ಅಂತರಾಷ್ಟ್ರೀಯ ಮೀನುಗಾರಿಕಾ ದೋಣಿ ವಶ- ಮೂವರ ಬಂಧನ

ಉಡುಪಿ: ಫೆಬ್ರವರಿ 17 ರಂದು ಪೂರ್ವ ಒಮನ್‌ನ ಡುಕ್ಮ್ ಬಂದರಿನಿಂದ ಮಧ್ಯಾಹ್ನ 3 ಗಂಟೆಗೆ ಪ್ರಯಾಣ ಬೆಳಸಿದ್ದ ವಿದೇಶಿ ಮೀನುಗಾರರನ್ನು ಫೆಬ್ರವರಿ 23 ರಂದು ಸಂಜೆ 4.30 ರ ಸುಮಾರಿಗೆ ಮಲ್ಪೆ ಕರಾವಳಿಯಿಂದ ಸುಮಾರು ಎಂಟು ನಾಟಿಕಲ್ ಮೈಲು ದೂರದಲ್ಲಿರುವ ಸೇಂಟ್ ಮೇರಿಸ್ ದ್ವೀಪದ ಬಳಿ ಕರಾವಳಿ ಕಾವಲು ಪೊಲೀಸ್ ಹಾಗೂ ಮಂಗಳೂರು ಕೋಸ್ಟ್ ಗಾರ್ಡ್ ವಶಕ್ಕೆ ಪಡೆದುಕೊಂಡಿದ್ದಾರೆ,
ಬೋಟ್‌ನಲ್ಲಿ ಇದ್ದ ಮೂವರು ಮೀನುಗಾರರನ್ನು ಬಂಧಿಸಲಾಗಿದೆ. ಒಮನ್ ದೇಶದ ಮೀನುಗಾರಿಕೆ ದೋಣಿಯದು ಎಂದು ಸ್ಥಳೀಯ ಮೀನುಗಾರರು ಗಮನಿಸಿದ್ದು, ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಂಧಿತರನ್ನು ತಮಿಳುನಾಡಿನ ರಾಮನಾಥಪುರಂನ ಜೇಮ್ಸ್ ಫ್ರಾಂಕ್ಲಿನ್ ಮೋಸೆಸ್ (50) ತಿರುನಲ್ವೇಲಿಯ ರಾಬಿನ್‌ಸ್ಟನ್ (50) ಮತ್ತು ಡೆರೋಸ್ ಅಲ್ಫೋನ್ಸೋ (38) ಎಂದು ಗುರುತಿಸಲಾಗಿದ್ದು, 1920 ರ ಪಾಸ್ ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯ್ದೆಯ ಸೆಕ್ಷನ್ 3 ಮತ್ತು 1981 ರ ಭಾರತದ ಸಮುದ್ರ ವಲಯಗಳ ಕಾಯ್ದೆಯ ಸೆಕ್ಷನ್ 10, 11 ಮತ್ತು 12 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೋಟ್ ಮಾಲೀಕರು ಪಾಸ್ ಪೋರ್ಟ್ ಕಿತ್ತುಕೊಂಡು, ವೇತನ, ಆಹಾರ ನೀಡದ ಕಾರಣಕ್ಕೆ ಓಮನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ. “ಮೀನುಗಾರರು ಕೇವಲ ಮೂಲಭೂತ ಜಿಪಿಎಸ್ ಸಾಧನವನ್ನು ಬಳಸಿಕೊಂಡು ಅಪಾಯಕಾರಿ ಸಮುದ್ರ ಪ್ರಯಾಣವನ್ನು ಕೈಗೊಂಡಿದ್ದಾರೆ. ಮೀನುಗಾರರು ಮಲ್ಪೆ ತಲುಪುವ ಮೊದಲು ಕಾರವಾರ ಕರಾವಳಿಯ ಮೂಲಕ ಸರಿಸುಮಾರು 3,000 ಕಿಮೀ ಕ್ರಮಿಸಿದ್ದಾರೆ. ಅವರ ಆಧಾರ್ ಮತ್ತು ಡಿಜಿಟಲ್ ದಾಖಲೆಗಳ ಪರಿಶೀಲನೆ ವೇಳೆ ಅವರ ಭಾರತೀಯ ರಾಷ್ಟ್ರೀಯತೆ ಮತ್ತು ಓಮನ್‌ನಲ್ಲಿ ಮೀನುಗಾರರಾಗಿ ಉದ್ಯೋಗ ಮಾಡುತ್ತಿದ್ದನ್ನು ಖಚಿತಪಡಿಸಿದೆ” ಎಂದು ಕರಾವಳಿ ಭದ್ರತಾ ಪೊಲೀಸ್ ಅಧೀಕ್ಷಕ ಹೆಚ್.ಎನ್ ಮಿಥುನ್ ಹೇಳಿದ್ದಾರೆ.

ಮೀನುಗಾರರನ್ನು ಸೋಮವಾರ (ಫೆ.24) ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ತನಿಖೆಗಾಗಿ ಅಧಿಕಾರಿಗಳು ಹೆಚ್ಚಿನ ಕಸ್ಟಡಿಗೆ ಹಾಕಬಹುದು.