ಬ್ರಹ್ಮಾವರದಲ್ಲಿ ಅಮಾನವೀಯ ಘಟನೆ: ಅನಾರೋಗ್ಯಪೀಡಿತ ಹಸುಳೆಗೆ ನೆರವು ಹೆಸರಲ್ಲಿ ₹30,000 ವಂಚನೆ!

ಬ್ರಹ್ಮಾವರ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹಸುಳೆಯ ಚಿಕಿತ್ಸೆಗೆ ನೆರವು ನೀಡುವುದಾಗಿ ಹೆತ್ತವರನ್ನು ನಂಬಿಸಿ ಅವರಿಂದ 30,000 ರೂ. ವಸೂಲಿ ಮಾಡಿ ವಂಚಿಸಿದ ಅಮಾನವೀಯ ಘಟನೆಯಿದು.

ಚೇರ್ಕಾಡಿ ಗ್ರಾಮದ ಉಷಾ ಅವರ ಒಂದು ತಿಂಗಳ ಮಗುವಿಗೆ ಹೃದಯದ ಕಾಯಿಲೆ ಇದ್ದು ಚಿಕಿತ್ಸೆಗೆ ಸುಮಾರು 10 ಲಕ್ಷ ರೂ.
ಖರ್ಚು ಆಗುವುದರಿಂದ ಸಹೃದಯಿಗಳು ಧನ ಸಹಾಯ ಮಾಡುವಂತೆ ವಾಟ್ಸ್‌ಆಯಪ್ ಮೂಲಕ ಮನವಿ ಮಾಡಿಕೊಂಡಿದ್ದರು.
ಜು. 28ರಂದು ವಂಚಕರು ಉಷಾ ಅವರಿಗೆ ಕರೆ ಮಾಡಿ ನಿಮ್ಮ ಮಗುವಿನ ಚಿಕಿತ್ಸೆಗೆ 3 ಲಕ್ಷ ರೂ. ಕಳುಹಿಸುತ್ತೇವೆ. ಆದರೆ ಆ ಮೊತ್ತವನ್ನು ಕಳುಹಿಸ ಬೇಕಾದರೆ 30 ಸಾವಿರ ರೂ. ಜಿಎಸ್‌ಟಿ ಕಟ್ಟಬೇಕಾಗುತ್ತದೆ. ಅದನ್ನು ನೀವು ಮುಂಚಿತವಾಗಿ ಪಾವತಿಸಬೇಕಾಗುತ್ತದೆ ಎಂದರು.
“ಮಗುವಿನ ಚಿಕಿತ್ಸೆಗೆ ದೊಡ್ಡ ಮೊತ್ತದ ನೆರವು ನೀಡುತ್ತಾರಲ್ಲ’ ಎಂದುಕೊಂಡ ತಾಯಿಯು ವಂಚಕರು ತಿಳಿಸಿದ್ದ ಮೊತ್ತವನ್ನು ತನ್ನ ಖಾತೆಯಿಂದ ಗೂಗಲ್ ಪೇ ಮಾಡಿದರು. ಬಳಿಕ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದ್ದು ಪೊಲೀಸರ ಮೊರೆ ಹೋಗಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.