ಶೀನಾ ಬೋರಾ ಹತ್ಯಾ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ದಿವಾಳಿ

ನವದೆಹಲಿ: ಇದನ್ನು ಮಾಡಿದ ಕೆಟ್ಟ ಕರ್ಮದ ಫಲ ಎನ್ನುತ್ತೀರೋ ಅಥವಾ ಮಾಡಿದ್ದುಣ್ಣೋ ಮಹರಾಯ ಎನ್ನುತ್ತೀರೋ ನಿಮಗೆ ಬಿಟ್ಟ ವಿಚಾರ. ನಾವೀಗ ಹೇಳಲು ಹೊರಟಿರುವುದು ದಶಕದ ಹಿಂದೆ ನಡೆದಿದ್ದ ಶೀನಾ ಬೋರಾ ಎಂಬ ಯುವತಿಯ ಮರ್ಡರ್ ಕೇಸ್ ನ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ.

ಈ ಇಂದ್ರಾಣಿ ಮುಖರ್ಜಿ, ಕೊಲೆಯಾದ ಶೀನಾ ಬೋರಾ ತಾಯಿ. ತನ್ನ ಮೊದಲ ಪತಿಯಿಂದ ಪಡೆದ ಮಗಳಾದ ಶೀನಾ ಬೋರಾಳನ್ನು 2012ರಲ್ಲಿ ಇಂದ್ರಾಣಿ ಮುಖರ್ಜಿಯೇ ಕೊಂದಿದ್ದಳು. ಐಷಾರಾಮಿ ಜೀವನದ ಹುಚ್ಚು ಹಿಡಿಸಿಕೊಂಡು, ಗಂಡಂದಿರನ್ನು ಬದಲಾಯಿಸುತ್ತಾ, ಕಡೆಗೆ ಪೀಟರ್ ಮುಖರ್ಜಿಯಾ ಎಂಬ ಸಿರಿವಂತನನ್ನು ಪಟಾಯಿಸಿ ನೂರಾರು ಕೋಟಿ ಆಸ್ತಿಯ ಮಾಲೀಕಳಾಗಿ ಮೆರೆದಿದ್ದ ಆಕೆ ಈಗ ಅಕ್ಷರಶಃ ದಿವಾಳಿಯಾಗಿದ್ದಾಳಂತೆ.
ಆಕೆ ಹೇಗೆ ದಿವಾಳಿಯಾದಳು ಎಂಬುದಕ್ಕಿಂತ ಮುಂಚೆ, ಆಕೆಯ ಜೀವನವನ್ನು ಸಂಕ್ಷಿಪ್ತವಾಗಿ ನಿಮಗೆ ಹೇಳಿಬಿಡುತ್ತೇವೆ. ಆಕೆಗೆ. ಮೂರು ಮದುವೆಗಳಾಗಿದ್ದವು. ಶೀನಾ ಬೋರಾ ಎಂಬ ಯುವತಿ, ಆಕೆಯ ಮೊದಲ ಪತಿಯ ದಾಂಪತ್ಯಕ್ಕೆ ಜನಿಸಿದ ಮಗಳು. ಆನಂತರ, ಸಂಜೀವ್ ಖನ್ನಾ ಎಂಬಾತನನ್ನು ಮದುವೆಯಾಗಿ, ಆತನಿಂದಲೂ ಒಂದು ಮಗಳನ್ನು ಪಡೆದಿದ್ದಳು.
ಆನಂತರ, ಆತನಿಗೂ ಕೈಕೊಟ್ಟು, ಸ್ಟಾರ್ ಇಂಡಿಯಾ ಸಂಸ್ಥೆಯ ಮಾಜಿ ಸಿಇಒ ಪೀಟರ್ ಮುಖರ್ಜಿಯಾ ಎಂಬ ದೊಡ್ಡ ಶ್ರೀಮಂತನನ್ನು ಮದುವೆಯಾದಳು. ಆದರೆ, ತಾಯಿಯಾಗಿದ್ದರೂ ತನ್ನನ್ನು ನಿರ್ಲಕ್ಷಿಸಿ ತಾನು ಮಾತ್ರ ವಿಜೃಂಭಣೆಯಿಂದ ಜೀವನ ಮಾಡುತ್ತಿದ್ದೀಯಾ ಎಂದು ಮೊದಲ ಪತಿಯ ಮಗಳು ಶೀನಾ ಬೋರಾ ಆಕೆಯನ್ನು ಹುಡುಕಿಕೊಂಡು ಬಂದು ಹಣಕ್ಕಾಗಿ, ಮುಂಬೈನಲ್ಲಿ ಒಂದು ಫ್ಲ್ಯಾಟ್ ಕೊಡಿಸು ಎಂದು ಪೀಡಿಸಲಾರಂಭಿಸಿದಾಗ ಶೀನಾಳನ್ನು ಹತ್ಯೆ ಮಾಡಿ, ಆಕೆ ಶವವನ್ನು ಮುಂಬೈ ಹೊರವಲಯದಲ್ಲಿರುವ ಅರಣ್ಯದಲ್ಲಿ ಸುಟ್ಟು ಬಂದಿದ್ದಳು. ಈ ಕೊಲೆ ಮಾಡಲು ತನ್ನ 2ನೇ ಪತಿ ಹಾಗೂ ಆಕೆಯ ಮನೆಯ ಕಾರ್ ಡ್ರೈವರನ್ನು ಬಳಸಿಕೊಂಡಿದ್ದಳು!
2015ರಲ್ಲಿ ಈ ಕೇಸ್ ಹೊರಗೆ ಬಂದಿದ್ದಾಗ, ರಾಷ್ಟ್ರಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಸಾರ್ವಜನಿಕ ವಲಯದಲ್ಲಿ ಈಕೆಯೂ ಒಬ್ಬ ತಾಯಿಯಾ ಎಂದೆಲ್ಲಾ ಜನರು ಮಾತನಾಡಿಕೊಳ್ಳುತ್ತಿದ್ದರು. ಈ ಕೇಸ್ ನಲ್ಲಿ ಇಂದ್ರಾಣಿ, ಆಕೆಯ ಕಾರ್ ಡ್ರೈವರ್, ಆಕೆಯ ಪತಿ ಪೀಟರ್ ಮುಖರ್ಜಿಯಾ (ಹತ್ಯೆಗೆ ಸಹಕಾರ ಕೊಟ್ಟಿರಬಹುದಾದ ಅನುಮಾನದ ಮೇಲೆ) ಅರೆಸ್ಟ್ ಮಾಡಲಾಗಿತ್ತು. 2019ರಲ್ಲಿ ಪೀಟರ್ ಮುಖರ್ಜಿಯಾ ಅವರು ಇಂದ್ರಾಣಿಯಿಂದ ವಿಚ್ಛೇದನ ಪಡೆದಿದ್ದರು. 2015ರಲ್ಲಿ ಬಂಧನಕ್ಕೊಳಗಾಗಿದ್ದ ಇಂದ್ರಾಣಿ ಮುಖರ್ಜಿಯಾಗೆ ಬರೋಬ್ಬರಿ ಆರೂವರೆ ವರ್ಷಗಳ ನಂತರ ಜಾಮೀನು ಸಿಕ್ಕಿತ್ತು.
ಪೀಟರ್ ಮುಖರ್ಜಿಯಾ ಎಂಬ ಸಿರಿವಂತನನ್ನು ಮದುವೆಯಾಗಿ, ಕೋಟ್ಯಂತರ ರೂ. ಆಸ್ತಿಯ ಮಾಲೀಕಳಾಗಿ ಮೆರೆದಿದ್ದ ಅದೇ ಇಂದ್ರಾಣಿ ಮುಖರ್ಜಿಯಾ ಈಗ ಅಕ್ಷರಶಃ ಪಾಪರ್ ಆಗಿದ್ದಾಳೆ. ಹಾಗೆಂದು ಆಕೆಯ ಎರಡನೇ ಪತಿಯಿಂದ ಪಡೆದ ಮಗಳು ವಿಧಿ ಮುಖರ್ಜಿಯಾ ಹೇಳಿದ್ದಾಳೆ.
ಅಸಲಿಗೆ, ಈ ವಿಧಿ ಮುಖರ್ಜಿಯಾ ಅವರೇ, ಈ ಕೇಸ್ ನಲ್ಲಿ ಪ್ರಮುಖ ಸಾಕ್ಷಿ. ಇತ್ತೀಚೆಗೆ, ನ್ಯಾಯಾಲಯದಲ್ಲಿ ಇದೇ ಕೇಸ್ ಗೆ ಸಂಬಂಧಿಸಿದ ಹೇಳಿಕೆಯನ್ನು ನೀಡುವಾಗ ವಿಧಿ ಮುಖರ್ಜಿಯಾ, ಇಂದ್ರಾಣಿ ಮುಖರ್ಜಿಯಾ ಬಳಿ ಅಮೂಲ್ಯವಾದ ಆಭರಣಗಳಿದ್ದವು. ಅವುಗಳನ್ನು ಪೀಟರ್ ಮುಖರ್ಜಿಯಾರವರ ಗಂಡು ಮಕ್ಕಳು (ಇವರು ಪೀಟರ್ ಮುಖರ್ಜಿಯಾ ಮೊದಲ ಪತ್ನಿಯ ಮಕ್ಕಳು, ಇಂದ್ರಾಣಿ ಮುಖರ್ಜಿ ಅವರಿಗೆ ಎರಡನೇ ಪತ್ನಿ ) ತಮ್ಮ ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಇಂದ್ರಾಣಿ ಮುಖರ್ಜಿಯ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 7 ಕೋಟಿ ರೂ. ಹಣವನ್ನು ಹಂತಹಂತವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಅಲ್ಲಿಗೆ, ಇಂದ್ರಾಣಿ ಮುಖರ್ಜಿಯೀಗ ಅಕ್ಷರಶಃ ಪಾಪರ್ ಆಗಿದ್ದಾಳೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ಇಂದ್ರಾಣಿ ಮುಖರ್ಜಿಯಾ ಕೇಸ್ ನಲ್ಲಿ ಸಿಬಿಐನವರು ತಮ್ಮಿಂದ ಬಲವಂತದ ಹೇಳಿಕೆಗಳನ್ನು ನೀಡಿದ್ದಾರೆ. ಇಂದ್ರಾಣಿ ಮುಖರ್ಜಿಯನ್ನು ಶೀನಾ ಬೋರಾ ಕೇಸ್ ನಲ್ಲಿ ಸಿಕ್ಕಿಹಾಕಿಸಲೆಂದೇ ಪೀಟರ್ ಮುಖರ್ಜಿಯಾ ಮೊದಲ ಪತ್ನಿಯ ಮಕ್ಕಳು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.
ಆಕೆಯ ಸಾಕ್ಷಿಯನ್ನು ಕೋರ್ಟ್ ಹೇಗೆ ಪರಿಗಣಿಸುತ್ತದೋ ಗೊತ್ತಿಲ್ಲ. ಆದರೆ, ಮಾಡಿದ್ದುಣ್ಣೋ ಮಹರಾಯ ಎಂಬಂತೆ ಯಾವ ಸಂಪತ್ತಿನ ಹಿಂದೆ ಹೋಗಿ ಆಕೆ ತನ್ನ ಗಂಡಂದರಿಗೆ, ತನ್ನ ಮಕ್ಕಳಿಗೆ ಅನ್ಯಾಯ ಮಾಡಿದ್ದಳೋ ಆ ಸಂಪತ್ತು ಆಕೆಯಿಂದ ಈಗ ಮಾಯವಾಗಿದೆ. ಆಕೆಯ ಹಿಂದಿನ ಗಂಡಂದಿರ ಆರ್ಥಿಕ ಪರಿಸ್ಥಿತಿಗಳನ್ನು ಅವಲೋಕಿಸಿದರೆ ಇದು ಗೊತ್ತಾಗುತ್ತದೆ.
ಸಂಪತ್ತನ್ನು ಅರಸಿ ಹೋದಾಕೆಗೆ ಸಿಕ್ಕಿದ್ದೇನು?
ಆಕೆಯ ಮೊದಲ ಪತಿ ಕಡಿಮೆ ಸಂಬಳದವನು. ಅದಕ್ಕಾಗಿ ಆತನನ್ನು ಬಿಟ್ಟು ಆತನಿಗಿಂತ ಉತ್ತಮ ಸ್ಥಿತಿಯಲ್ಲಿದ್ದ ಸಂಜೀವ್ ಖನ್ನಾ ಎಂಬಾತನನ್ನು ಮದುವೆಯಾಗಿದ್ದಳು. ಆತನೊಂದಿಗೆ ಸಂಸಾರ ನಡೆಸಿದ ಆಕೆ, ಪೀಟರ್ ಮುಖರ್ಜಿಯಾ ಎಂಬ ದೊಡ್ಡ ಶ್ರೀಮಂತ ಸಿಕ್ಕ ಕೂಡಲೇ ಸಂಜೀವ್ ಖನ್ನಾನನ್ನೂ ಬಿಟ್ಟು, ಪೀಟರ್ ಮುಖರ್ಜಿಯಾನನ್ನು ಮದುವೆಯಾಗಿ ಐಷಾರಾಮಿ ಜೀವನ ನಡೆಸುತ್ತಿದ್ದಳು. ಹಿಂದಿನ ಪತಿಯರೊಂದಿಗೆ ಪಡೆದಿದ್ದ ಮಕ್ಕಳನ್ನು ಅಕ್ಷರಶಃ ಅನಾಥಳನ್ನಾಗಿಸಿದ್ದಳು. ಆಕೆ ಮಾಡಿದ ಇಂಥ ಸಾಲು ಸಾಲು ಅನ್ಯಾಯಗಳಿಂದ ಇದನ್ನೇ ಅಲ್ಲವಾ… ಮಾಡಿದ್ದುಣ್ಣೋ ಮಹರಾಯ ಎಂದು ಹೇಳೋದು?
