ಐಪಿಸಿ 498A ಸೆಕ್ಷನ್ ಅತ್ಯಂತ ಕಠಿಣ: ಸುಪ್ರೀಂ ಕೋರ್ಟ್ ಅಭಿಪ್ರಾಯ

ನವದೆಹಲಿ: ಭಾರತೀಯ ದಂಡ ಸಂಹಿತೆ(IPC) ಸೆಕ್ಷನ್ 498 ಎ ಅತ್ಯಂತ ಕಠಿಣ ಸೆಕ್ಷನ್ ಎಂದು ಸುಪ್ರೀಂ ಕೋರ್ಟ್ (Supreme Court) ಅಭಿಪ್ರಾಯಪಟ್ಟಿದೆ.ಮದುವೆಯಾದ 1.5 ತಿಂಗಳೊಳಗೆ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸುವ ವೇಳೆ ನ್ಯಾ. ಬಿ. ನಾಗರತ್ನ ಅವರು ನಾವು ಎಲ್ಲಾ ಪ್ರಕರಣಗಳನ್ನು ಸುಳ್ಳು ಎಂದು ಹೇಳುತ್ತಿಲ್ಲ. ಆದರೆ ನಾವು ಹಲವಾರು 498A ಪ್ರಕರಣಗಳನ್ನು ರದ್ದುಗೊಳಿಸಿದ್ದೇವೆ ಎಂದು ಹೇಳಿದರು.

ಐಪಿಸಿ ಜಾರಿಯಲ್ಲಿದ್ದಾಗ ಮಹಿಳೆ ವರದಕ್ಷಿಣೆ ಕಿರುಕುಳ (Dowry Harassment) ದೂರು ನೀಡಿದಾಗ ಸೆಕ್ಷನ್ 498 ಎ ಅಡಿ ಎಫ್‌ಐಆರ್ ದಾಖಲಾಗುತ್ತಿತ್ತು. ವರದಕ್ಷಿಣೆ ಪಿಡುಗನ್ನು ತೊಡೆದು ಹಾಕುವುದು ಈ ಸೆಕ್ಷನ್‌ನ ಮೂಲ ಉದ್ದೇಶವಾಗಿತ್ತು. ಆದರೆ ಈ ಸೆಕ್ಷನ್ ದುರುಪಯೋಗ ಆಗುತ್ತಿರುವ ಹಿನ್ನೆಲೆಯಲ್ಲಿ ಕೋರ್ಟ್‌ಗಳು ಹಲವು ಪ್ರಕರಣಗಳು ರದ್ದು ಮಾಡುತ್ತಿವೆ.
ಐಪಿಸಿ ಸೆಕ್ಷನ್ 498 ಎ ಏನು ಹೇಳುತ್ತೆ?
ಪತಿ ಅಥವಾ ಅತನ ಸಂಬಂಧಿಗಳು ಪತ್ನಿಗೆ ಹಿಂಸೆ ನೀಡಿದರೆ ಈ ಸೆಕ್ಷನ್ ಅಡಿ ಕೇಸ್ ದಾಖಲಿಸಬಹುದು. ಜಾಮೀನು ರಹಿತ ಕೇಸ್ ಇದಾಗಿದ್ದು ಆರೋಪ ಸಾಬೀತಾದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.
ಈ ಸೆಕ್ಷನ್ ಅಡಿ ಕೌರ್ಯ ಎಂದರೆ ಏನು?
ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಅಥವಾ ಮಹಿಳೆಯ ಜೀವ, ಅಂಗ ಅಥವಾ ಆರೋಗ್ಯಕ್ಕೆ (ಮಾನಸಿಕ ಅಥವಾ ದೈಹಿಕ) ಗಂಭೀರ ಗಾಯ ಅಥವಾ ಅಪಾಯವನ್ನುಂಟುಮಾಡುವ ಸ್ವಭಾವದ ಯಾವುದೇ ಉದ್ದೇಶಪೂರ್ವಕ ನಡವಳಿಕೆ.
ಯಾವುದೇ ಆಸ್ತಿ ಅಥವಾ ಬೆಲೆಬಾಳುವ ವಸ್ತುಗಳಿಗಾಗಿ ಕಾನೂನುಬಾಹಿರ ಬೇಡಿಕೆಯನ್ನು ಇಡುವುದು, ಬೇಡಿಕೆಯನ್ನು ಪೂರೈಸಲು ಮಹಿಳೆ ಅಥವಾ ಆಕೆಯ ಸಂಬಂಧಿಗಳು ವಿಫಲವಾದರೆ ಆಕೆಯನ್ನು ಒತ್ತಾಯಿಸುವ ಉದ್ದೇಶದಿಂದ ನೀಡುವ ಕಿರುಕುಳ.
ಅಪರಾಧದಿಂದ ಸಂತ್ರಸ್ತರಾದ ಮಹಿಳೆಯರು ಅಥವಾ ರಕ್ತಸಂಬಂಧ, ವಿವಾಹ ಅಥವಾ ದತ್ತು ಸ್ವೀಕಾರದ ಮೂಲಕ ಅವರಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿ ಸೆಕ್ಷನ್ 498A ಅಡಿಯಲ್ಲಿ ದೂರು ಸಲ್ಲಿಸಬಹುದು. ಒಂದು ವೇಳೆ ಯಾವುದೇ ಸಂಬಂಧಿಗಳು ಇಲ್ಲದೇ ಇದ್ದರೆ ಆಕೆಯ ಪರವಾಗಿ ರಾಜ್ಯ ಸರ್ಕಾರವು ಸೂಚಿಸಬಹುದಾದ ಯಾವುದೇ ಸಾರ್ವಜನಿಕ ಸೇವಕರು ದೂರು ನೀಡಬಹುದು.
