ಅಯ್ಯಪ್ಪ ಮಾಲೆ ಧರಿಸಿದ್ದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ: ಶಾಲಾ ಆಡಳಿತ ಮಂಡಳಿ ವಿರುದ್ಧ ABVP, RSS ನಿಂದ ತೀವ್ರ ಪ್ರತಿಭಟನೆ

ವಿಜಯವಾಡ: ಶಬರಿಮಲೆ ಯಾತ್ರೆಗೆ ಅಯ್ಯಪ್ಪ ಮಾಲೆ ಧರಿಸಿದ್ದ 5ನೇ ತರಗತಿ ವಿದ್ಯಾರ್ಥಿಗೆ ಶಾಲೆಯೊಳಗೆ ಪ್ರವೇಶ ನಿರಾಕರಿಸಿದ ಘಟನೆ ನಡೆದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಶಾಲೆಯ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದ್ದು, ನಂತರ ಶಾಲೆ ಕ್ಷಮೆ ಕೋರಿದೆ. ಆಂಧ್ರಪ್ರದೇಶದ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅಯ್ಯಪ್ಪ ಮಾಲೆ ಧರಿಸಿ ಬಂದ ಬಾಲಕನಿಗೆ ಎನ್‌ಟಿಆರ್ ಜಿಲ್ಲೆಯ ಗೊಲ್ಲಪುಡಿಯಲ್ಲಿರುವ ಖಾಸಗಿ ಶಾಲೆಯ ಆಡಳಿತ ಮಂಡಳಿಯು ತರಗತಿಗೆ ಪ್ರವೇಶ ನಿರಾಕರಿಸಿದೆ. ಅಯ್ಯಪ್ಪ ದೀಕ್ಷೆ ತೆಗೆದುಕೊಂಡು ಬೆಳಗ್ಗೆ ಮಾಲೆ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿಯನ್ನು ಶಾಲಾ ಅಧಿಕಾರಿಗಳು ಮನೆಗೆ ಕಳುಹಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪೋಷಕರು, ಸ್ಥಳೀಯರು ಎಬಿವಿಪಿ, ಆರ್‌ಎಸ್‌ಎಸ್‌ನಿಂದ ಪ್ರತಿಭಟನೆ
ಈ ವಿಚಾರ ಪೋಷಕರು ಹಾಗೂ ಸ್ಥಳೀಯರಿಗೆ ತಿಳಿಯುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಸುದ್ದಿ ತಿಳಿದ ಕೂಡಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP)ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸದಸ್ಯರು ಸೇರಿದಂತೆ ಅಯ್ಯಪ್ಪ ಭಕ್ತರು ಮತ್ತು ಕಾರ್ಯಕರ್ತರ ಗುಂಪೊಂದು ಶಾಲೆಗೆ ತೆರಳಿದ್ದು, ಶಾಲಾ ಆಡಳಿತ ಮಂಡಳಿಯ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿಯನ್ನು ತರಗತಿಗೆ ಬಿಡಬೇಕೆಂದು ಒತ್ತಾಯಿಸಿದ್ದಾರೆ.
ಪರಿಸ್ಥಿತಿ ಹದಗೆಡುತ್ತಿರುವ ವಿಚಾರ ತಿಳಿದ ಭವಾನಿಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಎರಡೂ ಅಲ್ಲಿ ಸೇರಿದ್ದ ಜನರನ್ನು ಸಮಾಧಾನಪಡಿಸಲು ಮತ್ತು ಶಾಂತಿ ಕಾಪಾಡಲು ಪ್ರಯತ್ನಿಸಿದರು. ಈ ಅಯ್ಯಪ್ಪ ಮಾಲೆ ವೃತದಲ್ಲಿ ಭಾಗವಹಿಸುವವರ ನಿಯೋಗವೂ ಶಾಲೆಗೆ ತಲುಪಿತು. ಇದಾದ ನಂತರ ಈ ವಿಷಯ ಜಿಲ್ಲಾ ಶಿಕ್ಷಣಾಧಿಕಾರಿ ಯು.ವಿ. ಸುಬ್ಬಾ ರಾವ್ ಅವರ ಬಳಿಗೆ ಹೋಯಿತು. ಡಿಇಒ ಸುಬ್ಬಾರಾವ್ ಹಾಗೂ ಶಾಲಾ ಆಡಳಿತ ಮಂಡಳಿಯ ನಡುವಿನ ಚರ್ಚೆಯ ನಂತರ ಶಾಲೆಯು ಘಟನೆಗೆ ಸಂಬಂಧಿಸಿದಂತೆ ಕ್ಷಮೆ ಕೇಳಿದೆ. ನಂತರ ವಿದ್ಯಾರ್ಥಿಗೆ ಅಯ್ಯಪ್ಪ ಮಾಲೆ ಮತ್ತು ದೀಕ್ಷಾ ಉಡುಪನ್ನು ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡಲು ಒಪ್ಪಿಕೊಂಡಿತ್ತು. ಇದರಿಂದಾಗಿ ಈ ಗಲಾಟೆಗೆ ತಕ್ಷಣ ಪರಿಹಾರ ಸಿಕ್ತು.
ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿ ಎರಡು ದಿನಗಳಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಿರುವುದಾಗಿ ಡಿಇಒ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಖಾಸಗಿ, ಅನುದಾನಿತ ಅಥವಾ ಇತರ ಶಾಲೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆಯಂತಹ ಧಾರ್ಮಿಕ ಚಿಹ್ನೆಗಳನ್ನು ಧರಿಸಿ ತರಗತಿ ಕೋಣೆಗಳಿಗೆ ಪ್ರವೇಶಿಸುವುದನ್ನು ತಡೆಯಬಾರದು ಮತ್ತು ಪಾಲಿಸಲು ವಿಫಲವಾದ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ವಿದ್ಯಾರ್ಥಿಗಳ ಧಾರ್ಮಿಕ ಚಿಹ್ನೆಗಳನ್ನು ನಿರಂತರವಾಗಿ ಆಕ್ಷೇಪಿಸುವ ಶಾಲಾ ವ್ಯವಸ್ಥಾಪಕರು ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸುವುದು ಸೇರಿದಂತೆ ಶಿಸ್ತಿನ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಇತ್ತೀಚೆಗೆ ಇಲ್ಲಿನ ವಿದ್ಯಾಧರಪುರಂನ ಶಾಲೆಯಲ್ಲಿಯೂ ಇದೇ ರೀತಿಯ ಘಟನೆ ನಡೆದು ವಿವಾದಕ್ಕೆ ಕಾರಣವಾಗಿತ್ತು.