ವಿದೇಶದಲ್ಲಿ ಭಾರತೀಯ ಪ್ರವಾಸಿಗರ ವರ್ತನೆಗೆ ಟೀಕೆ: ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ವೈರಲ್!

ವಿದೇಶಗಳಿಗೆ ಹೋಗುವ ಭಾರತೀಯ ಪ್ರವಾಸಿಗರ ವರ್ತನೆಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟೀಕೆಗಳು ಬರುತ್ತಿವೆ. ಭಾರತೀಯರು ಸಾಮಾನ್ಯ ಜ್ಞಾನ (ಕಾಮನ್ ಸೆನ್ಸ್) ಇಲ್ಲದವರ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ ಎಂಬುದು ಟೀಕೆ ಮಾಡುವವರ ಸಾಮಾನ್ಯ ಆರೋಪವಾಗಿದೆ.

ಇದೀಗ ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ನಡೆದ ಒಂದು ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅಷ್ಟಕ್ಕೂ ಈ ಟೀಕೆಯನ್ನು ಮಾಡಿ ಪೋಸ್ಟ್ ಹಾಕಿದ್ದು ಬೇರಾರೂ ಅಲ್ಲ, ಅವರೂ ಕೂಡ ಭಾರತೀಯರೇ ಆಗಿದ್ದಾರೆ. ತಾನು ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ತಾವು ನೋಡಿದ ಭಾರತೀಯರ ಗುಂಪಿನ ವರ್ತನೆ ಇವರನ್ನು ಕೆರಳಿಸಿದೆ. ಸುಮಾರು 20 ಜನರಿದ್ದ ಈ ಗುಂಪಿನವರ ವರ್ತನೆ ಸರಿಯಿಲ್ಲ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಟೀಕೆಯನ್ನು ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬುದರ ಮಾಹಿತಿ ಇಲ್ಲಿದೆ.
ಸಾಮಾಜಿಕ ಜಾಲತಾಣ ರೆಡ್ಡಿಟ್ನ ಮುಂಬೈ ಸಮುದಾಯದಲ್ಲಿ ಹಂಚಿಕೊಂಡ ಭಾರತೀಯ ಪ್ರವಾಸಿಗರು ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ನಡೆದುಕೊಂಡು ರೀತಿಯ ಕುರಿತಾದ ಈ ಪೋಸ್ಟ್ ಬೇಗನೆ ವೈರಲ್ ಆಗಿದೆ. ‘ವಿದೇಶದಲ್ಲಿ ಪ್ರಯಾಣಿಸುವ ಭಾರತೀಯರೇ, ದಯವಿಟ್ಟು ನಮಗೆಲ್ಲಾ ಮುಜುಗರ ತರುವುದನ್ನು ನಿಲ್ಲಿಸಿ’ ಎಂಬ ಶೀರ್ಷಿಕೆಯಲ್ಲಿ ಈ ಪೋಸ್ಟ್ ಇದೆ. ವಿದೇಶದಲ್ಲಿ ತಾನು ಭೇಟಿಯಾದ ಭಾರತೀಯ ಪ್ರಯಾಣಿಕರ ಗುಂಪಿನ ವರ್ತನೆಯನ್ನು ನಾಚಿಕೆಗೇಡು ಎಂದು ಹೇಳಬೇಕು ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
ರೆಡ್ಡಿಟ್ನ @bsethug ಎಂಬ ಹೆಸರಿನಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ಮುಂಬೈಗೆ ಹೋಗುವ ವಿಮಾನಕ್ಕಾಗಿ ಕಾಯುತ್ತಿದ್ದಾಗ ನಡೆದ ಘಟನೆಯನ್ನು ಇವರು ವಿವರಿಸಿದ್ದಾರೆ. ಅಲ್ಲಿ ಸುಮಾರು ಇಪ್ಪತ್ತು ಜನರಿದ್ದ ಭಾರತೀಯರ ಗುಂಪೊಂದು ವಿಮಾನ ನಿಲ್ದಾಣದ ನೆಲದ ಮೇಲೆ ಕುಳಿತು ಜೋರಾಗಿ ಮಾತನಾಡುತ್ತಾ ಹರಟೆ ಹೊಡೆಯುತ್ತಿದ್ದರು. ಜೋರಾಗಿ ನಗುತ್ತಾ ಇತರರಿಗೆ ತೊಂದರೆ ಕೊಡುತ್ತಿದ್ದರು ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
ಈ ಗುಂಪಿನಲ್ಲಿ ಒಬ್ಬರ ಕೈಯಲ್ಲಿದ್ದ ಊಟದ ಪೊಟ್ಟಣದಿಂದ ಎಲ್ಲರೂ ನೆಲದ ಮೇಲೆ ಕುಳಿತು ತಿನ್ನುತ್ತಾ ಅವರು ಕುಳಿತುಕೊಂಡಿದ್ದ ಜಾಗದಲ್ಲೆಲ್ಲಾ ಕಸ ಮಾಡಿದ್ದರು ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. ಆ ಸಮಯದಲ್ಲಿ ವಿಮಾನ ನಿಲ್ದಾಣದಲ್ಲಿದ್ದ ಇತರರು ಅಸಹ್ಯ, ತಿರಸ್ಕಾರದಿಂದ ಭಾರತೀಯ ಜನರ ಗುಂಪನ್ನು ನೋಡುತ್ತಿದ್ದರು ಎಂದು @bsethug ಹೇಳಿದ್ದಾರೆ. ತಮ್ಮ ಹತ್ತಿರದಲ್ಲಿದ್ದ ಆಸ್ಟ್ರೇಲಿಯಾದ ದಂಪತಿಗಳು ಇವರು ಖಂಡಿತ ಭಾರತೀಯರೇ ಆಗಿರಬೇಕು ಎಂದು ಹೇಳಿದ್ದು ತಮಗೆ ತುಂಬಾ ಅವಮಾನ ಉಂಟುಮಾಡಿತು ಎಂದು ಇವರು ಹೇಳಿಕೊಂಡಿದ್ದಾರೆ.
ಇನ್ನು ಅಲ್ಲಿನ ವಾತಾವರಣದ ಬಗ್ಗೆ ತಿಳುವಳಿಕೆ ಇಲ್ಲದ ಭಾರತೀಯರ ಈ ರೀತಿಯ ವರ್ತನೆ ನಾಚಿಕೆಗೇಡು ಆಗಿದೆ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. ಇನ್ನು ವಿಮಾನ ಬಂದಾದ ನಂತರ ಎಲ್ಲರೂ ಸರತಿ ಸಾಲಿನಲ್ಲಿ ನಿಂತುಕೊಂಡು ಬೋರ್ಡಿಂಗ್ಗೆ ಹೋಗುವ ಸಮಯದಲ್ಲಿಯೂ ಕೂಡ ಅಲ್ಲಿದ್ದ ಎಲ್ಲ ಜನರ ಸರತಿ ಸಾಲನ್ನು ತಪ್ಪಿಸಿ, ಮುಂದೆ ಹೋಗುತ್ತಿದ್ದವರಿಗೂ ತೊಂದರೆ ಕೊಟ್ಟರು ಎಂದು ಪೋಸ್ಟ್ನಲ್ಲಿ ಬರೆದುಕೊಂಡು ಭಾರತೀಯ ಪ್ರಯಾಣಿಕರ ಗುಂಪಿನ ಬಗ್ಗೆ ಟೀಕೆಗಳನ್ನು ಮಾಡಿದ್ದಾರೆ.
