ಭಾರತದ ಎಸ್-400 ರೂಪದರ್ಶಿ ‘ಪ್ರಾಜೆಕ್ಟ್ ಕುಶ’: ಶತ್ರು ಕ್ಷಿಪಣಿಗಳಿಗೆ ದೇಶೀ ಪ್ರತಿಕ್ರಿಯೆ

ನವದೆಹಲಿ :ರಷ್ಯಾದ ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ರೀತಿಯಲ್ಲಿ ಡಿಆರ್‌ಡಿಒ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿ.(ಬಿಇಎಲ್) ಜಂಟಿಯಾಗಿ “ಪ್ರಾಜೆಕ್ಟ್ ಕುಶ’ ಅಭಿವೃದ್ಧಿಪಡಿಸಲಿವೆ. ಇದು ಶತ್ರು ಕ್ಷಿಪಣಿಗಳನ್ನು ಹೊಡೆದುರುಳಿಸುವ ದೇಶಿ ವ್ಯವಸ್ಥೆಯಾಗಿರಲಿದೆ.

ಭಾರತದ ಈ ಕ್ಷಿಪಣಿ ನಿಗ್ರಹ ವ್ಯವಸ್ಥೆಯು ಶತ್ರು ರಾಷ್ಟ್ರಗಳ ಡ್ರೋನ್, ಕ್ಷಿಪಣಿ ಮತ್ತು ಯುದ್ಧವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿರಲಿದೆ.
ಕ್ಷಿಪಣಿ ನಿರೋಧಕ ವ್ಯವಸ್ಥೆಯ ವಿನ್ಯಾಸ, ರಾಡಾರ್ ಮತ್ತು ನಿಯಂತ್ರಣ ವ್ಯವಸ್ಥೆ ಸೇರಿದಂತೆ ಪ್ರಮುಖ ಉಪಕರಣಗಳ ಉತ್ಪಾದನೆಗಳಿಗೆ ಸಂಬಂಧಿಸಿದಂತೆ ಬಿಇಎಲ್, ಡಿಆರ್‌ಡಿಒ ಜತೆಗೆ ಕೆಲಸ ಮಾಡುತ್ತಿದೆ ಎಂದು ಬಿಇಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮನೋಜ್ ಜೈನ್ ತಿಳಿಸಿದ್ದಾರೆ. ಸುಮಾರು 21,700 ಕೋಟಿ ರೂ. ಮೊತ್ತದ ಪ್ರಾಜೆಕ್ಟ್ ಕುಶ, 2028-29ರ ಹೊತ್ತಿಗೆ ಕಾರ್ಯಾಚರಣೆಗೆ ಲಭ್ಯವಾಗಲಿದೆ. ಇದು ದೇಶದ ವಾಯುಪಡೆ ಮತ್ತು ನೌಕಾಪಡೆಗೆ ಬಲ ನೀಡಲಿದೆ ಎಂದು ತಿಳಿಸಿದ್ದಾರೆ.
ಈ ವ್ಯವಸ್ಥೆಯು ಎಂ1 (150 ಕಿ.ಮೀ.), ಎಂ2 (250 ಕಿ.ಮೀ.), ಮತ್ತು ಎಂ3 (350 ಕಿ.ಮೀ.) ಎಂಬ ಮೂರು ವಿಧದ ವೈಮಾನಿಕ ದಾಳಿ ನಿರೋಧಕ ಕ್ಷಿಪಣಿಗಳನ್ನು ಒಳಗೊಂಡಿದೆ. ಶಬ್ಧದ ವೇಗಕ್ಕಿಂತ 7 ಪಟ್ಟು ವೇಗದಲ್ಲಿ ಅಪ್ಪಳಿಸಬಹುದಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಿಗ್ರಹಿಸುವ ಸಾಮರ್ಥ್ಯವನ್ನು ಈ ವ್ಯವಸ್ಥೆ ಹೊಂದಿದೆ.