ಭಾರತೀಯ ಹಡಗುಗಳಿಗೆ ಸಿಕ್ಕಿತು ಮುಕ್ತಿ: ಇರಾನ್ ಜೊತೆಗಿನ ಯಶಸ್ವಿ ಮಾತುಕತೆ ಬಳಿಕ ಸಂಚಾರಕ್ಕೆ ಅನುಮತಿ

ಹೊಸದಿಲ್ಲಿ: ಹಾರ್ಮುಝ್ ಜಲಸಂಧಿಯಲ್ಲಿ ಸಿಲುಕಿದ್ದ ಭಾರತೀಯ ಹಡಗುಗಳಿಗೆ ಇರಾನ್‌ನೊಂದಿಗಿನ ಮಾತುಕತೆಗಳ ಪರಿಣಾಮವಾಗಿ ಮುಂದೆ ಸಾಗಲು ಅನುಮತಿ ಸಿಕ್ಕಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ಮಿಲಿಟರಿ ಕಾರ್ಯಾಚರಣೆಗಿಂತ ರಾಜತಾಂತ್ರಿಕ ಮಾತುಕತೆಯೇ ಪರಿಣಾಮಕಾರಿ ಎಂದು ಅವರು ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.
ಇರಾನ್ ನೊಂದಿಗೆ ನಡೆದ ಸಂವಾದದ ಫಲವಾಗಿ ಭಾರತೀಯ ಧ್ವಜ ಹೊಂದಿರುವ 2 ಅನಿಲ ಟ್ಯಾಂಕರ್ ಗಳು ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ. ಈ ಕುರಿತು Financial Timesಗೆ ನೀಡಿದ ಸಂದರ್ಶನದಲ್ಲಿ ಜೈಶಂಕರ್ ಮಾಹಿತಿ ನೀಡಿದ್ದಾರೆ.

“ಇರಾನ್ ನೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಮಾತುಕತೆಗಳಿಂದ ಫಲಿತಾಂಶ ದೊರಕುತ್ತಿದೆ. ಈ ಪ್ರಕ್ರಿಯೆ ಮುಂದುವರಿಯುತ್ತಿದ್ದು, ಇದರಿಂದ ಲಾಭವಾಗುತ್ತಿರುವುದರಿಂದ ಅದನ್ನೇ ಮುಂದುವರಿಸುತ್ತೇವೆ,” ಎಂದರು.
ಭಾರತದ ನಿಲುವು ಸ್ಪಷ್ಟಪಡಿಸಿದ ಅವರು, “ಸಂವಾದ ಮತ್ತು ಸಮನ್ವಯದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ ಮಾರ್ಗ,” ಎಂದು ಹೇಳಿದರು.
ಹಾರ್ಮುಝ್ ಜಲಸಂಧಿ ಜಾಗತಿಕ ವಾಣಿಜ್ಯಕ್ಕೆ ಪ್ರಮುಖ ಮಾರ್ಗವಾಗಿದ್ದು, ಇಲ್ಲಿ ಉದ್ವಿಗ್ನತೆ ಕಡಿಮೆಯಾಗುವುದು ಭಾರತ ಸೇರಿದಂತೆ ಅನೇಕ ದೇಶಗಳಿಗೆ ಮಹತ್ವದ್ದಾಗಿದೆ.