5 ಲಕ್ಷ ಅಫಘಾನಿ ವಲಸಿಗರನ್ನು 16 ದಿನಗಳಲ್ಲೇ ಹಟಾತ್ ಹೊರ ಹಾಕಿದ ಇರಾನ್

ತೆಹರಾನ (ಇರಾನ) : ‘ಅಕ್ರಮ ಅಫಘಾನ ವಲಸಿಗರು ಜುಲೈ 6, 2025 ರೊಳಗೆ ದೇಶವನ್ನು ತೊರೆಯಬೇಕು, ಇಲ್ಲದಿದ್ದರೆ ಅವರನ್ನು ಬಲವಂತವಾಗಿ ಹೊರಹಾಕಲಾಗುವುದು.’ ಎಂದು ಇರಾನ ಮಾರ್ಚ್ 2025 ರಲ್ಲಿ ಒಂದು ಘೋಷಣೆ ಮಾಡಿತು, ಈ ಘೋಷಣೆಯ ಪ್ರಕಾರ, ಇರಾನ್ ಜೂನ್ 24 ರಿಂದ ಜುಲೈ 9 ರ ವರೆಗಿನ 16 ದಿನಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಅಫಘಾನಿ ಅಕ್ರಮ ವಲಸಿಗರನ್ನು ಹೊರಹಾಕಿದೆ.

ಅಂದರೆ, ಪ್ರತಿದಿನ ಸರಾಸರಿ 30 ಸಾವಿರ ಅಫಘಾನಿ ನಾಗರಿಕರನ್ನು ದೇಶದಿಂದ ಹೊರಹಾಕಲಾಗಿದೆ. ಇಸ್ರೇಲ್ ನೊಂದಿಗೆ ಉದ್ವಿಗ್ನ ಸಂಘರ್ಷದ ನಂತರ, ಇರಾನ್ ಆಂತರಿಕ ಭದ್ರತೆಯನ್ನು ಪರಿಗಣಿಸಿ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.
ವರ್ಷದ ಕೊನೆಯಲ್ಲಿ ಇರಾನ್ ಮತ್ತು ಪಾಕಿಸ್ತಾನದಿಂದ 30 ಲಕ್ಷ ಅಫಘಾನಿ ಜನರನ್ನು ಹೊರಹಾಕಲಾಗುವುದು!
2025 ರಲ್ಲಿ ಇಲ್ಲಿಯವರೆಗೆ ಇರಾನ್ ಮತ್ತು ಪಾಕಿಸ್ತಾನದಿಂದ 16 ಲಕ್ಷ ಅಫಘಾನಿಸ್ತಾನಿಗಳನ್ನು ಹಿಂದಕ್ಕೆ ಕಳುಹಿಸಲಾಗಿದೆ. ವರ್ಷದ ಕೊನೇಯವರೆಗೆ ಈ ಸಂಖ್ಯೆ 30 ಲಕ್ಷಕ್ಕೆ ಏರಬಹುದು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ಅಫಘಾನಿಸ್ತಾನದ ಪ್ರತಿನಿಧಿ ಅರಾಫತ್ ಜಮಾಲ್ ಅವರ ಪ್ರಕಾರ, ಅಫಘಾನಿಸ್ತಾನವು ಇಷ್ಟು ದೊಡ್ಡ ಪ್ರಮಾಣದ ಜನರನ್ನು ಸ್ವೀಕರಿಸಲು ಸಿದ್ಧವಾಗಿಲ್ಲ. ಅಫಘಾನಿಸ್ತಾನದಲ್ಲಿ ವಾಸಿಸಲು ಸ್ಥಳವಿಲ್ಲ, ಉದ್ಯೋಗವಿಲ್ಲ, ಸುರಕ್ಷತೆ ಇಲ್ಲ ಎಂದು ಹೇಳಿದ್ದಾರೆ.
