ಬಾರ್ ಮುಂದೆ ನಡೆದ ಈ ಘಟನೆಗೆ ಸಿಕ್ಕಿತು ಜೀವಾವಧಿ ಶಿಕ್ಷೆ!

ರಾಮನಗರ :ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹುಣಸನಹಳ್ಳಿಯಲ್ಲಿ 2021ರ ಆಗಸ್ಟ್ 8 ರಂದು ನಡೆದ ಬಾರ್ ಮುಂದಿನ ಕೊಲೆ ಪ್ರಕರಣದಲ್ಲಿ 12 ಮಂದಿ ಆರೋಪಿಗಳಿಗೆ ಕನಕಪುರದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.ರಾಮನಗರ, ಏಪ್ರಿಲ್ 10: ಹಾಡಹಗಲೇ ಬಾರ್ ಮುಂದೆ ಅಟ್ಟಾಡಿಸಿ ಕೊಲೆಗೈದಿದ್ದ (kill) 12 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ (Life Sentences) ಕನಕಪುರ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಕುಮಾರ ಎಚ್ಎನ್ ಅವರಿಂದ ಗುರುವಾರ ಆದೇಶ ಹೊರಡಿಸಲಾಗಿದೆ. ಮಾದೇಶ್, ಶಿವಕುಮಾರ್, ಲೋಕೇಶ್, ಕಾರ್ತಿಕ್, ವೇಣುಗೋಪಾಲ್, ದಿಲೀಪ್ ರಾಜ್, ರಾಮಚಂದ್ರ, ಗುರಪ್ಪ, ರಘು, ದಶರಥ, ಹರೀಶ್ ಮತ್ತು ಸುರೇಶ್ ಜೀವಾವಧಿ ಶಿಕ್ಷೆಗೆ ಗುರಿಯಾದವರು. ನಡೆದದ್ದೇನು?
2021ರ ಆಗಸ್ಟ್ 8 ರಂದು ಜಿಲ್ಲೆಯ ಕನಕಪುರ ತಾಲೂಕಿನ ಹುಣಸನಹಳ್ಳಿ ಬಾರ್ ಬಳಿ ಭೀಕರ ಕೊಲೆ ನಡೆದಿತ್ತು. ತಮಿಳುನಾಡು ಮೂಲದ ಶಂಕರ ಎಂಬಾತನನ್ನ ಬಾರ್ ಮುಂದೆ ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ಜಮೀನು ವಿಚಾರವಾಗಿ ದಾಯಾದಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು. ಪ್ರಕರಣ ಸಂಬಂಧ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ 17 ಜನರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ಟಿಟಿ ಕೃಷ್ಣ ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 5 ಜನ ಆರೋಪಿಗಳು ಪರಾರಿಯಾಗಿದ್ದು, ಉಳಿದ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೊಲೆ ಆರೋಪ ಸಾಬೀತಾದ ಹಿನ್ನೆಲೆ 12 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.
ಜಮೀನು ವಿವಾದ
ಕೊಲೆಯಾಗಿರುವ ಶಂಕರ್ನ ತಂದೆ ಓಬೇಗೌಡ ಹಾಗೂ ಓಬೇಗೌಡನ ತಂಗಿ ಮಗ ಚನ್ನಕೃಷ್ಣ ಎಂಬುವವರ ನಡುವೆ ಹುಲಿಬಂಡೆ ಗ್ರಾಮದಲ್ಲಿ ಕಳೆದ ಹತ್ತು ವರ್ಷದಿಂದ ಜಮೀನು ವಿವಾದ ನಡೆಯುತ್ತಿತ್ತು. ಓಬೇಗೌಡ ಎಂಬಾತನಿಗೆ ತಂಗಿ ಮಗನಾಗಿದ್ದ ಚನ್ನಕೃಷ್ಣ ಸಾಕಷ್ಟು ಕಿರುಕುಳ ನೀಡುತ್ತಿದ್ದ. ಹೀಗಾಗಿ 2015ರಲ್ಲಿ ಓಬೇಗೌಡ, ಹುಲಿಬಂಡೆ ಗ್ರಾಮದಲ್ಲಿಯೇ ಚನ್ನಕೃಷ್ಣನ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ್ದ. ಆನಂತರ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಬಂದ ಚನ್ನಕೃಷ್ಣ 2016ರಲ್ಲಿ ಮಾವನಾದ ಓಬೇಗೌಡನನ್ನ ಗ್ರಾಮದಲ್ಲಿಯೇ ಕೊಲೆ ಮಾಡಿ ಜೈಲು ಸೇರಿದ್ದ
ಆನಂತರ ಕೆಲ ವರ್ಷಗಳ ಕೆಳಗೆ ಚನ್ನಕೃಷ್ಣ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದು, ಹುಲಿಬಂಡೆ ಗ್ರಾಮದಲ್ಲಿ ವಾಸವಿದ್ದ. ಅಲ್ಲದೇ ಮದುವೆ ಕೂಡ ಆಗಿದ್ದ. ಆನಂತರ ಬೆಂಗಳೂರು ಸೇರಿದ್ದ ಚನ್ನಕೃಷ್ಣ, ಆಗಾಗ ಹುಲಿಬಂಡೆ ಗ್ರಾಮಕ್ಕೆ ಬಂದು ಹೋಗುತ್ತಿದ್ದ. ಆದರೆ ತಂದೆಯನ್ನ ಕೊಲೆ ಮಾಡಿದ ದ್ವೇಷದ ಹಿನ್ನೆಲೆಯಲ್ಲಿ ಓಬೇಗೌಡನ ಮಕ್ಕಳಾದ ಶಂಕರ್, ಗಣೇಶ್, ಮುರಗೇಶ್ ಸೇರಿಕೊಂಡು 2021ರ ಫೆಬ್ರವರಿಯಲ್ಲಿ ಚನ್ನಕೃಷ್ಣನನ್ನ ಹುಲಿಬಂಡೆ ಗ್ರಾಮದಲ್ಲಿಯೇ ಹತ್ಯೆ ಮಾಡಿದ್ದರು.
ಬಳಿಕ ಮೂವರು ಜಾಮೀನಿನ ಮೇಲೆ ಹೊರ ಬಂದಿದ್ದರು. ಆದರೆ ಚನ್ನಕೃಷ್ಣ ಹೆಂಡತಿಗೆ ಮಗುವಾಗಿತ್ತು. ಬಂಧನವಾಗಿದ್ದ ಆರೋಪಿಗಳ ಮುಂದೆ ಚನ್ನಕೃಷ್ಣನ ಹೆಂಡತಿ ನೋವು ತೋಡಿಕೊಂಡಿದ್ದಳು. ಚನ್ನಕೃಷ್ಣನ ಜೊತೆ ಆನೇಕಲ್ ಭಾಗದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು, ಶಿಷ್ಯರಾಗಿದ್ದ ಈ ಆರೋಪಿಗಳು, ಸೇಡು ತೀರಿಸಿಕೊಳ್ಳಲು ಶಂಕರ್ ನನ್ನ ಪ್ಲ್ಯಾನ್ ಮಾಡಿ ಹತ್ಯೆ ಮಾಡಿದ್ದರು.