ಭಾರತ ಮತ್ತೆಆರ್ಸಿಇಪಿ ವ್ಯಾಪಾರ ಗುಂಪಿಗೆ ಸೇರುವ ಕುರಿತು ಚಿಂತನೆ – ಲಾಭ-ನಷ್ಟ ವಿಶ್ಲೇಷಣೆ

ನವದೆಹಲಿ: ಐದಾರು ವರ್ಷದ ಹಿಂದೆ ತಾನು ತೊರೆದು ಬಂದಿದ್ದ ಆರ್ಸಿಇಪಿ ಟ್ರೇಡಿಂಗ್ ಗುಂಪಿಗೆ ಮತ್ತೆ ಸೇರಲು ಭಾರತ ಯೋಜಿಸುತ್ತಿರುವ ಸುದ್ದಿ ಕೇಳಿಬಂದಿದೆ. ಚೀನಾ ಸೇರಿ 15 ದೇಶಗಳಿರುವ ಈ ಟ್ರೇಡಿಂಗ್ ಕೂಟಕ್ಕೆ ಸೇರಿದರೆ ಅನುಕೂಲ ಮತ್ತು ಅನನುಕೂಲಗಳೇನಿರಬಹುದು ಎಂದು ಭಾರತ ವಿಮರ್ಶಿಸುತ್ತಿದೆ. ಮಿಂಟ್ ಪತ್ರಿಕೆಯಲ್ಲಿ ಎರಡು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಈ ಬಗ್ಗೆ ವರದಿ ಪ್ರಕಟಿಸಿದೆ. 2019ರಲ್ಲಿ ಭಾರತವು ಆರ್ಸಿಇಪಿ ಗುಂಪಿನಿಂದ ನಿರ್ಗಮಿಸಿ ಬಂದಿತ್ತು.

ಹಿಂದೆ ಆರ್ಸಿಇಪಿಯಿಂದ ಭಾರತ ನಿರ್ಗಮಿಸಿದ್ದು ಯಾಕೆ?
ಆರ್ಸಿಇಪಿ ಎಂದರೆ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ. ಇದು ವಿಶ್ವದ ಅತಿದೊಡ್ಡ ಟ್ರೇಡ್ ಬ್ಲಾಕ್ಗಳಲ್ಲಿ ಒಂದು. ವಿಶ್ವದ ಶೇ. 30ಕ್ಕೂ ಹೆಚ್ಚಿನ ಜಿಡಿಪಿ ಹೊಂದಿರುವ ರಾಷ್ಟ್ರಗಳ ಗುಂಪಿದು. ಪೂರ್ವ ಏಷ್ಯನ್ ಭಾಗದ ದೇಶಗಳೇ ಈ ಗುಂಪಿನಲ್ಲಿರುವುದು. ಬ್ರಿಕ್ಸ್ ಗುಂಪಿಗಿಂತಲೂ ದೊಡ್ಡದು.
ಆಸಿಯನ್ ಗುಂಪಿನ ಸದಸ್ಯ ದೇಶಗಳಾದ ಬ್ರೂನೇ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮಯನ್ಮಾರ್, ಫಿಲಿಪ್ಪೈನ್ಸ್, ಸಿಂಗಾಪುರ್, ಥಾಯ್ಲೆಂಡ್, ವಿಯೆಟ್ನಾಂ ಆರ್ಸಿಇಪಿಯಲ್ಲಿವೆ. ಇವುಗಳ ಜೊತೆಗೆ ಚೀನಾ, ಜಪಾನ್, ಸೌತ್ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳೂ ಈ ಗುಂಪಿನಲ್ಲಿವೆ.
ಆರ್ಸಿಇಪಿಯಲ್ಲಿ ಈ ಎಲ್ಲಾ 15 ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ನಿಯಮಗಳು ಇರುತ್ತವೆ. ಚೀನಾ ಜೊತೆ ಸಾಕಷ್ಟು ಟ್ರೇಡ್ ಡೆಫಿಸಿಟ್ ಹೊಂದಿರುವ ಭಾರತವು ಈ ಆರ್ಸಿಇಪಿ ಸೇರಿದರೆ ಚೀನಾದಿಂದ ಮತ್ತಷ್ಟು ಸರಕುಗಳು ಯಥೇಚ್ಛವಾಗಿ ಹರಿದುಬರಬಹುದು ಎನ್ನುವ ಭೀತಿ ಇದೆ. ಇದೇ ಕಾರಣಕ್ಕೆ ಅದು ಆರ್ಸಿಇಪಿಯಲ್ಲಿ ಮುಂದುವರಿಸಲು ಇಚ್ಛಿಸದೆ 2019ರಲ್ಲಿ ನಿರ್ಗಮಿಸಿತು.
ನ್ಯೂಜಿಲೆಂಡ್ ದೇಶ ಕೂಡ ಸಾಕಷ್ಟು ಡೈರಿ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ರಫ್ತು ಮಾಡಲು ಸಿದ್ಧವಿದೆ. ಹೀಗಾದಲ್ಲಿ ಭಾರತದ ಕೃಷಿ ಮತ್ತು ಡೈರಿ ಮಾರುಕಟ್ಟೆಗೆ ಹೊಡೆತ ಬೀಳುತ್ತದೆ. ಆರ್ಸಿಇಪಿಯಿಂದ ಭಾರತ ನಿರ್ಗಮಿಸಲು ಇದೂ ಒಂದು ಕಾರಣ. ಈಗ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ತಡೆಯಾಗಿರುವುದು ಕೂಡ ಇವೇ ಕೃಷಿ ಮತ್ತು ಡೈರಿ ಸೆಕ್ಟರ್ಗಳೇ. ಇವುಗಳನ್ನು ರಕ್ಷಿಸುವ ಬದ್ಧತೆಯನ್ನು ಕೈಬಿಡಲು ಭಾರತ ಸಿದ್ಧ ಇಲ್ಲ.
ಈಗ ಆರ್ಸಿಇಪಿಗೆ ಮರುಸೇರ್ಪಡೆಯಾಗಲು ಭಾರತ ಯೋಜಿಸಿರುವುದು ಯಾಕೆ?
ಡೊನಾಲ್ಡ್ ಟ್ರಂಪ್ ಈಗ ಭಾರತದ ಮೇಲೆ ಶೇ. 50ರಷ್ಟು ಟ್ಯಾರಿಫ್ ವಿಧಿಸಿದ್ದಾರೆ. ಭಾರತದ ರಫ್ತಿಗೆ ಅತಿದೊಡ್ಡ ಮಾರುಕಟ್ಟೆಯಾಗಿದ್ದುದು ಅಮೆರಿಕವೇ. ಹಲವು ಬಿಲಿಯನ್ ಡಾಲರ್ ಮೊತ್ತದ ರಫ್ತಿಗೆ ಈಗ ಸಂಚಕಾರ ಏರ್ಪಟ್ಟಿದೆ. ಇದನ್ನು ಸರಿದೂಗಿಸಲು ಭಾರತ ಪರ್ಯಾಯ ಮಾರುಕಟ್ಟೆಗಳನ್ನು ಅವಲೋಕಿಸುತ್ತಿದೆ. ವಿವಿಧ ದೇಶಗಳ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಶುರು ಹಚ್ಚಿದೆ. ಈ ಕಾರಣಕ್ಕೆ ಆರ್ಸಿಇಪಿಗೆ ಮತ್ತೆ ಸೇರುವ ಬಗ್ಗೆ ಚಿಂತನೆ ನಡೆಸುತ್ತಿರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.