ಅಂತರ್-ಸಮುದಾಯ ಪ್ರೇಮ ಪ್ರಕರಣ: ಕೊಪ್ಪಳದಲ್ಲಿ ಯುವಕನ ಬರ್ಬರ ಹತ್ಯೆ, ನಾಲ್ವರ ಬಂಧನ

ಕೊಪ್ಪಳ : ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಹತ್ಯೆ ಮಾಡಲಾಗಿದ್ದ ಯವಕನ ಅಂತ್ಯಕ್ರಿಯೆ ಸೋಮವಾರ ನರೆವೇರಿತು.

ಸೋಮವಾರ ಮಧ್ಯಾಹ್ನ ಮೃತ ಯುವಕನ ಅಂತ್ಯಕ್ರಿಯೆಯ ಸಂದರ್ಭ ಕುಟುಂಬದವರು ಮತ್ತು ಬಂಧುಬಳಗದವರು ಹಾಜರಿದ್ದರು. ಮೃತ ಯುವಕನ ಮನೆಗೆ ಶಾಸಕ ರಾಘವೇಂದ್ರ ಹಿಟ್ನಾಳ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಈ ವೇಳೆ ಯುವಕನ ಕುಟುಂಬದವರು ತಮಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ನಂತರ ಕೆಲವರು ಮನವೊಲಿಸಿದ ನಂತರ ಪ್ರತಿಭಟನೆಯನ್ನು ವಾಪಾಸ್ ತೆಗೆದುಕೊಂಡರು.
►ಘಟನೆಯ ಹಿನ್ನೆಲೆ:
ನಗರದ ಕುರುಬರ ಓಣಿಯ ನಿವಾಸಿಯಾದ ಪರಿಶಿಷ್ಟ ವರ್ಗದ ಗವಿಸಿದ್ದಪ್ಪ ನಾಯಕ್ (26) ಎನ್ನುವ ಯುವಕನನ್ನು ರವಿವಾರ ರಾತ್ರಿ ನಿರ್ಮಿತಿ ಕೇಂದ್ರದ ರಸ್ತೆಯಲ್ಲಿ ನಾಲ್ವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಕೊಲೆ ಮಾಡಿದವರಲ್ಲಿ ಪ್ರಮುಖ ಅರೋಪಿ ಎನ್ನಲಾದ ಸಾಧಿಕ್ ಕೋಲ್ಕಾರ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದ. ಸ್ವಲ್ಪ ಸಮಯದ ನಂತರ ಇನ್ನೂ ಇಬ್ಬರು ಆರೋಪಿಗಳು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದರು. ಓರ್ವ ಆರೋಪಿ ಪರಾರಿಯಾಗಿದ್ದ. ಆತನನ್ನು ಪೊಲೀಸರು ಬಂಧಿಸಿ ಕೆರೆ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಯುವಕ ಗವಿಸಿದ್ದಪ್ಪ ನಾಯಕ್ ವೃತ್ತಿಯಲ್ಲಿ ಚಾಲಕನಾಗಿದ್ದ. ಗವಿಸಿದ್ದಪ್ಪ ಮುಸ್ಲಿಂ ಯುವತಿಯೊರ್ವಳನ್ನು ಪ್ರೀತಿಮಾಡುತ್ತಿದ್ದ. ಈ ವಿಷಯ ಪಾಲಕರಿಗೆ ತಿಳಿದಿದ್ದರಿಂದ ಎರಡೂ ಸಮಾಜಗಳ ಮುಖಂಡರು ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಬಳಿಕ ರಾಜೀ ಸಂಧಾನ ಮಾಡಿಸಲಾಗಿತ್ತು ಎಂದು ತಿಳಿದು ಬಂದಿದೆ.
ಗವಿಸಿದ್ದಪ್ಪ ನಾಯಕ್ ಪ್ರೀತಿಸುತ್ತಿದ್ದ ಯುವತಿಯನ್ನೇ ಆರೋಪಿ ಸಾಧಿಕ್ ಕೋಲ್ಕಾರ್ ಕೂಡ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿಯೇ ಕೊಲೆ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ಧಿ, ಹೆಚ್ಚುವರಿ ಎಸ್.ಪಿ.ಹೇಮಂತಕುಮಾರ್, ನಗರಠಾಣೆ ಪೊಲೀಸ್ ಇನ್‌ಸ್ಟೆಕ್ಟರ್ ಜಯಪ್ರಕಾಶ ಸೇರಿದಂತೆ ಹಲವು ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ʼಕೊಲೆಯಾದ ಯುವಕ ಕೂಡ ನಮ್ಮ ಮಗ ಇದ್ದ ಹಾಗೆ, ಕೊಲೆ ಮಾಡಬಾರದಿತ್ತು. ನನ್ನ ಮಗ ತಪ್ಪು ಮಾಡಿದ್ದಾನೆ, ಅವನಿಗೆ ಶಿಕ್ಷೆಯಾಗಲಿ ನಾವು ಅದನ್ನು ಒಪ್ಪುತ್ತೇವೆʼ ಎಂದು ಬಂಧಿತ ಆರೋಪಿ ಸಾಧಿಕ್ ನ ತಂದೆ ಮೌಲಾ ಹುಸೇನ್ ಕೋಲ್ಕಾರ್ ತಿಳಿಸಿದ್ದಾರೆ.