ಭಾರತದ ‘ಮತ್ಸ್ಯ-6000’ ಮಿಷನ್ – ಆಳ ಸಮುದ್ರ ಗಣಿಗಾರಿಕೆಯ ಹೊಸ ಅಧ್ಯಾಯ

ಆಕಾಶದ ಎತ್ತರಕ್ಕೆ ಏರಿದ್ದಲ್ಲದೆ ಈಗ ಸಮುದ್ರದ ಆಳಕ್ಕೆ ಇಳಿದು ಅಲ್ಲಿನ ಕೌತುಕಗಳನ್ನು ಅರಿತು ಖನಿಜ ತೆಗೆಯುವ ಉತ್ಸುಕತೆ ಹೆಚ್ಚಿದ್ದು ಇದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಸಮುದ್ರದಾಳ ಅಧ್ಯಯನ ಹಾಗೂ ಖನಿಜ ಪತ್ತೆ ಪ್ರಕ್ರಿಯೆಯಲ್ಲಿ ಭಾರತ ಶುಭಾರಂಭ ಮಾಡಿದ್ದು ಈ ಕುರಿತ ಮಾಹಿತಿ ಇಲ್ಲಿದೆ.

ಏನಿದು ಆಳ ಸಮುದ್ರ ಗಣಿಗಾರಿಕೆ?
ಸಮುದ್ರದ ತಳದಲ್ಲಿ ಖನಿಜಗಳನ್ನು ಪರಿಶೋಧಿಸಿ ಅಲ್ಲಿಂದ ಅದನ್ನು ಹೊರತೆಗೆಯುವ ಪ್ರಕ್ರಿಯೆ. ಸಮುದ್ರದ ಸಾವಿರಾರು ಮೀಟರ್ ತಳದಲ್ಲಿರುವ ಖನಿಜ ನಿಕ್ಷೇಪಗಳನ್ನು ಗುರುತಿಸಿ ಮ್ಯಾಂಗನೀಸ್, ನಿಕ್ಕಲ್, ಕೋಬಾಲ್ಟ್ ಸೇರಿ ಇತರ ಲೋಹಗಳನ್ನು ಹೊರತೆಗೆಯಲಾಗುತ್ತದೆ. ಫೆಸಿಫಿಕ್ ಸಾಗರ, ಹಿಂದೂ ಮಹಾಸಾಗರ ಸೇರಿದಂತೆ ಸಮುದ್ರ ಆಳದಲ್ಲಿ ಬೇರೆ ಬೇರೆ ಲೋಹಗಳುಳ್ಳ ನಿಕ್ಷೇಪಗಳು ಲಕ್ಷಾಂತರ ವರ್ಷಗಳಿಂದ ಇವೆ ಎಂಬುದನ್ನು ಪತ್ತೆ ಮಾಡಲಾಗಿದೆ. ಫೆಸಿಫಿಕ್ ಮಹಾಸಾಗರದ 4ರಿಂದ 6 ಸಾವಿರ ಮೀಟರ್ ಕೆಳಗೆ ಫಾಲಿಮೆಟಾಲಿಕ್ ನಿಕ್ಷೇಪಗಳಿರುವುದನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಸಮುದ್ರ ತಳದಲ್ಲಿ ದೊಡ್ಡ ಕಲ್ಲಿನ ಆಕಾರದಲ್ಲಿ ಇರುವ ಈ ನಿಕ್ಷೇಪಗಳನ್ನು ಮೇಲಕ್ಕೆತ್ತಿ ಅವುಗಳನ್ನು ಪರಿಷ್ಕರಿಸಿ ಸಿಗುವ ಲೋಹಗಳನ್ನು ಅಗತ್ಯಕ್ಕೆ ಬಳಸುವ ನಿಟ್ಟಿನಲ್ಲಿ ಪ್ರಯೋಗಗಳು ನಡೆದಿವೆ.
ಗಣಿಗಾರಿಕೆಗೆ ತಿಮಿಂಗಿಲಗಳಿಗಿಂತ ಭಾರದ ಯಂತ್ರಗಳ ಬಳಕೆ
ಆಳ ಸಮುದ್ರಕ್ಕೆ ತಿಮಿಂಗಿಲಗಳಿಗಿಂತ ಭಾರವಾದ ದೈತ್ಯ ಯಂತ್ರಗಳನ್ನು ಇಳಿಸಲಾಗುತ್ತದೆ. ಆ ಯಂತ್ರಗಳು ನಿಕ್ಷೇಪಗಳನ್ನು ಎತ್ತಿಕೊಳ್ಳಲಿವೆ. ಬಳಿಕ ಹಲವಾರು ಕಿ.ಮೀ. ಇರುವ ಕೊಳವೆಗಳ ಮೂಲಕ ಪಂಪ್ ಮಾಡಿ ಹಡಗುಗಳಿಗೆ ರವಾನಿಸಲಾಗುತ್ತದೆ. ಈ ವೇಳೆ ಬರುವ ಮರಳು, ಸಮುದ್ರದ ನೀರು, ಇತರ ಖನಿಜ ತ್ಯಾಜ್ಯಗಳನ್ನು ಪುನಃ ಪಂಪ್ ಮಾಡಿ ಸಮುದ್ರಕ್ಕೆ ಬಿಡಲಾಗುತ್ತದೆ. ಆಳ ಸಮುದ್ರ ಗಣಿಗಾರಿಕೆ ಭೂಮಿ ಮೇಲಿನ ಖನಿಜ ನಿಕ್ಷೇಪ ಗುರುತಿಸಿ ಗಣಿಗಾರಿಕೆ ನಡೆಸಿದಷ್ಟು ಸುಲಭವಲ್ಲ. ಇದನ್ನು ಕೈಗೊಳ್ಳಲು ಅನೇಕ ಸವಾಲುಗಳಿವೆ. ಎದುರಾಗುವ ಸವಾಲುಗಳನ್ನು ಮೀರಿ ಗಣಿಗಾರಿಕೆ ನಡೆಸುವ ಬಗ್ಗೆ ಅನೇಕ ಪ್ರಯೋಗಗಳು ನಡೆದಿವೆ. ಇದು ಹೊಸ ಉದ್ಯಮ ವಾಗಿದ್ದರಿಂದ ಸಣ್ಣ ಪ್ರಮಾಣ ಪರೀಕ್ಷೆಗಳು ನಡೆಯುತ್ತಿವೆ ಹೊರತು ವಿಶ್ವದ ಯಾವ ರಾಷ್ಟ್ರದಲ್ಲೂ ಎಲ್ಲಿಯೂ ಆಳ ಸಮುದ್ರ ಗಣಿಗಾರಿಕೆ ಪೂರ್ಣ ಪ್ರಮಾಣದಲ್ಲಿ ನಡೆದಿರುವ ಉದಾಹರಣೆ ಇಲ್ಲ. ಆದರೆ ಕೆಲವು ದೇಶಗಳಲ್ಲಿ ಗಣಿ ಕಂಪೆನಿಗಳು ಸಮುದ್ರ ಗಣಿಗಾರಿಕೆ ನಡೆಸಿ ಇದನ್ನೊಂದು ಹೊಸ ಉದ್ಯಮವಾಗಿಸಲು ತಯಾರಿ ನಡೆಸಿವೆ. ಸಮುದ್ರದ ಖನಿಜ ಗಳಿಂದ ಬ್ಯಾಟರಿ, ಶಸ್ತಾಸ್ತ್ರ ಸೇರಿ ಹಲವು ವಸ್ತು ತಯಾರಿಕೆಗೆ ಬಳಸಬಹುದಾಗಿದೆ.
ಆಳ ಸಮುದ್ರ ಗಣಿಗಾರಿಕೆ ಯಾಕೆ?
ಆಳ ಸಮುದ್ರ ಗಣಿಗಾರಿಕೆಯಿಂದ ಖನಿಜಗಳ ಆವಶ್ಯಕತೆಗಳನ್ನು ನೀಗಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಇದರಿಂದ ಭೂಮಿ ಮೇಲಿನ ಖನಿಜ ನಿಕ್ಷೇಪಗಳ ಬಳಕೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೇ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಬಹುದು ಎಂಬುದು ಲೆಕ್ಕಾಚಾರ. ಆದರೆ ಸಮುದ್ರದ ಆಳದಿಂದ ಖನಿಜ ನಿಕ್ಷೇಪ ಶೋಧಿಸಿ ಅದನ್ನು ಪರಿಷ್ಕರಿಸಿ ಅದರಿಂದ ಸಿಗುವ ಲೋಹಗಳನ್ನೆಲ್ಲ ವಿಂಗಡಿಸುವುದು ಸುಲಭವಲ್ಲ. ಅಲ್ಲದೇ ಯಾವ ಪ್ರಮಾಣದಲ್ಲಿ ಖನಿಜಗಳು ಸಿಗಬಹುದು? ಇದರಿಂದ ಲಾಭವಾಗಲಿದೆಯೇ ಎಂಬುದರ ಬಗ್ಗೆ ಇನ್ನೂ ಅಧ್ಯಯನ ನಡೆದಿದೆ.
“ಭಾರತ ಮತ್ಸ್ಯ -6000′ ಯೋಜನೆ
ಆಳ ಸಮುದ್ರ ಗಣಿಗಾರಿಕೆ ಯೋಜನೆಗೆ ಭಾರತವೂ ಮುಂದಡಿ ಇಟ್ಟಿದ್ದು ಸಮುದ್ರಯಾನ ಮಿಷನ್ ಇದರ ಪ್ರಮುಖ ಹೆಜ್ಜೆಯಾಗಿದೆ. ಸ್ವಾತಂತ್ರ್ಯೋತ್ಸ ವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದ “ಡೀಪ್ ಓಷನ್ ಮಿಷನ್’ನತ್ತ ಭಾರತ ದೊಡ್ಡ ಹೆಜ್ಜೆ ಇಟ್ಟಿದೆ. ಇದಕ್ಕಾಗಿ “ಭಾರತ ಮತ್ಸ್ಯ-6000′ ಯೋಜನೆ ರೂಪಿಸಿದ್ದು ಈ ಯೋಜನೆ ಭಾಗವಾಗಿ ಸಮುದ್ರದಾಳಕ್ಕೆ ಹೋಗುವ ಭಾರತೀಯ ವಿಜ್ಞಾನಿಗಳು ಫ್ರಾನ್ಸ್‌ನಲ್ಲಿ 5000 ಮೀಟರ್ ಆಳದವರೆಗೆ ಹೋಗುವ ತರಬೇತಿ ಪೂರ್ಣಗೊಳಿಸಿದ್ದಾರೆ.
12 ಗಂಟೆಗಳ ಕಾಲ ಸಮುದ್ರದಲ್ಲಿ ಅಧ್ಯಯನ
ಸಮುದ್ರದಾಳಕ್ಕೆ ತೆರಳಿ ಖನಿಜ ನಿಕ್ಷೇಪ ಸೇರಿದಂತೆ ಆಳ ಸಮುದ್ರದ ನಿಖರ ಅಧ್ಯಯನ, ಅಲ್ಲಿಯ ಜೀವಿಗಳು ಸೇರಿದಂತೆ ಅಲ್ಲಿರುವ ಹಲವು ವಿಶೇಷಗಳ ಬಗ್ಗೆ ಅರಿಯುವುದು ಈ ಯೋಜನೆಯ ಉದ್ದೇಶ. ಇದಕ್ಕಾಗಿ ಚೆನ್ನೈಯಲ್ಲಿ ವಿಶೇಷವಾದ ಸಬ್‌ಮರೀನ್‌ನನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಸುಮಾರು 6000 ಮೀಟರ್ ಕೆಳಗೆ ಸಾಗಬಲ್ಲ ಮರೀನ್ ಇದಾಗಿದ್ದರಿಂದ ಇದಕ್ಕೆ “ಮತ್ಸ್ಯ-6000′ ಹೆಸರಿಡಲಾಗಿದೆ. ಇದರ ಮೂಲಕ ಸಮುದ್ರದಾಳಕ್ಕೆ ತೆರಳುವ ವಿಜ್ಞಾನಿಗಳು ಸುಮಾರು 12 ಗಂಟೆಗಳ ಕಾಲ ಅಧ್ಯಯನ ನಡೆಸಬಹುದಾಗಿದೆ.
ಭಾರತದ ಎಲ್ಲೆಲ್ಲಿ ಅಧ್ಯಯನ?
ಆಳ ಸಮುದ್ರ ಯೋಜನೆಗಾಗಿ ಅಂತಾರಾಷ್ಟ್ರೀಯ ಸಮುದ್ರತಳ ಪ್ರಾಧಿಕಾರದ ಜತೆ ಭಾರತ 2 ಒಪ್ಪಂದಗಳಿಗೆ ಸಹಿ ಹಾಕಿದೆ. 2002ರಲ್ಲಿ ಆದ ಒಪ್ಪಂದದಂತೆ ಹಿಂದೂ ಮಹಾಸಾಗ ರದ 75,000 ಚದರ ಕಿಮೀ ವ್ಯಾಪ್ತಿ, 2016ರ ಒಪ್ಪಂದದಂತೆ ಸಮುದ್ರದ ಅಳದಲ್ಲಿರುವ ಖನಿಜ ನಿಕ್ಷೇಪಗಳ ಗುರುತಿ ಸುವಿಕೆ ಹಾಗೂ ವಿವಿಧ ಲೋಹಗಳ ಲಭ್ಯತೆ ಬಗ್ಗೆ ಅಧ್ಯಯನ ನಡೆಯಲಿದೆ. ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (ಎನ್‌ಐಒಟಿ) ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಮ್ಯಾನ್ಮಾರ್ ನಡುವಿನ ಸಮುದ್ರದಲ್ಲಿ ಸಮುದ್ರತಳದ ಖನಿಜ ಶೋಧ ಅಧ್ಯಯನ ನಡೆಸಲಾಗಿತ್ತು. ಸಮುದ್ರ ತಳದಲ್ಲಿ ಲಕ್ಷಾಂತರ ವರ್ಷಗಳಿಂದ ಪ್ರಾಕೃತಿಕವಾಗಿ ರೂಪುಗೊಂಡಿರುವ ಬಂಡೆಗಳಿದ್ದು (ಪಾಲಿಮೆಟಾಲಿಕ್ ಗಂಟು) ಇವು ಯಾವ್ಯಾವ ಲೋಹಗಳನ್ನು ಒಳಗೊಂಡಿವೆ ಎಂಬುದರ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನಕ್ಕಾಗಿ “ವರಾಹ- 3′ ಎಂಬ ಯಂತ್ರವನ್ನು ಬಳಸಲಾಗಿತ್ತು. ಈಗ ಹಿಂದೂ ಮಹಾಸಾಗರದಲ್ಲಿ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನಿಗಳು ಮುಂದಾಗಿದ್ದಾರೆ.
ಅಮೆರಿಕ, ಚೀನ, ಫ್ರಾನ್ಸ್ ಸಾಲಿಗೆ ಭಾರತ ಸೇರ್ಪಡೆ
ಜಗತ್ತಿನ ಹಲವು ದೇಶಗಳಲ್ಲಿ ಈಗಾಗಲೇ ಆಳ ಸಮುದ್ರ ಅಧ್ಯಯನ ನಡೆದಿದ್ದು ಈಗ ಭಾರತವೂ ಈ ದೇಶಗಳ ಸಾಲಿನಲ್ಲಿ ಸೇರ್ಪಡೆಗೊಂಡಿದೆ. ಅಮೆರಿಕ, ಚೀನ, ಫ್ರಾನ್ಸ್ ಸೇರಿದಂತೆ ಹಲವೆಡೆ ಆಳ ಸಮುದ್ರ ಅಧ್ಯಯನ ಸಕ್ರಿಯವಾಗಿ ನಡೆದಿದ್ದು ಭಾರತವೂ ಈಗ ಶುಭಾರಂಭಕ್ಕೆ ಮುಂದಾಗಿದೆ. ಆಳ ಸಮುದ್ರ ಅಧ್ಯಯನ ಹಾಗೂ ಖನಿಜ ಶೋಧಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಮತಿ ಅಗತ್ಯ. ತಮ್ಮ ದೇಶದ ವ್ಯಾಪ್ತಿಯಲ್ಲಿ ಖನಿಜ ಶೋಧಿಸಲೂ ಸಹ ಅನುಮತಿ ಅವಶ್ಯವಾಗಿದ್ದು ಭಾರತ ಈ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಸಮುದ್ರ ಮತ್ಸé ಯೋಜನೆಯಿಂದ ಭಾರತದ ಸಮುದ್ರ ಅಧ್ಯಯನದಲ್ಲೊಂದು ಹೊಸ ಪರ್ವ ಆರಂಭವಾಗಲಿದೆ. ಅಲ್ಲದೆ 2026ರ ಒಳಗೆ ಈ ಮಿಷನ್ ಅನ್ನು ಯಶಸ್ವಿಗೊಳಿಸುವ ನಿರೀಕ್ಷೆ ಇದೆ.
ಆಳ ಸಮುದ್ರ ಗಣಿಗಾರಿಕೆ ದುಷ್ಪರಿಣಾಮ?
ಗಣಿಗಾರಿಕೆ ಎಂಬುದೇ ಪರಿಸರದ ಮೇಲಿನ ಪ್ರಹಾರ. ಅದರಲ್ಲೂ ಆಳ ಸಮುದ್ರ ಗಣಿಗಾರಿಕೆ ಇನ್ನೂ ಅಪಾ ಯಕಾರಿ ಎಂಬುದು ಕಡಲ ತಜ್ಞರ ಅಭಿಪ್ರಾಯ. ಕಾರ್ಖಾ ನೆಗಳ ತ್ಯಾಜ್ಯ, ಮನುಷ್ಯ ಬಳಸಿದ ನೀರು, ಸೇರಿದಂತೆ ಭೂಮಿ ಮೇಲಿನ ಅತೀ ಹೆಚ್ಚು ತ್ಯಾಜ್ಯ ಈಗಾಗಲೇ ಸಮುದ್ರ ಸೇರುತ್ತಿದೆ. ಇನ್ನು ಆಳ ಸಮುದ್ರದಲ್ಲಿ ಗಣಿಗಾರಿಕೆ ನಡೆಸಿದರೆ ಸಮುದ್ರದ ಒಳಗ ಷ್ಟೇ ಅಲ್ಲ. ಇಡೀ ವಾತಾವರ ಣದಲ್ಲೇ ಏರುಪೇರಾಗಲಿದೆ. ಸಾಗರವು ಹೆಚ್ಚುವರಿ ಶಾಖದ ಶೇ.90ರಷ್ಟು ಮತ್ತು ಭೂಮಿ ಯಲ್ಲಿ ಉತ್ಪತ್ತಿಯಾಗುವ ಶೇ.40ರಷ್ಟು ಇಂಗಾಲದ ಡೈ ಆಕ್ಸೆ„ಡ್ ಹೀರಿಕೊಳ್ಳುತ್ತಿದ್ದು ಸಮುದ್ರ ಗಣಿಗಾರಿಕೆಯಿಂದ ಈ ಸೂಕ್ಷ್ಮ ವ್ಯವಸ್ಥೆಯಲ್ಲೇ ಏರುಪೇರಾಗುವ ಸಾಧ್ಯತೆ ಹೆಚ್ಚು.
ಸಮುದ್ರದಾಳದಲ್ಲಿ ಗಣಿಗಾರಿಕೆಯಿಂದ ದೊಡ್ಡ ಶಬ್ದ ಉಂಟಾಗಲಿದ್ದು ಇದು ಜೀವವೈವಿಧ್ಯಗಳ ಮೇಲೆ ಪರಿಣಾಮ ಬೀರಲಿದೆ. ಸಮುದ್ರದ ಆಳದಲ್ಲಿ ಸಾವಿ ರಾರು ಜಲಚರಗಳಿದ್ದು ಇವುಗಳ ಆವಾಸಕ್ಕೆ ಹೊಡೆತ ಬೀಳಲಿದೆ. ಸಮುದ್ರ ದಲ್ಲಿರುವ ಸಾವಿರಾರು ಪ್ರಭೇದದ ಜಲಚರಗಳ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಿದ್ದು ಗಣಿಗಾರಿ ಕೆಯಿಂದ ಅಪರೂಪದ ಪ್ರಭೇದಗಳೇ ನಾಶವಾಗುವ ಭೀತಿ ಇದೆ. ಅಲ್ಲದೇ ಈ ಗಣಿಗಾರಿಕೆಯಿಂದ ಮೀನು ಗಾರಿಕೆ ಮೇಲೆ ಗದಾಪ್ರಹಾರ ಆಗಲಿದ್ದು ಜೀವನ ಸರಪಳಿ ಕೊಂಡಿಯೇ ತುಂಡಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಮುದ್ರ ಜೀವಿಗಳ ನಾಶದ ಆತಂಕ
ಭೂಮಿ ಮೇಲಿನ ಗಣಿಗಾರಿಕೆಯಂತೆಯೇ ಆಳ ಸಮುದ್ರ ಗಣಿಗಾರಿಕೆಗೂ ವಿಶ್ವ ಮಟ್ಟದಲ್ಲಿ ವಿರೋಧವಿದೆ. ಇದು ಪ್ರಾಕೃತಿಕ ಅಸಮತೋಲನ ಸೃಷ್ಟಿಸಲಿದೆ. ಸಮುದ್ರ ಜೀವಿಗಳ ನಾಶವಾಗಲಿದೆ ಎಂಬ ಕಾರಣಕ್ಕೆ ಅನೇಕ ಸಂಘಟನೆಗಳು ಇದರ ವಿರುದ್ಧ ಧ್ವನಿ ಎತ್ತಿವೆ. ಸಮುದ್ರ ಗಣಿಗಾರಿಕೆ ವಿರೋಧಿಸಿ ಪರಿಸರ ಸಂಘಟನೆಗಳಿಂದ ಅಭಿಯಾನವೂ ನಡೆದಿದೆ.