ಭಾರತದ ಹಾಸ್ಯ ಸಾಮ್ರಾಟ ಜಾನಿ ಲಿವರ್: ಬೀದಿ ವ್ಯಾಪಾರದಿಂದ ಬಾಲಿವುಡ್‌ನ ಸ್ಟಾರ್ ಕಾಮಿಡಿಯನ್‌ವರೆಗೆ ಅವರ ರೋಚಕ ಪಯಣ!

ಜಾನ್ ಪ್ರಕಾಶ್ ರಾವ್ ಜನುಮಲ ಈ ಹೆಸರು ಹೇಳಿದರೆ ಅಷ್ಟು ಸುಲಭವಾಗಿ ಯಾರಿಗೂ ಪರಿಚಯ ಸಿಗಲಿಕ್ಕಿಲ್ಲ. ಜಾನಿ ಲಿವರ್.. ಈ ಹೆಸರು ಭಾರತೀಯ ಸಿನಿರಂಗದಲ್ಲಿ ಬಹಳ ಚಿರಪರಿಚಿತ. ಭಾರತದ ಅತ್ಯಂತ ಗುರುತಿಸಲ್ಪಟ್ಟ ಹಾಸ್ಯ ನಟರಲ್ಲಿ ಒಬ್ಬರು ಮತ್ತು ಭಾರತೀಯ ಸಿನಿಮಾದಲ್ಲಿನ ಶ್ರೇಷ್ಠ ಹಾಸ್ಯನಟರಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ

ಹಾಸ್ಯ ಪಾತ್ರದಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ಹದಿಮೂರು ಫಿಲ್ಮ್‌ಫೇರ್ ಪ್ರಶಸ್ತಿ ನಾಮನಿರ್ದೇಶನಗಳು ಸೇರಿದಂತೆ ಅವರು ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ. ದೀವಾನಾ ಮಸ್ತಾನಾ (1997) ಮತ್ತು ದುಲ್ಹೆ ರಾಜಾ (1998) ಚಿತ್ರಗಳಲ್ಲಿನ ಅವರ ಕೆಲಸಕ್ಕಾಗಿ ಎರಡು ಬಾರಿ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. 1984 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಅವರು ಇದುವರೆಗೂ ಮುನ್ನೂರಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಜಾನಿ ಲಿವರ್ ಆಗಸ್ಟ್ 14, 1957 ರಂದು ಆಂಧ್ರಪ್ರದೇಶದ ಪ್ರಕಾಶಂನಲ್ಲಿರುವ ತೆಲುಗು ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಹಿಂದೂಸ್ತಾನ್ ಯೂನಿಲಿವರ್ ಸ್ಥಾವರದಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಜಾನಿ ಲಿವರ್ ಕೂಡ ಆ ಸ್ಥಾವರದಲ್ಲಿ ಆರು ವರ್ಷಗಳ ಕಾಲ ಕಾರ್ಮಿಕರಾಗಿ ಕೆಲಸ ಮಾಡಿದ್ದರು.
ಜಾನಿ ಲಿವರ್ ಅವರು ಮುಂಬೈನ ಮಾಟುಂಗಾದ ಕಿಂಗ್ಸ್ ಸರ್ಕಲ್ ಪ್ರದೇಶದಲ್ಲಿ ಬೆಳೆದರು. ಮೂವರು ಸಹೋದರಿಯರು ಮತ್ತು ಇಬ್ಬರು ಸಹೋದರರನ್ನು ಒಳಗೊಂಡಿರುವ ಕುಟುಂಬದಲ್ಲಿ ಇವರೇ ಹಿರಿಯರು. ಲಿವರ್ ತಮ್ಮ ಕುಟುಂಬದಲ್ಲಿನ ಆರ್ಥಿಕ ಸಮಸ್ಯೆಗಳಿಂದಾಗಿ ಹೆಚ್ಚಿನ ಅಧ್ಯಯನ ಮಾಡಲು ಸಾಧ್ಯವಾಗದ ಕಾರಣ ಏಳನೇ ತರಗತಿಯವರೆಗೆ ಆಂಧ್ರ ಶಿಕ್ಷಣ ಸೊಸೈಟಿ ಇಂಗ್ಲಿಷ್ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದರು. ಅದಾದ ಬಳಿಕ ಶಾಲೆಯನ್ನು ಬಿಡಲು ನಿರ್ಧರಿಸಿದರು.
ಆ ಕಾಲದ ಕೆಲವು ಪ್ರಸಿದ್ಧ ಹಿಂದಿ ಚಲನಚಿತ್ರ ತಾರೆಯರನ್ನು ಅನುಕರಿಸುವ ಮೂಲಕ ಮುಂಬೈನ ಬೀದಿಗಳಲ್ಲಿ ಪೆನ್ನುಗಳನ್ನು ಮಾರಾಟ ಮಾಡುವುದು ಮತ್ತು ಹಿಂದಿ ಚಲನಚಿತ್ರ ತಾರೆಯರ ಹಾಡುಗಳಿಗೆ ನೃತ್ಯ ಮಾಡುವುದು ಮುಂತಾದ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಪ್ರಾರಂಭಿಸಿದರು. ತಮ್ಮ ಆರಂಭಿಕ ವರ್ಷಗಳನ್ನು ಹೈದರಾಬಾದ್‌ನ ಹಳೆಯ ನಗರವಾದ ಯಾಕುತ್‌ಪುರದಲ್ಲಿ ಕಳೆದಿದ್ದ ಅವರು, ಹಾಸ್ಯ ನಟನೆಯ ವಿಶಿಷ್ಟ ಶೈಲಿಯನ್ನು ಕಲಿತರು.

ಒಂದೊಮ್ಮೆ ಹಿಂದೂಸ್ತಾನ್ ಯೂನಿಲಿವರ್ ಕಂಪನಿಯ ಸಮಾರಂಭದಲ್ಲಿ, ಅವರು ಕೆಲವು ಹಿರಿಯ ಅಧಿಕಾರಿಗಳನ್ನು ಅನುಕರಿಸಿದರು. ಆ ದಿನದಿಂದ, ಕಾರ್ಮಿಕರು ಅವರನ್ನು ಜಾನಿ ಲಿವರ್ ಎಂದು ಕರೆಯಲು ಪ್ರಾರಂಭಿಸಿದರು. ನಂತರ ಚಲನಚಿತ್ರೋದ್ಯಮಕ್ಕೆ ಸೇರಿದಾಗ, ಅವರು ಜಾನಿ ಲಿವರ್ ಎಂಬುದನ್ನು ತಮ್ಮ ಸ್ಕ್ರೀನ್ ಹೆಸರಾಗಿ ಬಳಸಲು ನಿರ್ಧರಿಸಿದರು.
ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿ ವೃತ್ತಿಜೀವನ ಆರಂಭಿಸಿದರು. ತಬಸ್ಸಮ್ ಹಿಟ್ ಪರೇಡ್ ಎಂಬ ಸಂಗೀತ ಕಾರ್ಯಕ್ರಮಗಳಲ್ಲಿ (ಆರ್ಕೆಸ್ಟ್ರಾಗಳು) ಸ್ಟ್ಯಾಂಡ್-ಅಪ್ ಕಾಮಿಡಿ ಪ್ರದರ್ಶನ ನೀಡಲು ಪ್ರಾರಂಭಿಸಿದರು. ಅಲ್ಲಿಂದ ಖ್ಯಾತಿಯನ್ನು ಗಳಿಸಿ, ಸಂಗೀತ ನಿರ್ದೇಶನ ಜೋಡಿಯಾದ ಕಲ್ಯಾಣ್‌ಜಿ-ಆನಂದ್‌ಜಿ ಅವರ ಗ್ರೂಪ್ ಸೇರಿದರು.

ಅಂದಹಾಗೆ ಜಾನಿ ಲಿವರ್ ಭಾರತದ ಮೊದಲ ಸ್ಟ್ಯಾಂಡ್-ಅಪ್ ಹಾಸ್ಯನಟರಲ್ಲಿ ಒಬ್ಬರು ಮತ್ತು ಭಾರತದಲ್ಲಿ ಸ್ಟ್ಯಾಂಡ್-ಅಪ್ ಹಾಸ್ಯ ವೃತ್ತಿಯ ಪ್ರವರ್ತಕ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ. ಹಿಂದೂಸ್ತಾನ್ ಯೂನಿಲಿವರ್ (HUL) ಗೆ ಸೇರುವ ಮೊದಲೇ, ಅವರು ವೇದಿಕೆ ಪ್ರದರ್ಶನಗಳನ್ನು ನೀಡುತ್ತಿದ್ದರು. ಅವರ ಹೆಚ್ಚುತ್ತಿರುವ ಗೈರುಹಾಜರಿ ಮತ್ತು ವೇದಿಕೆ ಕಾರ್ಯಕ್ರಮಗಳಿಂದ ಉತ್ತಮ ಆದಾಯ ಗಳಿಸುತ್ತಿದ್ದ ಕಾರಣ, ಅವರು 1981 ರಲ್ಲಿ HUL ಅನ್ನು ತೊರೆದರು.
ಬಾಲಿವುಡ್ ಖ್ಯಾತ ಹಾಸ್ಯ ನಟ ಜಾನಿ ಲೀವರ್ ಗರ ಚಿತ್ರದ ಮೂಲಕ ಸ್ಯಾಂಡಲ್ ವುಡ್‌ಗೆ ಪದಾರ್ಪಣೆ ಮಾಡಿದ್ದರು. ಅಷ್ಟೇ ಅಲ್ಲದೆ, ತುಳು ಸಿನಿಮಾದಲ್ಲೂ ಅವರು ಅಭಿನಯಿಸಿದ್ದಾರೆ.
