ಕ್ಷಿಪಣಿ ತಯಾರಿಕೆಯಲ್ಲಿ ಗತಿ ಹೆಚ್ಚಿಸಿಕೊಂಡ ಭಾರತ – ಟರ್ನರೌಂಡ್ ಟೈಮ್ 2-3 ವರ್ಷಕ್ಕೆ ಇಳಿಕೆ

ನವದೆಹಲಿ: ಭಾರತ ಕ್ಷಿಪಣಿ ತಯಾರಿಕೆಯಲ್ಲಿ ಮಹತ್ವದ ಬೆಳವಣಿಗೆ ಹೊಂದುತ್ತಿದೆ. ಅದರ ತಯಾರಿಕಾ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ಹಚ್ಚುತ್ತಿದೆ. ಮಿಸೈಲ್ ತಯಾರಿಕೆಯ ವೇಗದಲ್ಲಿ, ಅಂದರೆ, ಪ್ರೊಡಕ್ಷನ್ ಟರ್ನರೌಂಡ್ ಟೈಮ್ನಲ್ಲಿ ಬಹಳ ಇಳಿಕೆ ಆಗಿದೆ. ಈ ಮೊದಲು ಕ್ಷಿಪಣಿ ಅಭಿವೃದ್ಧಿಗೆ 10-12 ವರ್ಷ ಆಗುತ್ತಿತ್ತು. ಈಗ ಅದು 2-3 ವರ್ಷದೊಳಗೆ ಆಗುತ್ತಿದೆ. ಭಾರತೀಯ ಏರೋನಾಟಿಕಲ್ ಸೊಸೈಟಿಯ ಅಧ್ಯಕ್ಷ ಹಾಗೂ ಡಿಆರ್ಡಿಒದ ಮಾಜಿ ಅಧ್ಯಕ್ಷರೂ ಆದ ಜಿ ಸತೀಶ್ ರೆಡ್ಡಿ ಈ ಮಾಹಿತಿ ನೀಡಿದ್ದಾರೆ ಎಂದು ಇಂಡಿಯನ್ ಡಿಫೆನ್ಸ್ ರಿಸರ್ಚ್ ವಿಂಗ್ ವೆಬ್ಸೈಟ್ನಲ್ಲಿ ವರದಿಯಾಗಿದೆ.

ಮಿಸೈಲ್ ಸಾಮರ್ಥ್ಯದಲ್ಲಿ ಮುಂದುವರಿದ ದೇಶಗಳ ಸಾಲಿಗೆ ಸೇರಿದ ಭಾರತ
ಭಾರತದ ಕ್ಷಿಪಣಿ ತಯಾರಿಕೆ ಅವಧಿ 2-3 ವರ್ಷಕ್ಕೆ ಇಳಿದಿರುವುದು ಗಮನಾರ್ಹ ಸಂಗತಿ. ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳು ಮಾತ್ರ ಇಷ್ಟು ವೇಗವಾಗಿ ಕ್ಷಿಪಣಿ ತಯಾರಿಸಬಲ್ಲುವು. ಅಮೆರಿಕ ಮತ್ತು ರಷ್ಯಾ ಆರೇಳು ದಶಕಗಳಿಂದ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ನಿರತವಾಗಿವೆ. ಚೀನಾ ಹಲವು ದಶಕಗಳಿಂದಲೂ ಮಿಸೈಲ್ ಉತ್ಪಾದನೆಯಲ್ಲಿ ತೊಡಗಿದೆ. ಭಾರತವು ಕ್ಷಿಪಣಿ ಅಭಿವೃದ್ಧಿಗೆ ನಿಂತಿದ್ದು ಇತ್ತೀಚೆಗೆ. ಇಷ್ಟು ಬೇಗ ಅದರ ಸಾಮರ್ಥ್ಯವು ಮುಂದುವರಿದ ದೇಶಗಳ ಸಾಲಿಗೆ ಸೇರ್ಪಡೆಯಾಗಿದ್ದು ಗಮನಿಸಬೇಕಾದ ಸಂಗತಿ.
‘ಕ್ಷಿಪಣಿ ಅಭಿವೃದ್ಧಿಗೆ ತಗುಲುವ ಸಮಯ ಇಳಿಕೆ ಆಗಿರುವುದು ಮಿಸೈಲ್ ಟೆಕ್ನಾಲಜಿಯಲ್ಲಿ ನಾವು ಪಳಗುತ್ತಿರುವುದನ್ನು, ಸ್ವಾವಲಂಬನೆಗೆ ನಮಗಿರುವ ಬದ್ಧತೆಯನ್ನು ತೋರಿಸುತ್ತದೆ’ ಎಂದು ಡಾ. ಸತೀಶ್ ರೆಡ್ಡಿ ಹೇಳಿದ್ದಾರೆ.
ಡಿಆರ್ಡಿಒ ಸಂಸ್ಥೆಯು ಭಾರತದ ಕ್ಷಿಪಣಿ ಅಭಿವೃದ್ಧಿ ಯೋಜನೆಗಳನ್ನು ನಿರ್ವಹಿಸುತ್ತದೆ. ಅಗ್ನಿ ಸರಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಬ್ರಹ್ಮೋಸ್ ಕ್ರ್ಯೂಸ್ ಕ್ಷಿಪಣಿಗಳು, ಅಸ್ತ್ರ , ರುದ್ರಂ ಸರಣಿಯ ಕ್ಷಿಪಣಿಗಳು , ಆಕಾಶ್ ಏರ್ ಡಿಫೆನ್ಸ್ ಸಿಸ್ಟಂ, ಪೋರ್ಟಬಲ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಇತ್ಯಾದಿ ಹಲವಾರು ರೀತಿಯ ಕ್ಷಿಪಣಿಗಳನ್ನು ಡಿಆರ್ಡಿಒ ಅಭಿವೃದ್ಧಿಪಡಿಸುತ್ತದೆ.
ಡಿಆರ್ಡಿಒ ತಾನು ಅಭಿವೃದ್ಧಿಪಡಿಸುವ ಕ್ಷಿಪಣಿಗಳ ತಂತ್ರಜ್ಞಾನವನ್ನು ಎಚ್ಎಎಲ್ ಹಾಗೂ ಹಲವು ಖಾಸಗಿ ಕಂಪನಿಗಳಿಗೆ ನೀಡುತ್ತದೆ. ಅವು ಈ ಕ್ಷಿಪಣಿಗಳನ್ನು ತಯಾರಿಸುತ್ತವೆ. ಭಾರತ್ ಡೈನಾಮಿಕ್ಸ್ ಲಿಮಿಟೆಡ್, ಎಲ್ ಅಂಡ್ ಟಿ, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಇತ್ಯಾದಿ ಖಾಸಗಿ ಕಂಪನಿಗಳು ಡಿಫೆನ್ಸ್ ಸೆಕ್ಟರ್ಗೆ ಬಂದ ಬಳಿಕ ಭಾರತದ ಡಿಫೆನ್ಸ್ ಪ್ರೊಡಕ್ಟಿವಿಟಿ ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ ಕ್ಷಿಪಣಿ ತಯಾರಿಕೆಯ ಟರ್ನರೌಂಡ್ ಟೈಮ್ ಬಹಳ ತಗ್ಗಿದೆ.
