ಅಮೆರಿಕದಿಂದ ಭಾರತೀಯರ ಗಡೀಪಾರು ಹೆಚ್ಚಳ: ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಪ್ರತಿದಿನ 8 ಮಂದಿ ವಾಪಸ್!

ಬೆಂಗಳೂರು: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಕಳೆದ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಸರಾಸರಿ ಪ್ರತಿದಿನ ಎಂಟು ಮಂದಿ ಭಾರತೀಯರು ಆ ದೇಶದಿಂದ ಗಡೀಪಾರು ಆಗುತ್ತಿದ್ದಾರೆ. ಇದಕ್ಕೂ ಮುನ್ನ 2020 ರಿಂದ 2024ರ ವರೆಗೆ ಅಧಿಕಾರದಲ್ಲಿದ್ದ ಜೋ ಬೈಡೇನ್ ಅವರ ಅವಧಿಯಲ್ಲಿ ಸರಾಸರಿ ಮೂರು ಮಂದಿ ಭಾರತೀಯರು ಗಡೀಪಾರು ಆಗುತ್ತಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, 2020ರ ಜನವರಿಯಿಂದ 2025ರ ಜುಲೈ ವರೆಗೆ 7244 ಮಂದಿ ಭಾರತೀಯರು ವಿವಿಧ ಕಾರಣಗಳಿಂದ ಅಮೆರಕದಿಂದ ಗಡೀಪಾರು ಆಗಿದ್ದಾರೆ. ಈ ಪೈಕಿ ಶೇಕಡ 25ರಷ್ಟು ಮಂದಿ ಅಂದರೆ 1703 ಮಂದಿ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಗಡೀಪಾರು ಆಗಿದ್ದಾರೆ.
ಟ್ರಂಪ್ ಆಡಳಿತದ ವಲಸೆ ನೀತಿ ಹಾಗೂ ಕಾನೂನು ಜಾರಿ ವ್ಯವಸ್ಥೆ ಆಕ್ರಮಣಕಾರಿ ರೀತಿಯಲ್ಲಿ ಕೆಲಸ ಮಾಡುತ್ತಿರುದು ಇದಕ್ಕೆ ಕಾರಣ. ವೀಸಾ ನೀಡಿದ ಮಾತ್ರಕ್ಕೆ ಜನತೆಯ ವೀಸಾ ತಪಾಸಣೆ ನಿಲ್ಲುವುದಿಲ್ಲ ಎಂದು ಅಮೆರಿಕದ ರಕ್ಷಣಾ ಇಲಾಖೆ ಜೂನ್ 26ರಂದು ಹೇಳಿಕೆ ನೀಡಿತ್ತು. ಅಮೆರಿಕದ ಕಾನೂನು ಮತ್ತು ವಲಸೆ ನೀತಿಯನ್ನು ಅನುಸರಿಸುವುದನ್ನು ಖಾತರಿಪಡಿಸಲು ವೀಸಾ ಹೊಂದಿರುವವರ ತಪಾಸಣೆ ನಿರಂತರವಾಗಿ ನಡೆಯುತ್ತದೆ. ಪಾಲಿಸದವರ ವೀಸಾ ರದ್ದುಪಡಿಸಿ ಅವರನ್ನು ಗಡೀಪಾರು ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು.
ಈ ವರ್ಷದ ಜನವರಿಯಿಂದೀಚೆಗೆ ಗಡೀಪಾರಾದ 1703 ಮಂದಿಯ ಪೂಕಿ 864 ಮಂದಿಯನ್ನು ಸರ್ಕಾರ ವ್ಯವಸ್ಥೆ ಮಾಡಿದ ವಿಶೇಷ ಮಿಲಿಟರಿ ವಿಮಾನದಲ್ಲಿ ಭಾರತಕ್ಕೆ ಕಳುಹಿಸಿಕೊಡಲಾಗಿತ್ತು. ಫೆಬ್ರುವರಿ 6, 15 ಮತ್ತು 16ರಂದು ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ಸುರಕ್ಷಾ ಪಡೆ 333 ಮಂದಿಯನ್ನು ಗಡೀಪಾರು ಮಾಡಿತ್ತು. ಬಳಿಕ ಮಾರ್ಚ್ 19, ಜೂನ್ 8 ಹಾಗೂ ಜೂನ್ 25ರಂದು ವಿಶೇಷ ವಿಮಾನಗಳಲ್ಲಿ 231 ಮಂದಿಯನ್ನು ಸ್ವದೇಶಕ್ಕೆ ವಾಪಾಸು ಕಳುಹಿಸಿತ್ತು. ಜುಲೈ 5 ಮತ್ತು 18ರಂದು ಅಮೆರಿಕದ ಒಳನಾಡು ಭದ್ರತಾ ವಿಭಾಗ 300 ಮಂದಿಯನ್ನು ಭಾರತಕ್ಕೆ ಕಳುಹಿಸಿತ್ತು.
ಒಟ್ಟು 747 ಮಂದಿಯನ್ನು ವಾಣಿಜ್ಯ ವಿಮಾನಗಳಲ್ಲಿ ಕಳುಹಿಸಲಾಗಿದ್ದು, ಅವರಿಗೆ ವ್ಯವಸ್ಥೆ ಮಾಡಿದ ಟಿಕೆಟ್ ವ್ಯವಸ್ಥೆಯಲ್ಲಿ ಆಸನ ಲಭ್ಯವಾದಂತೆ ಅವರು ಸಣ್ಣ ಗುಂಪುಗಳಲ್ಲಿ ತಾಯ್ನೆಲಕ್ಕೆ ವಾಪಸ್ಸಾಗಿದ್ದಾರೆ. ಇಂಥದ್ದೇ ವಿಧಾನದಲ್ಲಿ 72 ಮಂದಿ ಪನಾಮದಿಂದ ಬಂದಿದ್ದಾರೆ
