ಭಾರತೀಯ ಕೋಡರ್ ಅಮೆರಿಕಾದ ಟೆಕ್ ವಲಯದಲ್ಲಿ ಸಂಚಲನ

ಭಾರತೀಯ ಮೂಲದ ಕೋಡರ್ ಒಬ್ಬನ ಕಾರಣಕ್ಕೆ ಈಗ ಅಮೆರಿಕಾದ ಸಿಲಿಕಾನ್ ವ್ಯಾಲಿಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಅಲ್ಲಿನ ಹೂಡಿಕೆದಾರರು, ಇಂಜಿನಿಯರ್‌ಗಳು, ಸಂಸ್ಥೆಗಳ ಸಂಸ್ಥಾಪಕರು ಹೀಗೆ ಪ್ರತಿಯೊಬ್ಬರು ಈಗ ಭಾರತೀಯ ಮೂಲದ ಕೋಡರ್ ಓರ್ವನ ಮೇಲೆ ಕಣ್ಣಿಟ್ಟಿದ್ದಾರೆ.

ಅದಕ್ಕೇನು ಕಾರಣ. ಆತ ಯಾರು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಕೋವಿಡ್ ಬರುವುದಕ್ಕೂ ಮೊದಲು ಪ್ರತಿಯೊಬ್ಬರು ಕಚೇರಿಗೆ ಹೋಗಿ ಕೆಲಸ ಮಾಡುತ್ತಿದ್ದರು. ಆದರೆ ಕೋವಿಡ್ ಸಾಂಕ್ರಾಮಿಕದ ಆಗಮನವೂ ಕೆಲಸದ ಸಂಸ್ಕೃತಿಗೆ ಹೊಸ ಭಾಷ್ಯ ಬರೆಯಿತು. ಕಚೇರಿಯಲ್ಲಿ ಮಾಡುವ ಉದ್ಯೋಗವನ್ನು ಹೀಗೂ ಮನೆಯಲ್ಲಿ ಮಾಡಬಹುದು ಎಂಬುದು ಅರ್ಥವಾಯ್ತ. ಇದೇ ಸಮಯದಲ್ಲಿ ಬೆಳಕಿಗೆ ಬಂದಿದ್ದೂ ಮೂನ್ ಲೈಟಿಂಗ್.
ಮೂನ್ ಲೈಟಿಂಗ್ ಎಂದರೆ ಒಂದೇ ಸಮಯದಲ್ಲಿ ಎರಡು ಸಂಸ್ಥೆಗಳಲ್ಲಿ ಪೂರ್ಣ ಪ್ರಮಾಣದ ಉದ್ಯೋಗಿಯಾಗಿ ಕೆಲಸ ಮಾಡುವುದು. ಹಲವು ಐಟಿ ಕಂಪನಿಗಳು ಮೂನ್ ಲೈಟಿಂಗ್ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ತನ್ನ ಹಲವು ಉದ್ಯೋಗಿಗಳನ್ನು ಕೋವಿಡ್ ನಂತರದ ಸಮಯದಲ್ಲಿ ಮನೆಗೆ ಕಳುಹಿಸಿದ ಬಗ್ಗೆ ವರದಿಯಾದವು. ಜೊತೆಗೆ ಹಲವು ಕಂಪನಿಗಳು ಇದೇ ಕಾರಣಕ್ಕೆ ತಮ್ಮ ಮನೆಯಿಂದ ಕೆಲಸ ಮಾಡುವ ಪದ್ಧತಿಯನ್ನು ಕ್ಯಾನ್ಸಲ್ ಮಾಡಿದವು. ಆದರೆ ಒಬ್ಬ ಉದ್ಯೋಗಿ ಏಕಕಾಲಕ್ಕೆ ಎರಡು ಸಂಸ್ಥೆಯಲ್ಲಿ ಕೆಲಸ ಮಾಡುವುದು ಓಕೆ ಆದರೆ ಐದಾರು ಸಂಸ್ಥೆಗಳಲ್ಲಿ ಕೆಲಸ ಮಾಡಲು ಸಾಧ್ಯವೇ? ಇಂತಹ ಪ್ರಶ್ನೆ ಮೂಡುವುದಕ್ಕೆ ಕಾರಣವಾಗಿದ್ದು, ಭಾರತೀಯ ಮೂಲದ ಕೋಡರ್ ಸೋಹಮ್ ಪರೇಖ್.
ಅತೀ ಬುದ್ಧಿವಂತ ಭಾರತೀಯ ಸೋಹಮ್ ಪರೇಖ್ ವಿರುದ್ಧ ಅಮೆರಿಕಾದಲ್ಲಿ ಐದಕ್ಕೂ ಹೆಚ್ಚು ಸ್ಟಾರ್ಟಪ್ ಕಂಪನಿಗಳಿಗೆ ವಂಚಿಸಿದ ಆರೋಪ ಕೇಳಿ ಬಂದಿದೆ. ಈತ ಏಕಕಾಲದಲ್ಲಿ ಅಮೆರಿಕಾದ 5ಕ್ಕೂ ಹೆಚ್ಚು ಸ್ಟಾರ್ಟಪ್ ಜೊತೆ ಕೆಲಸ ಮಾಡಿದ ಆರೋಪ ಕೇಳಿ ಬಂದಿದೆ. ಸೋಹಮ್ ಪ್ರಕರಣವೂ ಈಗ ಮೂನ್ ಲೈಟಿಂಗ್ ಹಾಗೂ ಸ್ಟಾರ್ಟಪ್ ಸ್ಥಾಪನೆಯೊಂದರ ನಡುವಿನ ತೆಳುವಾದ ರೇಖೆಯ ಬಗ್ಗೆ ಹೈಲೈಟ್ ಮಾಡುತ್ತದೆ.

ಅಮೆರಿಕಾದ ಉದ್ಯಮಿ ಸುಹೈಲ್ ದೋಶಿ ಎಂಬುವವರು ಈ ಸೋಹಮ್ ಪರೇಖ್ ಅವರು ಹಲವು ಕಂಪನಿಗಳಲ್ಲಿ ಮೂನ್ ಲೈಟಿಂಗ್ ಮಾಡುವ ಮೂಲಕ ಉದ್ಯೋಗಿಗಳಿಗೆ ವಂಚನೆ ಮಾಡಿದ್ದಾರೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ದೊಡ್ಡ ಚರ್ಚೆ ಹುಟ್ಟು ಹಾಕಿದೆ.
ಮಿಕ್ಸ್‌ಪ್ಯಾನೆಲ್ ಎಂಬ ಸಂಸ್ಥೆಯೊಂದರ ಮಾಜಿ ಸಿಇಒ ಹಾಗೂ ಸಹ ಸಂಸ್ಥಾಪಕರಾಗಿರುವ ಸುಹೈಲ್ ದೋಶಿ ಅವರು ಸೋಹಮ್ ಪರೇಖ್ ಅವರನ್ನು ದೋಷಿ ಎಂದು ಕರೆದಿದ್ದು, ಅವರು ಹಲವು ಸ್ಟಾರ್ಟಪ್ ಕಂಪನಿಗಳಿಗೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸೋಹಮ್ ಪರೇಖ್ ಅವರನ್ನು ಕೆಲಸಕ್ಕೆ ತೆಗೆದುಕೊಂಡು ಒಂದೇ ವಾರದಲ್ಲಿ ಅವರನ್ನು ಅಪ್ರಾಮಾಣಿಕತೆಯ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಿದೆ. ಇದಾದ ನಂತರ ಆತ ಖಾಸಗಿಯಾಗಿ ನನ್ನನ್ನು ಸಂಪರ್ಕಿಸಿ ತಾನು ಮಾಡಿದ ಕೆಲಸಕ್ಕೆ ವಿಷಾದಿಸಿದರು ಎಂದು ಸುಹೈಲ್ ದೋಶಿ ತಮ್ಮ ಟ್ವಿಟ್ಟರ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಇವರ ಈ ಪೋಸ್ಟ್‌ಗೆ ಹಲವು ಸ್ಟಾರ್ಟಪ್ ಕಂಪನಿಗಳ ಸಂಸ್ಥಾಪಕರು ಪ್ರತಿಕ್ರಿಯಿಸಿದ್ದು, ನಮ್ಮಲ್ಲೂ ಈತ ಕೆಲಸ ಮಾಡಿದ್ದಾನೆ ಎಂದು ಹೇಳಿದ್ದಾರೆ ಅಮೆರಿಕಾದ ಪ್ರಮುಖ ಸ್ಟಾರ್ಟಪ್ ಕಂಪನಿಗಳಾದ ಲಿಂಡಿ(Lindy), ಫ್ಲೀಟ್ ಎಐ(Fleet AI) ಹಾಗೂ ಅಂಟಿಮೆಟಲ್(Antimetal) ಈ ಸಂಸ್ಥೆಯ ಉದ್ಯೋಗದಾತರು ಸೋಹಮ್ ಪರೇಖ್ ಬಗ್ಗೆ ಹೇಳಿಕೊಂಡಿದ್ದಾರೆ. ಮೊದಲಿಗೆ ಸಂದರ್ಶನದ ಸಮಯದಲ್ಲಿ ಆತನ ಬುದ್ಧಿವಂತಿಕೆ ಆತನಿಗೆ ತಿಳಿದಿರುವ ವೃತ್ತಿ ಕೌಶಲ್ಯಗಳಿಂದ ತಾವು ತುಂಬಾ ಪ್ರಭಾವಕ್ಕೊಳಗಾದೆವು ಆದರೆ ನಂತರವಷ್ಟೇ ನಮಗೆ ಆತ ನಮಗೆ ಮಾಹಿತಿ ನೀಡದೆಯೇ ಬೇರೆಡೆಯೂ ಕೆಲಸ ಮಾಡುತ್ತಿದ್ದಾನೆ ಎಂಬ ವಿಚಾರ ತಿಳಿಯಿತು ಎಂದು ಹೇಳಿಕೊಂಡಿದ್ದಾರೆ. ಪ್ರಸ್ತುತ ಅಮೆರಿಕಾದ ಕನಿಷ್ಠ 5 ಸ್ಟಾರ್ಟಪ್‌ಗಳು ಸೋಹಂ ಪರೇಖ್ ವಿರುದ್ಧ ಆರೋಪ ಮಾಡಿದ್ದಾರೆ.
ಆದರೆ ಇಷ್ಟೊಂದು ಆರೋಪಗಳು ಕೇಳಿ ಬಂದಿದ್ದರು ಸೋಹಮ್ ಪರೇಖ್ ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ, ಆದರೆ ಈ ಪೋಸ್ಟ್ ಹಾಕಿದ ಸುಹೈಲ್ ದೋಶಿ ಅವರನ್ನು ಖಾಸಗಿಯಾಗಿ ಸಂಪರ್ಕಿಸಿ ತನ್ನ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ.
ಈ ವಿಚಾರ ಈಗ ಟೆಕ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಹಲವು ಟೆಕ್ ಸಂಸ್ಥೆಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ನೀಡಿವೆ. ಆದರೆ ಸೋಹಮ್ ಪರೇಖ್ ಕೃತ್ಯದಿಂದಾಗಿ ಉದ್ಯೋಗಿಗಳ ಪಾರದರ್ಶಕತೆಯ ಬಗ್ಗೆ ಪ್ರಶ್ನೆ ಎದ್ದಿದೆ.
ಸೋಹಮ್ ಪರೇಖ್ ಈಗ ಉದ್ಯೋಗದ ಒಪ್ಪಂದಗಳನ್ನು ಮುರಿದ ಹಾಗೂ ಸಂಸ್ಥೆಯ ನಂಬಿಕೆಗೆ ಮೋಸ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಏಕೆಂದರೆ ಎಲ್ಲಾ ಸಂಸ್ಥೆಗಳು ಇವರನ್ನು ತಮ್ಮ ಪೂರ್ಣ ಪ್ರಮಾಣದ ಉದ್ಯೋಗಿ ಎಂದು ತಮ್ಮ ಸಂಸ್ಥೆಗೆ ಕೆಲಸಕ್ಕೆ ತೆಗೆದುಕೊಂಡಿದ್ದರು. ಆದರೆ ಇವರು ಹಲವು ಸಂಸ್ಥೆಗಳಲ್ಲಿ ಇದೇ ರೀತಿ ಕೆಲಸ ಮಾಡುವ ಮೂಲಕ ನಂಬಿಕೆ ಮುರಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಂಬಿಕೆ ದ್ರೋಹದ ಆರೋಪಕ್ಕೆ ಒಳಗಾಗಿರುವ ಸೋಹಂ ಪರೇಖ್ ಅವರು ಮುಂಬೈ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದು, ಅಮೆರಿಕಾದ ಜಾರ್ಜಿಯಾ ವಿಶ್ವವಿದ್ಯಾನಿಯದಿಂದ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಆದರೆ ಈಗ ಅವರ ಪದವಿಯ ಬಗ್ಗೆಯೂ ಅನುಮಾನ ಮೂಡಿದೆ. ಇದರ ಜೊತೆಗೆ ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ್ದು, ಅನೇಕರು ಇವರು ಹೇಗೆ ಏಕಕಾಲಕ್ಕೆ ಇಷ್ಟೊಂದು ಸಂಸ್ಥೆಯಲ್ಲಿ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ತಾನು ಸೋಹಮ್ ಪರೇಖ್ ಜೊತೆ ಕೆಲಸ ಮಾಡಿದ್ದಾಗಿ ಹೇಳಿಕೊಂಡಿರುವ ಒಬ್ಬರು ಪ್ರತಿಕ್ರಿಯಿಸಿದ್ದು, ಇತರ ಇಂಜಿನಿಯರ್‌ಗಳು 3 ಗಂಟೆಗಳಲ್ಲಿ ಮಾಡುವ ಕೆಲಸವನ್ನು ಸೋಹಮ್ ಪರೇಖ್ ಅವರು ಕೇವಲ ಒಂದು ಗಂಟೆಯಲ್ಲಿ ಮುಗಿಸಿ ಬಿಡುತ್ತಿದ್ದರು ಇದನ್ನು ನಾನು ಸ್ವತಃ ನೋಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಈಗ ಸೋಹಂ ಜೊತೆ ಕೆಲಸ ಮಾಡಿದ ಸಿಲಿಕಾನ್ ವ್ಯಾಲಿಯ ಹಲವು ಹಲವು ಸಂಸ್ಥೆಗಳಿಗೆ ಸೋಹಮ್ ಪರೇಖ್ ಈಗ ಎಚ್ಚರಿಕೆಯ ಗಂಟೆಯಾಗಿದ್ದಾರೆ.
ಅದೇನೆ ಇರಲಿ ಭಾರತೀಯರ ಬುದ್ಧಿವಂತಿಕೆ ಇಡೀ ಜಗತ್ತಿಗೆ ಗೊತ್ತು. ಸೋಹಂ ಪರೇಖ್ ಮೋಸ ಮಾಡಿದ್ದಾರೋ ಇಲ್ಲವೋ ತಿಳಿಯದು. ಆದರೆ ಐದಾರು ಕಂಪನಿಗಳಲ್ಲಿ ಏಕಕಾಲಕ್ಕೆ ಕೆಲಸ ಮಾಡುವಂತಹ ಸಾಮರ್ಥ್ಯವನ್ನು ಹೊಂದಿರುವ ಸೋಹಮ್ ಪರೇಖ್ ಭಾರತೀಯರ ಬುದ್ಧಿವಂತಿಕೆಗೆ ಸಾಕ್ಷಿ ಎಂದರೆ ತಪ್ಪಗಲಾರದೇನೋ?
