ಡಮಾಸ್ಕಸ್ ಚರ್ಚ್ ಮೇಲೆ ಐಎಸ್ ದಾಳಿ – 15 ಸಾವು

ಡಮಾಸ್ಕಸ್: ರವಿವಾರ ಡಮಾಸ್ಕಸ್ ಚರ್ಚ್ ಮೇಲೆ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಕಾರ್ಯಕರ್ತರು ಎನ್ನಲಾದವರು ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಎಂದು ಸಿರಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.
ಸುಧೀರ್ಘ ಕಾಲದಿಂದ ಸಿರಿಯಾದ ಆಡಳಿತ ಸೂತ್ರ ಹಿಡಿದಿದ್ದ ಬಶರ್ ಅಲ್ ಅಸ್ಸದ್ ಅವರು ಕಳೆದ ಡಿಸೆಂಬರ್ ನಲ್ಲಿ ಪದಚ್ಯುತಗೊಂಡ ಬಳಿಕ ನಡೆದ ಈ ಬಗೆಯ ಮೊದಲ ದಾಳಿ ಇದಾಗಿದೆ.
ಆ ಬಳಿಕ ದೇಶದ ಹೊಸ ಆಡಳಿತಕ್ಕೆ ಭದ್ರತೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ.

ದಾಳಿಗೆ ಇಡೀ ಚರ್ಚ್ ಧ್ವಂಸವಾಗಿದ್ದು, ನೆಲದಲ್ಲಿ ರಕ್ತದ ಹೊಳೆ ಹರಿದಿದೆ. ಘಟನಾ ಸ್ಥಳದಿಂದ ಜನರನ್ನು ಚಿಕಿತ್ಸೆಗೆ ಕರೆದೊಯ್ಯಲಾಗುತ್ತಿದೆ ಎಂದು ಎಎಫ್ಪಿ ವರದಿ ಮಾಡಿದೆ.
“ಡಯೇಶ್ (ಐಎಸ್) ಉಗ್ರಗಾಮಿ ಗುಂಪಿಗೆ ಸೇರಿದ ಆತ್ಮಹತ್ಯಾ ದಾಳಿಕೋರ ರಾಜಧಾನಿ ಡಮಾಸ್ಕಸ್ ನ ಡ್ವೆಲಾ ಪ್ರದೇಶದ ಸೈಂಟ್ ಎಲಿಯಸ್ ಚರ್ಚ್ ಗೆ ಪ್ರವೇಶಿಸಿ ಸ್ಫೋಟಕ ಬೆಲ್ಟ್ ನಿಂದ ಸಿಡಿಸಿಕೊಳ್ಳುವ ಮುನ್ನ ಗುಂಡಿನ ಮಳೆಗೆರೆದ” ಎಂದು ರಕ್ಷಣಾ ಸಚಿವಾಲಯ ಪ್ರಕಟಿಸಿದೆ.

ಘಟನೆಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಸಿರಿಯಾದ ಸಿವಿಲ್ ಡಿಫೆನ್ಸ್ ಹೇಳಿದೆ. “ಶಸ್ತ್ರಾಸ್ತ್ರಗಳನ್ನು ಹಿಡಿದಿದ್ದ ವ್ಯಕ್ತಿಯೊಬ್ಬ ಚರ್ಚ್ ಪ್ರವೇಶಿಸಿ ಗುಂಡು ಹಾರಿಸಲು ತೊಡಗಿದ. ಅದನ್ನು ತಡೆಯಲು ಕೆಲ ವ್ಯಕ್ತಿಗಳು ಪ್ರಯತ್ನಿಸಿದಾಗ ಆತ ಸ್ಫೋಟಿಸಿಕೊಂಡ” ಎಂದು ಚರ್ಚ್ ಹೊರಗಿದ್ದ ವ್ಯಕ್ತಿಯೊಬ್ಬರು ವಿವರಿಸಿದರು.
ಗುಂಡಿನ ದಾಳಿ ಮತ್ತು ಸ್ಫೋಟದ ಸದ್ದು ಕೇಳಿ ಬಂತು. ಚರ್ಚ್ ನಲ್ಲಿದ್ದ ಮರದ ಬೆಂಚುಗಳು ಪ್ರವೇಶ ದ್ವಾರದವರೆಗೂ ಎಸೆಯಲ್ಪಟ್ಟವು ಎಂದು ಚರ್ಚ್ ಪಕ್ಕದ ಅಂಗಡಿಯಲಿದ್ದ ವ್ಯಕ್ತಿಯೊಬ್ಬರು ವಿವರಿಸಿದರು.
