ಭಾರತೀಯ ಮೂಲದ ಅಮೆರಿಕನ್ ಗಾಯಕಿ ಚಂದ್ರಿಕಾ ಟಂಡನ್ ಅವರ ‘ತ್ರಿವೇಣಿ’ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ..!

ಭಾರತ ಮೂಲದ ಅಮೆರಿಕ ಪ್ರಜೆ ಚಂದ್ರಿಕಾ ಟಂಡನ್ ಅವರು ತಮ್ಮ ‘ತ್ರಿವೇಣಿ’ ಆಲ್ಬಮ್‌ಗೆ 67ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತ, ವೈದಿಕ ಪಠಣ ಮತ್ತು ಅಂತರರಾಷ್ಟ್ರೀಯ ಸಂಪ್ರದಾಯಗಳನ್ನು ಒಳಗೊಂಡ ಈ ಆಲ್ಬಮ್ ‘ಬೆಸ್ಟ್ ನ್ಯೂ ಏಜ್’ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಚಂದ್ರಿಕಾ ಅವರ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಸುರಿಮಳೆಯಾಗಿದೆ.

ಭಾರತ ಮೂಲದ ಅಮೆರಿಕ ಪ್ರಜೆ ಹಾಗೂ ಉದ್ಯಮಿ ಚಂದ್ರಿಕಾ ಟಂಡನ್ ಅವರು 67ನೇ ಸಾಲಿನ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾರೆ. ಅವರು ಸಿದ್ಧಪಡಿಸಿದ ‘ತ್ರಿವೇಣಿ’ ಆಲ್ಬಮ್‌ಗೆ ‘ಬೆಸ್ಟ್ ನ್ಯೂ ಏಜ್’ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ. ಸ್ಪರ್ಧೆಯಲ್ಲಿ ಇದ್ದ ಭಾರತದ ರಿಕ್ಕಿ ಕೇಜ್ ಮೊದಲಾದವರನ್ನು ಅವರು ಹಿಂದಿಕ್ಕಿದ್ದಾರೆ.

ಲಾಸ್ ಏಂಜಲೀಸ್ನಲ್ಲಿ ಭಾನುವಾರ (ಫೆಬ್ರವರಿ 2) ಅವಾರ್ಡ್ ಕಾರ್ಯಕ್ರಮ ನಡೆದಿದೆ. ದಕ್ಷಿಣ ಆಫ್ರಿಕಾದ ಫ್ಲೌಟಿಸ್ಟ್ ವೂಟರ್ ಕೆಲ್ಲರ್‌ಮ್ಯಾನ್ ಮತ್ತು ಜಪಾನಿನ ಸೆಲಿಸ್ಟ್ ಎರು ಮಾಟ್ಸುಮೊಟೊ ಅವರ ಜೊತೆ ಸೇರಿ ಚಂದ್ರಿಕಾ ಅವರು ‘ತ್ರಿವೇಣಿ’ ಆಲ್ಬಂ ಮಾಡಿದ್ದರು. ‘ನನಗೆ ಖುಷಿ ಆಗುತ್ತಿದೆ’ ಎಂದು ಚಂದ್ರಿಕಾ ಅವರು ಹೇಳಿಕೊಂಡಿದ್ದಾರೆ. ಈ ರೇಸ್ನಲ್ಲಿ , ಅನೌಷ್ಕಾ ಶಂಕರ್, ರಾಧಿಕಾ ವೆಕಾರಿಯಾ ಕೂಡ ಇದ್ದರು.
ತ್ರಿವೇಣಿ’ ಆಲ್ಬಂ ಭಾರತೀಯ ಶಾಸ್ತ್ರೀಯ ಸಂಗೀತ, ವೈದಿಕ ಪಠಣಗಳು ಮತ್ತು ಅಂತರಾಷ್ಟ್ರೀಯ ಸಂಪ್ರದಾಯಗಳನ್ನು ಒಳಗೊಂಡಿದೆ. ಇದು ಕೇಳುಗರನ್ನು ಧ್ಯಾನಸ್ಥ ಮಾಡುವ ತಾಕತ್ತು ಹೊಂದಿದೆ. ಈ ಕಾರಣಕ್ಕೆ ಇದಕ್ಕೆ ಅವಾರ್ಡ್ ಸಿಕ್ಕಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಚಂದ್ರಿಕಾ ಟಂಡನ್ ಯಾರು?

ಚಂದ್ರಿಕಾ ಅವರು ಉದ್ಯಮ ಹಾಗೂ ಸಂಗೀತ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಚಂದ್ರಿಕಾ ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ‘ಸೋಲ್ ಚಾಂಟ್ಸ್ ಮ್ಯೂಸಿಕ್’ ಹೆಸರಿನ ನಾನ್ ಪ್ರಾಫಿಟೆಬಲ್ ಮ್ಯೂಸಿಕ್ ಲೇಬಲ್ನ 2005ರಲ್ಲಿ ಆರಂಭಿಸಿದರು. ಅವರು ವರ್ಷ ಕಳೆದಂತೆ ಹಲವು ಆಲ್ಬಂಗಳನ್ನು ಇದರ ಅಡಿಯಲ್ಲಿ ರಿಲೀಸ್ ಮಾಡಿದರು. ಅವರು ಶಿಕ್ಷಣ ಕ್ರೇತ್ರದಲ್ಲೂ ಸಾಧನೆ ಮಾಡಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದ ಕಲ್ಯಾಣಕ್ಕೆ ಅವರು ಶ್ರಮಿಸಿದ್ದಾರೆ. ನ್ಯೂಯಾರ್ಕ್ನ ಹಿಂದೂ ದೇವಾಲಯಕ್ಕೆ ಅವರು ಸಾಕಷ್ಟು ದಾನ ಮಾಡಿದ್ದಾರೆ. ಮಹಿಳಾ ಕಲ್ಯಾಣದತ್ತವೂ ಅವರು ಗಮನ ಹರಿಸಿದ್ದಾರೆ. ಚಂದ್ರಿಕಾ ಅವರ ಸಹೋದರಿ ಇಂದ್ರಾ ನೂಯಿ ‘ಪೆಪ್ಸಿಕೋ’ನ ಸಿಇಒ ಆಗಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚಂದ್ರಿಕಾ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಾ ಇದ್ದಾರೆ. ದೇಶ-ವಿದೇಶದವರು ಸೋಶಿಯಲ್ ಮೀಡಿಯಾ ಮೂಲಕ ಅವರಿಗೆ ಶುಭಾಶಯ ಹೇಳಿದ್ದಾರೆ.
