ಅಮೆರಿಕದ ಹೊಸ ಆಮದು ಸುಂಕದ ಪಟ್ಟಿಯಿಂದ ಭಾರತ ಬಚಾವ್: ಟ್ರಂಪ್ ಹೇಳಿಕೆ ಮೇಲೆ ವ್ಯಾಪಾರ ಒಪ್ಪಂದ ನಿರೀಕ್ಷೆ

ನವದೆಹಲಿ: ಅಮೆರಿಕ ಸರ್ಕಾರ ಜಪಾನ್, ಬಾಂಗ್ಲಾದೇಶ, ಸೌತ್ ಕೊರಿಯಾ ಸೇರಿ 14 ದೇಶಗಳ ಮೇಲೆ ಹೊಸ ಆಮದು ಸುಂಕ ದರಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಭಾರತವನ್ನು ಸೇರಿಸಲಾಗಿಲ್ಲ. ಭಾರತದ ಜೊತೆ ಒಪ್ಪಂದ ಕುದುರಿಸುವ ಹಂತದಲ್ಲಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 14 ದೇಶಗಳ ಮೇಲಿನ ಹೊಸ ಟ್ಯಾರಿಫ್ ಆಗಸ್ಟ್ 1ರಿಂದ ಚಾಲನೆಗೆ ಬರುತ್ತದೆ.

ಟ್ರಂಪ್ ಅವರು ತಮ್ಮ ಟ್ರೂತ್ ಸೋಷಿಯಲ್ನ ಅಕೌಂಟ್ನಲ್ಲಿ, ಜಪಾನ್ ಮತ್ತು ಸೌತ್ ಕೊರಿಯಾ ಮೇಲೆ ಶೇ. 25 ಟ್ಯಾರಿಫ್ ಹಾಕುತ್ತಿರುವುದಾಗಿ ಬರೆದಿದ್ದರು. ಅದರ ಬೆನ್ನಲ್ಲೇ ಇನ್ನೂ 12 ದೇಶಗಳ ಮೇಲೆ ಟ್ಯಾರಿಫ್ ಹಾಕುತ್ತಿರುವುದನ್ನು ತಿಳಿಸಿ, ಟ್ಯಾರಿಫ್ ಪತ್ರಗಳನ್ನು ಹಂಚಿಕೊಂಡಿದ್ದಾರೆ.

ಅಮೆರಿಕದಿಂದ ಹೊಸ ಟ್ಯಾರಿಫ್ ಹೇರಲಾಗಿರುವ 14 ದೇಶಗಳು
ಜಪಾನ್, ಸೌತ್ ಕೊರಿಯಾ, ಮಯನ್ಮಾರ್, ಲಾವೋಸ್, ಥಾಯ್ಲೆಂಡ್, ಸೌತ್ ಆಫ್ರಿಕಾ, ಬಾಂಗ್ಲಾದೇಶ, ಕಜಕಸ್ತಾನ್, ಇಂಡೋನೇಷ್ಯಾ, ಟುನಿಶಿಯಾ, ಮಲೇಷ್ಯಾ, ಸರ್ಬಿಯಾ, ಕಾಂಬೋಡಿಯಾ, ಬೋಸ್ನಿಯಾ ಹರ್ಜೆಗೊವಿನಾ ದೇಶಗಳಿಗೆ ಅಮೆರಿಕ ಹೊಸ ಆಮದು ಸುಂಕಗಳನ್ನು ಪ್ರಕಟಿಸಿದೆ. ಆಗಸ್ಟ್ 1ರಿಂದ ಇದು ಚಾಲನೆಗೆ ಬರುತ್ತದೆ.
ಸದ್ಯಕ್ಕೆ ಬಚಾವಾದ ಭಾರತ…
ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ದೇಶಗಳ ಮೇಲೆ ಟ್ಯಾರಿಫ್ ಹೇರಿಕೆಗೆ ಬೆದರಿಕೆ ಹಾಕುತ್ತಿರುವ ಉದ್ದೇಶವೇ ಟ್ಯಾಕ್ಸ್ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಗಿಟ್ಟಿಸಲು. ಅಮೆರಿಕದ ಟ್ರೇಡ್ ಡೆಫೆಸಿಟ್ ಅಧಿಕ ಇದ್ದು, ಅದನ್ನು ತಗ್ಗಿಸುವ ಯೋಜನೆ ಟ್ರಂಪ್ರದ್ದು. ಹೀಗಾಗಿ, ಅಮೆರಿಕದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಎಲ್ಲಾ ದೇಶಗಳನ್ನೂ ಆಹ್ವಾನಿಸಿದ್ದಾರೆ. ಒಪ್ಪಂದ ಮಾಡಿಕೊಳ್ಳುವ ಮತ್ತು ಒಪ್ಪಂದ ಮಾಡಿಕೊಂಡಿರುವ ದೇಶಗಳನ್ನು ಹೊರತುಪಡಿಸಿ ಉಳಿದ ದೇಶಗಳಿಗೆ ಅವರು ಆಮದು ಸುಂಕ ವಿಧಿಸುತ್ತಿದ್ದಾರೆ. ಅದರ ಮೊದಲ ಭಾಗವಾಗಿ 14 ದೇಶಗಳ ಮೇಲೆ ಟ್ಯಾರಿಫ್ ಪ್ರಕಟಿಸಿದ್ದಾರೆ.

ಭಾರತವು ಕಳೆದ ಕೆಲ ವಾರಗಳಿಂದ ಅಮೆರಿಕದ ಜೊತೆ ವ್ಯಾಪಾರ ಒಪ್ಪಂದ ಕುದುರಿಸಲು ನಿರಂತರ ಮಾತುಕತೆಯಲ್ಲಿ ತೊಡಗಿದೆ. ಇತ್ತೀಚೆಗಷ್ಟೇ ಭಾರತದಿಂದ ನಿಯೋಗವೊಂದು ಅಮೆರಿಕಕ್ಕೆ ಹೋಗಿ ಬಂದಿತ್ತು. ಒಪ್ಪಂದದ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಭಾರತ ಹೇಳಿತ್ತು. ಡೊನಾಲ್ಡ್ ಟ್ರಂಪ್ ಕೂಡ ಇದನ್ನು ಪುನರುಚ್ಚರಿಸಿದ್ದಾರೆ.
