100 ರೂಪಾಯಿಗೆ ಪ್ರಶ್ನೆಪತ್ರಿಕೆ ನೀಡುವುದಾಗಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ವೈರಲ್!

ರಾಜ್ಯ ಶಿಕ್ಷಣ ವ್ಯವಸ್ಥೆಗೆ ಗಂಭೀರ ಎಚ್ಚರಿಕೆ ನೀಡುವಂತಹ ವಿಷಯವೊಂದು ಇದೀಗ ಬೆಳಕಿಗೆ ಬಂದಿದೆ. ಈ ಸುದ್ದಿಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಡ್ಡಾಯವಾಗಿ ಗಮನಿಸಬೇಕಾದ ಅಗತ್ಯವಿದೆ. ಏಕೆಂದರೆ, ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಗೆ ಇನ್ನೂ ಕೇವಲ ಎರಡು ದಿನ ಮಾತ್ರ ಬಾಕಿ ಇರುವ ಈ ಸಂದರ್ಭದಲ್ಲಿ, ಪರೀಕ್ಷೆಯನ್ನೇ ಬಂಡವಾಳ ಮಾಡಿಕೊಂಡು ಕೆಲವು ಕಿಡಿಗೇಡಿಗಳು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ.


ಫೆಬ್ರವರಿ 28ರಿಂದ ಪಿಯು ಮುಖ್ಯ ಪರೀಕ್ಷೆ
ಫೆಬ್ರವರಿ 28ರಿಂದ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಗಳು ರಾಜ್ಯಾದ್ಯಂತ ಆರಂಭವಾಗಲಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಮಾರ್ಚ್ 18 ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿದೆ. ಇಂತಹ ಸಮಯದಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆ ಮಾರಾಟದ ಬಗ್ಗೆ ಸುಳ್ಳು ಮತ್ತು ಅಪಾಯಕಾರಿ ಮಾಹಿತಿಗಳು ಹರಿದಾಡುತ್ತಿರುವುದು ಆತಂಕ ಮೂಡಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಪತ್ರಿಕೆ ಮಾರಾಟದ ಪೋಸ್ಟ್
ಕೆಲವು ಕಿಡಿಗೇಡಿಗಳ ಗುಂಪು, ದ್ವಿತೀಯ ಪಿಯುಸಿ ಮತ್ತು ಹತ್ತನೇ ತರಗತಿ ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವುದು ಬೆಳಕಿಗೆ ಬಂದಿದೆ. ವಿಶೇಷವಾಗಿ “ಡೆಲ್ಟಾ. ಕನ್ನಡಿಗ” ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ, “ನಿಮಗೆ ಯಾವ ಪ್ರಶ್ನೆಪತ್ರಿಕೆ ಬೇಕೋ ಮೆಸೇಜ್ ಮಾಡಿ, ಹಣ ಎಷ್ಟು ಅಂತ ನಂತರ ಹೇಳ್ತೀನಿ” ಎಂದು ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಜೊತೆಗೆ ಮತ್ತೋಂದು ಪೋಸ್ಟ್ ನಲ್ಲಿ 100 ರೂ ಕೊಟ್ಟರೆ ಸಾಕು ಎಂದಿದೆ. ಇನ್ನೊಂದು ಪೋಸ್ಟ್ನಲ್ಲಿ ನಾನು ಮಿಡಲ್ನಲ್ಲಿ ಏಜೆಂಟ್ ಆಗಿರ್ತೀನಿ, ದುಡ್ಡು ಎಷ್ಟು ಅಂತ ಹೇಳ್ತೀನಿ ಎಂದು ಬರೆಯಾಗಿದೆ. ಇದು ನೇರವಾಗಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡುವುದಾಗಿ ಸೂಚಿಸುವ ಗಂಭೀರ ಅಪರಾಧದ ಸಂಕೇತವಾಗಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಇಂತಹ ಪೋಸ್ಟ್ಗಳಿಗೆ ಪ್ರತಿಕ್ರಿಯಿಸಬಾರದು. ಇನ್ನು ಈ ವಿಚಾರ ಯಾವಾಗ ವೈರಲ್ ಆಯ್ತೋ ತಕ್ಷಣ ಖಾತೆಯನ್ನು ಡಿಲೀಟ್ ಮಾಡಲಾಗಿದೆ.ಅಮಿಷಕ್ಕೆ ಬಲಿಯಾಗಬೇಡಿ
ಪರೀಕ್ಷೆಯಲ್ಲಿ ಹೆಚ್ಚು ಅಂಕಗಳ ಆಸೆ, ಆತಂಕ ಹಾಗೂ ಭಯವನ್ನು ದುರುಪಯೋಗಪಡಿಸಿಕೊಂಡು, ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಮೋಸಗೊಳಿಸುವುದು ಈ ಕಿಡಿಗೇಡಿಗಳ ಉದ್ದೇಶವಾಗಿದೆ. ಇಂತಹ ಖಾತೆಗಳು ಕೇವಲ ಹಣ ದೋಚುವ ತಂತ್ರವಾಗಿರಬಹುದು ಅಥವಾ ದೊಡ್ಡ ಮಟ್ಟದ ವಂಚನೆಗೆ ದಾರಿ ಮಾಡಿಕೊಡಬಹುದು. ಇದನ್ನು ನಂಬಿ ಹಣ ಕಳೆದುಕೊಳ್ಳುವುದಷ್ಟೇ ಅಲ್ಲ, ಕಾನೂನು ತೊಂದರೆಯಲ್ಲೂ ಸಿಲುಕುವ ಸಾಧ್ಯತೆ ಇದೆ.

ತಕ್ಷಣ ಪೊಲೀಸ್ ನಿಗಾ ಅಗತ್ಯ
ಈ ರೀತಿಯ ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ಕೂಡಲೇ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಸೈಬರ್ ಕ್ರೈಂ ವಿಭಾಗ ಸಕ್ರಿಯವಾಗಿ ಇಂತಹ ಖಾತೆಗಳನ್ನು ಪತ್ತೆಹಚ್ಚಿ, ಪ್ರಶ್ನೆಪತ್ರಿಕೆ ಸೋರಿಕೆ ಯತ್ನ ನಡೆಸುತ್ತಿರುವವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಸರ್ಕಾರದ ತ್ವರಿತ ಕ್ರಮಕ್ಕೆ ಆಗ್ರಹ
ಶಿಕ್ಷಣ ಇಲಾಖೆ ಹಾಗೂ ಗೃಹ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು, ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆ, ವಿದ್ಯಾರ್ಥಿಗಳಿಗೆ ಜಾಗೃತಿ, ಪ್ರಶ್ನೆಪತ್ರಿಕೆ ಭದ್ರತೆಗೆ ಹೆಚ್ಚುವರಿ ಕ್ರಮ ಇವುಗಳನ್ನು ಜಾರಿಗೊಳಿಸಬೇಕಾಗಿದೆ. ಇಲ್ಲವಾದಲ್ಲಿ, ಹಿಂದಿನ ವರ್ಷಗಳಂತೆ ಪ್ರಶ್ನೆಪತ್ರಿಕೆ ಸೋರಿಕೆ ಭೂತ ಮತ್ತೆ ವಿದ್ಯಾರ್ಥಿಗಳನ್ನು ಕಾಡುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.