ವಿಮಾ ಏಜೆಂಟ್ ಕೊಲೆ, ಚರಂಡಿಗೆ ದೇಹ ಎಸೆದ ಪ್ರಕರಣ – ಯುವತಿ ಮತ್ತು ನಿಶ್ಚಿತ ವರನ ಬಂಧನ

ನವದೆಹಲಿ: ಫರಿದಾಬಾದ್‌ನಲ್ಲಿ ವಿಮಾ ಏಜೆಂಟ್‌ನನ್ನು ಕೊಲೆ ಮಾಡಿ ಆತನ ದೇಹವನ್ನು ಚರಂಡಿಗೆ ಎಸೆದ ಆರೋಪದಲ್ಲಿ ಯುವತಿ ಮತ್ತು ಆಕೆಯ ನಿಶ್ಚಿತ ವರನನ್ನು ಬಂಧಿಸಲಾಗಿದೆ.

ಚಂದರ್ ಕೊಲೆಯಾದ ವ್ಯಕ್ತಿ. ಪೊಲೀಸರು ಲಕ್ಷ್ಮಿ (29) ಮತ್ತು ಕೇಶವ್ (26) ಅವರನ್ನು ಬಂಧಿಸಿದರು. ಈತ ನನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕಾರಣ ಕೊಲೆ ಮಾಡಿರುವುದಾಗಿ ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.
ಭಾನುವಾರ ಬೆಳಗ್ಗೆ ಚರಂಡಿಯಲ್ಲಿ ಚಂದರ್ ಅವರ ಶವ ಪತ್ತೆಯಾಗಿತ್ತು. ಸಮೀಪದಲ್ಲಿ ನಿಲ್ಲಿಸಿದ್ದ ಬೈಕ್‌ನ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಶವವನ್ನು ಗುರುತಿಸಲಾಯಿತು. ಫರಿದಾಬಾದ್‌ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಪೂರ್ವ ದೆಹಲಿಯ ವಿನೋದ್ ನಗರದಲ್ಲಿ ಚಂದರ್ ವಾಸಿಸುತ್ತಿದ್ದರು ಎಂದು ಪೊಲೀಸರು ಕಂಡುಕೊಂಡರು. ಅವರ ಕುಟುಂಬವನ್ನು ಸಂಪರ್ಕಿಸಿದರು. ಮೃತದೇಹದ ತಲೆ ಮತ್ತು ಕುತ್ತಿಗೆಯ ಮೇಲೆ ಗಾಯದ ಗುರುತುಗಳಿದ್ದವು. ಚಂದರ್ ಅವರ ಸಹೋದರ ಮದನ್ ಗೋಪಾಲ್ ನೀಡಿದ ದೂರಿನ ನಂತರ, ಕೊಲೆ ಪ್ರಕರಣ ದಾಖಲಿಸಲಾಯಿತು.
ಚಂದರ್ ಅವರಿಗೆ ಐದು ವರ್ಷಗಳಿಂದ ಪರಿಚಯವಿರುವುದಾಗಿ ಪೊಲೀಸರ ಬಳಿ ಆರೋಪಿ ಲಕ್ಷ್ಮಿ ಹೇಳಿದ್ದಾಳೆ. ಇತ್ತೀಚೆಗೆ ಕೇಶವ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಇದರಿಂದ ಚಂದರ್ ಬೇಸರಗೊಂಡಿದ್ದ. ಅವನು ಲಕ್ಷ್ಮಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಕೇಶವ್ ಅವರನ್ನು ಮದುವೆಯಾಗಬೇಡಿ ಎಂದು ಹೇಳಿದ್ದ. ಈ ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತ ಆಕೆ ಮತ್ತು ಕೇಶವ್ ಇಬ್ಬರೂ ಚಂದರ್‌ನನ್ನು ಕೊಲ್ಲಲು ಯೋಜಿಸಿದ್ದರು ಎಂದು ಪೊಲೀಸ್ ವಕ್ತಾರ ಯಶ್ಪಾಲ್ ಸಿಂಗ್ ತಿಳಿಸಿದ್ದಾರೆ.
ಅ.25 ರಂದು ಲಕ್ಷ್ಮಿ, ಚಂದರ್‌ನನ್ನು ದೆಹಲಿಯ ಮಿಥಾಪುರಕ್ಕೆ ಕರೆದಳು. ಅಲ್ಲಿಂದ ಆತನ ಜೊತೆ ಬೈಕ್‌ನಲ್ಲಿ ಫರಿದಾಬಾದ್‌ನ ಆತ್ಮದ್‌ಪುರದಲ್ಲಿರುವ ನಿರ್ಜನ ಪ್ರದೇಶಕ್ಕೆ ಹೋದಳು. ಅಲ್ಲಿ, ಕೇಶವ್ ಮತ್ತು ಅವನ ಇಬ್ಬರು ಸ್ನೇಹಿತರು ಚಂದರ್ ಮೇಲೆ ಹಲ್ಲೆ ನಡೆಸಿದರು. ಆತ ಸತ್ತ ನಂತರ ಆರೋಪಿಗಳು ಶವವನ್ನು ಚರಂಡಿಯಲ್ಲಿ ಎಸೆದು ಸ್ಥಳದಿಂದ ಪರಾರಿಯಾಗಿದ್ದರು.