ಸಾರ್ವಜನಿಕವಾಗಿ ಮೂತ್ರ ವಿಸರ್ಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಭಾರತೀಯ ಭದ್ರತಾ ಸಿಬ್ಬಂದಿಯ ಹತ್ಯೆ

ವಾಷಿಂಗ್ಟನ್: ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹರಿಯಾಣದ (Haryana) ಜಿಂದ್ ಜಿಲ್ಲೆಯ 26 ವರ್ಷದ ಕಪಿಲ್ ಎಂಬ ವ್ಯಕ್ತಿಯನ್ನು ಲಾಸ್ ಏಂಜಲೀಸ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಜಿಂದ್‌ನ ಬ್ರಾಹ್ ಕಲಾನ್ ನಿವಾಸಿ ಕಪಿಲ್ ಮೃತ ವ್ಯಕ್ತಿಯಾಗಿದ್ದು, ಅವರು ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.

ಜಿಂದ್‌ನ ಪಿಲ್ಲು ಖೇರಾದಲ್ಲಿ ಟ್ರ್ಯಾಕ್ಟರ್ ಏಜೆನ್ಸಿ ನಡೆಸುತ್ತಿರುವ ಮೃತ ಕಪಿಲ್ ಅವರ ಚಿಕ್ಕಪ್ಪ ರಮೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ನಮ್ಮ ಮನೆಯ ಕಪಿಲ್ ಲಾಸ್ ಏಂಜಲೀಸ್‌ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಸಂಜೆ ಅವರ ಸಾವಿನ ಸುದ್ದಿ ನಮಗೆ ತಲುಪಿತು ಎಂದು ಹೇಳಿದ್ದಾರೆ.
“ಕಪಿಲ್ ಸಾವಿನ ಬಗ್ಗೆ ನಮಗೆ ಅಮೆರಿಕದ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಸಿಕ್ಕಿದೆ. ಕಪಿಲ್ ತನ್ನ ಅಂಗಡಿಯ ಬಳಿಯ ರಸ್ತೆಯಲ್ಲಿ ಮೂತ್ರ ವಿಸರ್ಜಿಸದಂತೆ ಅಮೆರಿಕದ ಪ್ರಜೆಯೊಬ್ಬರನ್ನು ಕೇಳಿಕೊಂಡಿದ್ದಾನೆ. ನಂತರ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಅಲ್ಲಿನ ಪೊಲೀಸರು ನಮಗೆ ತಿಳಿಸಿದ್ದಾರೆ” ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
“ಮಾತಿನ ಚಕಮಕಿ ನಡೆದ ನಂತರ ಅಲ್ಲಿನ ಸ್ಥಳೀಯ ವ್ಯಕ್ತಿ ತನ್ನ ಪಿಸ್ತೂಲನ್ನು ತೆಗೆದುಕೊಂಡು ಕಪಿಲ್ ಮೇಲೆ ಗುಂಡು ಹಾರಿಸಿದ. ಕಪಿಲ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸತ್ತಿದ್ದಾರೆ ಎಂದು ಘೋಷಿಸಿದರು” ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಎರಡು ದಿನಗಳ ಕಾಲ ಅಮೆರಿಕದಲ್ಲಿ ರಜೆ ಇರುವುದರಿಂದ ಬುಧವಾರ ಕಪಿಲ್ನ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಕಪಿಲ್ ಅವರ ಮೃತದೇಹವನ್ನು ಅವರ ಊರಿಗೆ ತರಲು 15 ಲಕ್ಷ ರೂ. ಪಾವತಿಸಬೇಕಾಗುತ್ತದೆ.
ಅಮೆರಿಕದ ಅಧಿಕಾರಿಗಳು ಇನ್ನೂ ಶಂಕಿತನ ಹೆಸರನ್ನು ಬಿಡುಗಡೆ ಮಾಡಿಲ್ಲ ಅಥವಾ ಯಾರನ್ನಾದರೂ ಈ ಪ್ರಕರಣದಲ್ಲಿ ಬಂಧಿಸಲಾಗಿದೆಯೇ ಎಂಬ ಬಗ್ಗೆ ತಿಳಿಸಿಲ್ಲ.
