₹95 ಲಕ್ಷ ಚಿನ್ನಾಭರಣ ಕದ್ದಿದ್ದ ಅಂತರರಾಜ್ಯ ಕಳ್ಳರ ಬಂಧನ; ₹87 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ : ಆಭರಣಾ ತಯಾರಿಕಾ ಅಂಗಡಿಗೆ ನುಗ್ಗಿ ಅಲ್ಲಿದ್ದ 95 ಲಕ್ಷ ಮೌಲ್ಯದ ಚಿನ್ನ ಕದ್ದ ಅಂತರಾಜ್ಯ ಆರೋಪಿಗಳನ್ನು ಅರೆಸ್ಟ್ ಮಾಡುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ನಿವಾಸಿಗಳಾದ ಶುಭಂ ತಾನಾಜಿ ಸಾಠೆ (25), ಪ್ರವೀಣ್ ಅಪ್ಪಾ ಸಾಠೆ (23), ನೀಲೇಶ್ ಬಾಪು ಕಸ್ತೂರಿ (19), ಸಾಗರ್ ದತ್ತಾತ್ರೇಯ ಕಂದಗಲೆ (32), ಮತ್ತು ಬಾಗವ್ ರೋಹಿತ್ ಶ್ರೀಮಂತ್ (25) ಎಂದು ಗುರುತಿಸಲಾಗಿದೆ.
ಬಂಧಿತರಿಂದ 74,88,000ರೂ. ಮೌಲ್ಯದ 748.8 ಗ್ರಾಂ ಚಿನ್ನ, 3,60,000 ರೂ. ಮೌಲ್ಯದ 4 ಕೆಜಿ 445 ಗ್ರಾಂ ಬೆಳ್ಳಿ, 5,00,000ರೂ. ನಗದು, ಕೃತ್ಯಕ್ಕೆ ಬಳಸಿದ ಕಾರು ಸೇರಿದಂತೆ ಒಟ್ಟು 87,48,000ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಕುಮಟೆ ಮೂಲದ, ಪ್ರಸ್ತುತ ನಗರದ ಅಪಾರ್ಟ್‌ಮೆಂಟ್ ನಿವಾಸಿ ವೈಭವ್ ಮೋಹನ ಘಾಟಗೆ ಎಂಬವರಿಗೆ ಸೇರಿದ ಮಾರುತಿ ವೀಥಿಕಾ ಬಳಿಯ ಉಪೇಂದ್ರ ಎಂಬ ಕಟ್ಟಡದ ನೆಲಮಹಡಿಯಲ್ಲಿರುವ ವೈಭವ ಗೋಲ್ಡ್ ಆ್ಯಂಡ್ ಸಿಲ್ವರ್ ಮೆಲ್ಟಿಂಗ್ ಮತ್ತು ರಿಫೈನರಿ ಅಂಗಡಿಗೆ ಸೆಪ್ಟೆಂಬರ್ 8ರಂದು ರಾತ್ರಿ ನಕಲಿ ಬೀಗ ಬಳಸಿ ಒಳನುಗ್ಗಿದ ಕಳ್ಳರು, ರಿಫೈನರಿ ಮಷಿನ್‌ನಲ್ಲಿಟ್ಟಿದ್ದ 95,71,000ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸ್ ತಂಡ, ಆರೋಪಿಗಳನ್ನು ಸೆ.12ರಂದು ಮಹಾರಾಷ್ಟ್ರ ಸೋಲಾಪುರ ಜಿಲ್ಲೆಯ ಮಲ್ಶಿರೋಸ್ ತಾಲೂಕಿನ ನಿಮ್ಗಾಂವ್ ಎಂಬಲ್ಲಿ ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದೆ
