೆ ನಿರೂಪಣೆ ಮಾಡುವುದಿಲ್ಲ ಎಂದು ಬಿಗ್ ಬಾಸ್ ಕನ್ನಡ 11ಕ್ಕೆ ಅಂತ್ಯ ಹಾಡಿದ್ದರು. ಕಿಚ್ಚನ ಈ ನಿರ್ಧಾರ ಕಲರ್ಸ್ ಕನ್ನಡಕ್ಕೆ ತಲೆ ನೋವಾಗಿತ್ತು. ಹಾಗೇ ಕಿಚ್ಚನನ್ನು ಒಪ್ಪಿಸುವ ಧೃಡ ವಿಶ್ವಾಸವೂ ಇತ್ತು ಎಂದು ಹೇಳಲಾಗಿದೆ. ಆದರೂ, ಒಂದು ವೇಳೆ ಸುದೀಪ್ ಖಡಾ ಖಂಡಿತವಾಗಿ ಒಪ್ಪದೇ ಹೋದಲ್ಲಿ ಬದಲಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಿತ್ತು. ಅದಕ್ಕೆ ಕನ್ನಡ ಚಿತ್ರರಂಗದ ದಿಗ್ಗಜರನ್ನು ಆಯ್ಕೆಯಾಗಿ ಇಟ್ಟುಕೊಂಡಿದ್ದರು. ಇಂತಹದ್ದೊಂದು ಸುದ್ದಿ ಕಿರುತೆರೆ ವಲಯದಲ್ಲಿ ಚರ್ಚೆಯಾಗುತ್ತಿದೆ.
“ಬಿಗ್ ಬಾಸ್ ನಿರೂಪಣೆ ಮಾಡಲು ಕಿಚ್ಚ ಸುದೀಪ್ ಬಿಟ್ಟು ಬೇರೆಯವರನ್ನು ಯೋಚಿಸುವುದಕ್ಕೂ ಹೋಗಿಲ್ಲ. ಅದು ನಮ್ಮ ತಲೆಯಲ್ಲಿಯೇ ಇರಲಿಲ್ಲ” ಎಂದು ಕಲರ್ಸ್ ಕನ್ನಡದ ಮುಖ್ಯಸ್ಥ ಪ್ರಶಾಂತ್ ನಾಯಕ್ ಪತ್ರಿಕಾ ಗೋಷ್ಠಿಯಲ್ಲಿಯೇ ಸ್ಪಷ್ಟ ಪಡಿಸಿದ್ದಾರೆ. ಹೀಗಿದ್ದರೂ ಬಿಗ್ ಬಾಸ್ ಕನ್ನಡ 12 ಅನೌನ್ಸ್ ಆಗುತ್ತಿದ್ದಂತೆ ಕಿರುತೆರೆಯ ಗಲ್ಲಿಯಲ್ಲಿ ಇಂಟ್ರೆಸ್ಟಿಂಗ್ ವಿಷಯದ ಬಗ್ಗೆ ಗುಸು ಗುಸು ಶುರುವಾಗಿದೆ. ಅದೇನಪ್ಪಾ ಅಂದರೆ, ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ 12 ರ ನಿರೂಪಣೆ ಮಾಡೋದೇ ಇಲ್ಲ ಎಂದಾಗ ಬದಲಿಗಾಗಿ ಚರ್ಚೆ ನಡೆದಿತ್ತು. ಒಂದು ವೇಳೆ ಸುದೀಪ್ ಒಪ್ಪದಿದ್ದರೆ, ಬೇರೆ ಯಾವ ನಟ ಸೂಟ್ ಆಗಬಹುದೆಂದು ಅಂದಿನ ಬಿಗ್ ಬಾಸ್ ತಂಡ ಚರ್ಚೆ ಮಾಡಿತ್ತು ಎನ್ನಲಾಗಿದೆ.
ಆದರೆ, ಈಗ ಬಿಗ್ ಬಾಸ್ ಕನ್ನಡ 11ರ ತಂಡದ ಬಹುತೇಕ ಸದಸ್ಯರು ಇಲ್ಲ ಎಂದೂ ಹೇಳಲಾಗುತ್ತಿದೆ. ಅವರೆಲ್ಲರೂ ಪರಮೇಶ್ವರ್ ಗುಂಡ್ಕಲ್ ಮುನ್ನಡೆಸುತ್ತಿರುವ ಉದಯ ಟಿವಿಗೆ ಸೇರಿಕೊಂಡಿದ್ದಾರೆಂಬ ಸುದ್ದಿಯಿದೆ. ಈ ತಂಡ ಆರಂಭದ ದಿನಗಳಲ್ಲಿ ಕಿಚ್ಚ ಸುದೀಪ್ ಒಂದು ವೇಳೆ ಒಪ್ಪದೇ ಹೋದರೆ, ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಕೈಯಲ್ಲಿ ನಿರೂಪಣೆ ಮಾಡಿಸಬಹುದು ಎಂದು ಚರ್ಚೆ ಮಾಡಿತ್ತಂತೆ. ಅದಕ್ಕೆ ಒಂದು ಪ್ರೋಮೊ ಲೈನ್ ಅನ್ನೂ ಸಿದ್ಧಪಡಿಸಿಕೊಂಡಿತ್ತು ಎಂಬ ಸುದ್ದಿನೂ ಇದೆ.
‘ಮಾಣಿಕ್ಯ’ ಸಿನಿಮಾದ ಒಂದು ಡೈಲಾಗ್ ಅನ್ನೇ ಇಟ್ಟುಕೊಂಡು ಬಿಗ್ ಬಾಸ್ ಕನ್ನಡ 12ರ ಸಂಚಿಕೆಯನ್ನು ಶುರು ಮಾಡಿದರೆ ಹೇಗೆ ಎಂಬ ಆಲೋಚನೆಯನ್ನೂ ಮಾಡಿತ್ತಂತೆ. ‘ಮಾಣಿಕ್ಯ’ದಲ್ಲಿ ಅಪ್ಪ – ಮಗನ ಸಂಬಂಧ ಇರುವಂತೆ ಸ್ಟೇಜ್ ಮೇಲೆ ಪರಿಚಯ ಮಾಡಲು ನಿರ್ಧರಿಸಿತ್ತು. ಇದೆಲ್ಲವೂ ಕಿಚ್ಚ ಸುದೀಪ್ ಒಪ್ಪದೇ ಇದ್ದರೆ ಮಾತ್ರ ಅಂತ ಹೇಳಲಾಗುತ್ತಿದೆ. ಬಿಗ್ ಬಾಸ್ ಕನ್ನಡ 12ಕ್ಕೆ ಕಿಚ್ಚ ಸುದೀಪ್ ನಿರೂಪಣೆ ಮಾಡೋದು ಕನ್ಫರ್ಮ್ ಆಗುತ್ತಿದ್ದಂತೆ ಇಂತಹದ್ದೊಂದು ಸುದ್ದಿ ಕಿರುತೆರೆ ಪ್ರಪಂಚದಲ್ಲಿ ಓಡಾಡುತ್ತಿದೆ. ಹಾಗಿದ್ದರೆ, ಈ ಸುದ್ದಿ ನಿಜವೇ? ಎಂದು ಕೇಳಿದರೆ, ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಯಾರ ಬಳಿಯೂ ಇಲ್ಲ.
ಕಿಚ್ಚ ಸುದೀಪ್ ಸ್ಥಾನದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಿಂತಿದ್ದರೆ, ಬಿಗ್ ಬಾಸ್ ಕನ್ನಡ 12 ಹೇಗಿರುತ್ತಿತ್ತು ಅನ್ನೋದನ್ನು ಕಲ್ಪನೆ ಮಾಡಿಕೊಳ್ಳಿ. ಕ್ರೇಜಿಸ್ಟಾರ್ ಬಿಗ್ ಬಾಸ್ ಮನೆಯೊಳಗೆ ಇದ್ದ ಸ್ಪರ್ಧಿಗಳನ್ನು ಹೇಗೆ ಹ್ಯಾಂಡಲ್ ಮಾಡುತ್ತಿದ್ದರು? ಅವರ ಪಂಚಿಂಗ್ ಡೈಲಾಗ್ ಹೇಗಿರುತ್ತಿತ್ತು? ಕಾಮಿಡಿ ಪಂಚ್ ಹೇಗಿರುತ್ತಿತ್ತು? ಇದು ಈಗ ನಿಮ್ಮ ಕಲ್ಪನೆಗೆ ಬಿಟ್ಟಿದ್ದಷ್ಟೇ. ಆದರೆ, ಇಂತಹದ್ದೊಂದು ಚರ್ಚೆ ಆಗಿತ್ತು ಅನ್ನೋದು ರವಿಚಂದ್ರನ್ಗೂ ಗೊತ್ತಿರುವುದಕ್ಕೆ ಸಾಧ್ಯವಿಲ್ಲ ಎನಿಸುತ್ತಿದೆ.
