ಭಾರತದ ತಂತ್ರಜ್ಞಾನದ ವಿಜಯ: ಚೀನಾವನ್ನು ತಳ್ಳಿ ಅಮೆರಿಕಕ್ಕೆ 33 ಲಕ್ಷ ಐಫೋನ್ ರಫ್ತು

ನವದೆಹಲಿ: ಮೇಕ್ ಇನ್ ಇಂಡಿಯಾ ಅಭಿಯಾನದ ಯಶಸ್ಸೋ, ಆ್ಯಪಲ್ ಕಂಪನಿಯ ವ್ಯಾಪಾರ ಚಾಣಾಕ್ಷ್ಯತೆಯೋ, ಸ್ವಾವಲಂಬಿ ಭಾರತದ ದೃಢ ಹೆಜ್ಜೆಯೋ ಭಾರತವು ಐಫೋನ್ ರಫ್ತಿನಲ್ಲಿ ಹೊಸ ದಾಖಲೆ ಸ್ಥಾಪಿಸಿದೆ. ಅಮೆರಿಕಕ್ಕೆ ಐಫೋನ್ ರಫ್ತು ಮಾಡುವುದರಲ್ಲಿ ಚೀನಾವನ್ನು ಭಾರತ ಹಿಂದಿಕ್ಕಿದೆ. ಇಂಥದ್ದೊಂದು ಬೆಳವಣಿಗೆ ಇತಿಹಾಸದಲ್ಲೇ ಇದೇ ಮೊದಲು. 2025ರ ಏಪ್ರಿಲ್ ತಿಂಗಳಲ್ಲಿ ಭಾರತವು ಬರೋಬ್ಬರಿ 33 ಲಕ್ಷ ಐಫೋನ್ಗಳನ್ನು ಅಮೆರಿಕಕ್ಕೆ ರಫ್ತು ಮಾಡಿತ್ತು. ಅದೇ ತಿಂಗಳಲ್ಲಿ ಅಮೆರಿಕಕ್ಕೆ ಹೋದ ಮೇಡ್ ಇನ್ ಚೀನಾ ಐಫೋನ್ಗಳ ಸಂಖ್ಯೆ 9 ಲಕ್ಷ ಮಾತ್ರ. ಮಾರ್ಕೆಟ್ ರಿಸರ್ಚ್ ಸಂಸ್ಥೆಯಾದ ಕ್ಯಾನಾಲಿಸ್ ಬಿಡುಗಡೆ ಮಾಡಿದ ವರದಿಯಲ್ಲಿ ಈ ದತ್ತಾಂಶ ಕಂಡುಬಂದಿದೆ.
ಮೇಡ್ ಇನ್ ಇಂಡಿಯಾ ಐಫೋನ್ಗಳು ಚೀನಾ ಮೀರಿಸಲು ಏನು ಕಾರಣ?
ಏಪ್ರಿಲ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳಿಗೆ ಟ್ಯಾರಿಫ್ ಹೇರಿಕೆ ದರವನ್ನು ಪ್ರಕಟಿಸಿದರು. ಆದರೆ, ನಂತರದ ದಿನಗಳಲ್ಲಿ ಚೀನಾ ಬಿಟ್ಟು ಉಳಿದ ದೇಶಗಳ ಸರಕುಗಳಿಗೆ ಟ್ಯಾರಿಫ್ ಅನ್ನು ಶೇ. 10ರ ದರಕ್ಕೆ ಇಳಿಸಲಾಯಿತು. ಆ್ಯಪಲ್ನ ಐಫೋನ್ಗಳಿಗೆ ಟ್ಯಾರಿಫ್ನಿಂದ ವಿನಾಯಿತಿಯನ್ನೂ ಕೊಡಲಾಯಿತು. ಅಷ್ಟರಲ್ಲಿ ಆ್ಯಪಲ್ ಕಂಪನಿಯು ಮೇಡ್ ಇನ್ ಇಂಡಿಯಾ ಐಫೋನ್ಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಅಮೆರಿಕಕ್ಕೆ ಕಳುಹಿಸಿತ್ತು. ಮಾರ್ಚ್ ತಿಂಗಳಲ್ಲಿ ಭಾರತದಿಂದ ಬರೋಬ್ಬರಿ 44 ಲಕ್ಷ ಐಫೋನ್ಗಳು ಅಮೆರಿಕಕ್ಕೆ ಹೋಗಿದ್ದುವು.
ಮಾರ್ಚ್ನಲ್ಲೇ ಸಾಕಷ್ಟು ದಾಸ್ತಾನು ಇದ್ದರಿಂದ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಐಫೋನ್ಗಳನ್ನು ಆಮದು ಮಾಡಿಕೊಳ್ಳುವ ಅಗತ್ಯ ಇರಲಿಲ್ಲ. ಹೀಗಾಗಿ, ಭಾರತದಿಂದ ಮಾರ್ಚ್ನಲ್ಲಿ 44 ಲಕ್ಷದಷ್ಟು ರಫ್ತಾಗಿದ್ದ ಐಫೋನ್ಗಳು ಏಪ್ರಿಲ್ನಲ್ಲಿ 33 ಲಕ್ಷ ಸಂಖ್ಯೆ ಮಾತ್ರವೇ ಅಮೆರಿಕಕ್ಕೆ ಹೋಗಿದ್ದು. ಆದರೂ ಕೂಡ ಚೀನಾಗಿಂತ ಮೇಡ್ ಇನ್ ಇಂಡಿಯಾ ಐಫೋನ್ಗಳೇ ಹೆಚ್ಚು ಇದ್ದದ್ದು ಇದೇ ಮೊದಲ ಸಲ.
ಜನವರಿಯಿಂದ ಏಪ್ರಿಲ್ವರೆಗಿನ ನಾಲ್ಕು ತಿಂಗಳನ್ನು ಗಣನೆಗೆ ತೆಗೆದುಕೊಂಡರೆ ಚೀನಾ ಮುಂದಿದೆ. ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ 1.32 ಕೋಟಿ ಮೇಡ್ ಇನ್ ಚೀನಾ ಐಫೋನ್ಗಳು ಅಮೆರಿಕಕ್ಕೆ ಸಾಗಣೆ ಆಗಿವೆ. ಇದೇ ಅವಧಿಯಲ್ಲಿ ಭಾರತದಿಂದ ಹೋದ ಐಫೋನ್ಗಳು 1.15 ಕೋಟಿ. ಆದರೆ, ಮಾರ್ಚ್ ತಿಂಗಳಿಂದ ಮೇಡ್ ಇನ್ ಇಂಡಿಯಾ ಐಫೋನ್ಗಳು ಅಮೆರಿಕಕ್ಕೆ ಹೋಗುತ್ತಿರುವ ಪ್ರಯಾಣ ಗಣನೀಯವಾಗಿ ಹೆಚ್ಚಾಗಿದೆ.
ಅಮೆರಿಕ, ಚೀನಾ ಒತ್ತಡ ನಡುವೆಯೂ ಭಾರತಕ್ಕೆ ಪ್ರಾಶಸ್ತ್ಯ ಕೊಡುತ್ತಿರುವ ಆ್ಯಪಲ್
ಆ್ಯಪಲ್ ಕಂಪನಿ ನೇರವಾಗಿ ತನ್ನ ಉತ್ಪನ್ನಗಳನ್ನು ತಯಾರಿಸುವುದಿಲ್ಲ. ಫಾಕ್ಸ್ಕಾನ್, ಪೆಗಾಟ್ರಾನ್, ಟಾಟಾ ಎಲೆಕ್ಟ್ರಾನಿಕ್ಸ್ ಮೊದಲಾದ ಕಂಪನಿಗಳಿಗೆ ಅಸೆಂಬ್ಲಿಂಗ್ ಗುತ್ತಿಗೆ ಕೊಡುತ್ತದೆ. ವಿವಿಧ ಬಿಡಿಭಾಗಗಳ ತಯಾರಿಕೆಯನ್ನು ಬೇರೆ ಬೇರೆ ಕಂಪನಿಗಳು ಮಾಡುತ್ತವೆ. ಈ ಎಲ್ಲಾ ತಯಾರಿಕೆಯ ಇಕೋಸಿಸ್ಟಂ ಚೀನಾದಲ್ಲಿ ಇದೆ. ಆದರೂ ಕೂಡ ಕೋವಿಡ್ ಬಳಿಕ ಉಂಟಾದ ತೊಂದರೆ ಗಮನದಲ್ಲಿರಿಸಿಕೊಂಡು ಆ್ಯಪಲ್ ಕಂಪನಿ ತನ್ನ ಸಪ್ಲೈ ಚೈನ್ ಅನ್ನು ಚೀನಾದಿಂದ ಹೊರಗೂ ವಿಸ್ತರಿಸಲು ನಿರ್ಧರಿಸಿತು. ಇದರ ಪರಿಣಾಮವಾಗಿ ಭಾರತದಲ್ಲಿ ಐಫೋನ್ ಫ್ಯಾಕ್ಟರಿಗಳು ಸ್ಥಾಪನೆಯಾಗಿವೆ. ಅದಕ್ಕೆ ಬೇಕಾದ ಬಿಡಿಭಾಗಗಳ ತಯಾರಿಕೆಯ ಇಕೋಸಿಸ್ಟಂ ಕೂಡ ಒಂದೊಂದಾಗಿ ಭಾರತದಲ್ಲಿ ನೆಲೆಗೊಳ್ಳುತ್ತಿವೆ.
ಆ್ಯಪಲ್ನ ಸಪ್ಲೈ ಚೈನ್ ಭಾರತಕ್ಕೆ ಹರಡುತ್ತಿರುವುದು ಚೀನಾಗೆ ಅಸಮಾಧಾನ ತಂದಿದೆ. ಪರೋಕ್ಷವಾಗಿ ಅದು ಒತ್ತಡ ಹಾಕುತ್ತಿದೆ. ಇನ್ನು, ಅಮೆರಿಕ ಕೂಡ ಐಫೋನ್ ತಯಾರಿಕೆಯು ತನ್ನ ದೇಶದಲ್ಲೇ ಆಗಬೇಕು ಎಂದು ಹೊಸ ವರಸೆ ತೆಗೆಯುತ್ತಿದೆ. ಈ ಒತ್ತಡಗಳ ನಡುವೆಯೂ ಆ್ಯಪಲ್ ಕಂಪನಿ ಭಾರತದ ಮೇಲಿನ ತಮ್ಮ ಒಲವನ್ನು ಮುಂದುವರಿಸಿದ್ದಾರೆ.