ರಷ್ಯಾ ತೈಲ ಖರೀದಿಯ ವಿರುದ್ಧ ಟೀಕೆ? ಭಾರತ ಸ್ಪಷ್ಟ – ಇದು ಆರ್ಥಿಕತೆಯ ಅವಶ್ಯಕತೆ

ನವದೆಹಲಿ: ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಉರಿದುಕೊಳ್ಳುತ್ತಿರುವ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಭಾರತದ ರಾಯಭಾರಿಯೊಬ್ಬರು ಕಿಡಿಕಾರಿದ್ದಾರೆ. ಬ್ರಿಟಿಷ್ ರೇಡಿಯೋ ಸ್ಟೇಷನ್ನಲ್ಲಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ವಿಕ್ರಮ್ ದೊರೈಸ್ವಾಮಿ ಅವರು ಜಾಗತಿಕ ರಾಜಕೀಯ ಕಾರಣಗಳಿಗೆ ಭಾರತ ತನ್ನ ಆರ್ಥಿಕತೆಯನ್ನು ಯಾಕೆ ಮುಚ್ಚಬೇಕು ಎಂದು ಪ್ರಶ್ನಿಸಿದ್ದಾರೆ.

ಬ್ರಿಟನ್ ದೇಶಕ್ಕೆ ಭಾರತದ ರಾಯಭಾರಿಯಾಗಿರುವ ವಿಕ್ರಮ್ ದೊರೈಸ್ವಾಮಿ, ಪಾಶ್ಚಿಮಾತ್ಯ ದೇಶಗಳ ಇಬ್ಬಗೆ ನೀತಿಯನ್ನು ಎತ್ತಿ ತೋರಿಸಿದ್ದಾರೆ. ರಷ್ಯಾ ಜೊತೆ ಭಾರತ ನಿಕಟವಾಗಿರುವುದನ್ನು ಪಶ್ಚಿಮ ದೇಶಗಳು ಟೀಕಿಸುತ್ತಿರುವ ಬಗ್ಗೆ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಹಲವು ಯೂರೋಪಿಯನ್ ದೇಶಗಳು ರೇರ್ ಅರ್ಥ್ ಹಾಗೂ ಇತರ ಇಂಧನ ಉತ್ಪನ್ನಗಳನ್ನು ಬೇರೆ ದೇಶಗಳಿಂದ ಖರೀದಿಸುತ್ತವೆ. ಆದರೆ, ಅವೇ ದೇಶಗಳಿಂದ ನಾವು ಖರೀದಿಸುತ್ತೇವೆಂದರೆ ಬೇಡ ಎನ್ನುತ್ತವೆ ಎಂದು ವಿಕ್ರಮ್ ದೊರೈಸ್ವಾಮಿ ವಿವರಿಸಿದ್ದಾರೆ.
‘ಹಲವು ಮಾನದಂಡಗಳ ಆಧಾರದ ಮೇಲೆ ನಾವು ಸಂಬಂಧ ಬೆಳೆಸುತ್ತೇವೆ. ನಮ್ಮ ಪಾಶ್ಚಿಮಾತ್ಯ ಜೊತೆಗಾರರು ನಮಗೆ ಶಸ್ತ್ರಾಸ್ತ್ರ ಮಾರುತ್ತಿರಲಿಲ್ಲ. ಬದಲಾಗಿ ನಮ್ಮ ಮೇಲೆ ದಾಳಿ ಮಾಡುವ ನೆರೆಯ ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ಮಾರುತ್ತಿದ್ದವು. ಅಂಥ ಕಾಲಘಟ್ಟದಲ್ಲಿ ನಮ್ಮ ಒಂದು ಭದ್ರತಾ ಸಂಬಂಧ ಬೆಳೆದಿದ್ದು’ ಎಂದು ರಷ್ಯಾ ಜೊತೆಗಿನ ಭಾರತದ ಸಂಬಂಧದ ಇತಿಹಾಸದ ಹಿನ್ನೆಲೆಯನ್ನು ಭಾರತದ ರಾಯಭಾರಿಗಳು ತಿಳಿಸಿದ್ದಾರೆ.
ಭಾರತವು ರಷ್ಯಾದಿಂದ ಕಚ್ಛಾ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತದೆ. ಅಮೆರಿಕ, ಯೂರೋಪಿನ್ ರಾಷ್ಟ್ರಗಳು ಭಾರತದ ಈ ಕ್ರಮವನ್ನು ಸತತವಾಗಿ ಪ್ರಶ್ನೆ ಮಾಡುತ್ತಾ ಬಂದಿವೆ. ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾದೊಂದಿಗೆ ವ್ಯವಹಾರ ಮಾಡುವ ಮೂಲಕ ಅದರ ಆರ್ಥಿಕತೆಗೆ ಪೋಷಣೆ ನೀಡುತ್ತಿದೆ ಎಂದು ಭಾರತದ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಇರುವ ತಗಾದೆಯಾಗಿದೆ.
ರಷ್ಯಾ ರಿಯಾಯಿತಿ ದರದಲ್ಲಿ ತೈಲವನ್ನು ಭಾರತಕ್ಕೆ ಸರಬರಾಜು ಮಾಡುತ್ತಿದೆ. ಭಾರತದ ಆರ್ಥಿಕತೆಯ ದೃಷ್ಟಿಯಿಂದ ಇದು ಸಮಯೋಚಿತ ನಿರ್ಧಾರವೆಂದು ಪರಿಗಣಿಸಲಾಗಿದೆ. ಆದರೆ, ರಷ್ಯನ್ ತೈಲ ಖರೀದಿಸುವ ರಾಷ್ಟ್ರಗಳನ್ನೂ ನಿರ್ಬಂಧಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಬೆದರಿಸುತ್ತಿದ್ದಾರೆ.
