Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯುದ್ಧದ ನೆರಳಿನಲ್ಲಿ ನಿಜ ಮತ್ತು ನೆರೆಟಿವ್ ನಡುವಿನ ಹೋರಾಟ

Spread the love

ನವದೆಹಲಿ: ಯುದ್ಧದಲ್ಲಿ ಯಾರಿಗೆ ಗೆಲುವು ಎಂಬುದು ಹೊರಗಿನ ಜಗತ್ತಿಗೆ ಸ್ಪಷ್ಟವಾಗಿ ಗೋಚರವಾಗದೇ ಇದ್ದಾಗ ಎರಡೂ ದೇಶಗಳು ತಮಗೇ ಗೆಲುವು ಎಂದು ಬಿಂಬಿಸಿಕೊಳ್ಳುವುದುಂಟು. ಹಾಗೆಯೇ, ಯುದ್ಧಕ್ಕೆ ಸಂಬಂಧಿಸಿದ ವ್ಯಕ್ತಿಗಳು, ಸಂಸ್ಥೆಗಳು, ಸಂಘಟನೆಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಅಭಿಪ್ರಾಯಗಳನ್ನು ಹರಡುವುದುಂಟು. ಇದನ್ನೇ ನೆರೇಟಿವ್ ಎನ್ನುವುದು. ಪಾಕಿಸ್ತಾನದ ವಿರುದ್ಧ ಭಾರತ ಆಪರೇಷನ್ ಸಿಂದೂರ ನಡೆಸಿದ ಬಳಿಕ ನಾನಾ ರೀತಿಯ ಊಹಾಪೋಹದ ಸುದ್ದಿಗಳು ಹರಡುತ್ತಿವೆ. ಹೆಚ್ಚಿನ ಪ್ರಮುಖ ಜಾಗತಿಕ ಮಾಧ್ಯಮಗಳು ಪಾಕಿಸ್ತಾನದ ಪರವಾದ ಅಂಶಗಳನ್ನು ಎತ್ತಿ ತೋರಿಸಿದವು. ಪಾಕಿಸ್ತಾನದ ಚೀನೀ ನಿರ್ಮಿತ ಜೆಟ್​​ಗಳು ಭಾರತದ ಫ್ರಾನ್ಸ್ ನಿರ್ಮಿತ 3 ರಫೇಲ್ ಜೆಟ್ಗಳನ್ನು ಹೊಡೆದುರುಳಿಸಿತು ಎನ್ನುವ ಸುದ್ದಿ ಈಗಲೂ ದಟ್ಟವಾಗಿದೆ. ಇದರ ಬೆನ್ನಲ್ಲೇ ಈ ಜೆಟ್​​ಗಳನ್ನು ತಯಾರಿಸುವ ಕಂಪನಿಗಳ ಷೇರುಗಳ ಮೇಲೂ ನೆರೇಟಿವ್ ಪ್ರಭಾವ ಬಿದ್ದಿದೆ.

ರಫೇಲ್ ಯುದ್ಧವಿಮಾನವನ್ನು ತಯಾರಿಸುವ ಫ್ರಾನ್ಸ್​​ನ ಡಸೋ ಏವಿಯೇಶನ್ ಸಂಸ್ಥೆಯ ಷೇರುಗಳು ಮೇ 9ರಿಂದ ಕುಸಿದಿವೆ. ಇನ್ನೊಂದೆಡೆ, ಪಿಎಲ್-15 ಕ್ಷಿಪಣಿ ತಯಾರಿಸುವ ಝುಝೋ ಹೊಂಗ್ಡಾ ಎಲೆಕ್ಟ್ರಾನಿಕ್ಸ್ ಹಾಗೂ ಜೆ-10 ಜೆಟ್ ತಯಾರಿಸುವ ಚೆಂಗ್ಡು ಏರ್​​ಕ್ರಾಫ್ಟ್ ಕಂಪನಿಯ ಷೇರುಗಳು ಏರಿಕೆ ಆಗತೊಡಗಿದವು. ಇದನ್ನೇ ಮುಂದಿಟ್ಟುಕೊಂಡು ಭಾರತದ ಕೆಲ ಮಾಧ್ಯಮಗಳು ಕೂಡ ರಫೇಲ್ ಜೆಟ್​​ಗಳನ್ನು ಚೀನಾದ ಅಗ್ಗದ ಜೆಟ್​​ಗಳು ಹೊಡೆದು ಹಾಕಿದವು ಎಂದು ವರದಿಗಳನ್ನು ಬರೆದದ್ದುಂಟು. ಆದರೆ, ವಾಸ್ತವ ಸಂಗತಿ ಬೇರೆಯೇ ಇದೆ.

ಇವತ್ತು ಮಾರುಕಟ್ಟೆಯಲ್ಲಿ ಚೀನಾದ ಡಿಫೆನ್ಸ್ ಕಂಪನಿಗಳ ಷೇರುಬೆಲೆ ಕುಸಿತ ಕಂಡಿವೆ. ಪಾಕಿಸ್ತಾನಕ್ಕೆ ಎಫ್-16 ಸರಬರಾಜು ಮಾಡಿದ ಅಮೆರಿಕದ ಲಾಕ್​​ಹೀಡ್ ಮಾರ್ಟಿನ್ ಸಂಸ್ಥೆಯ ಷೇರುಬೆಲೆಯೂ ಕುಸಿದಿದೆ. ಇನ್ನೊಂದೆಡೆ, ರಫೇಲ್ ತಯಾರಕ ಸಂಸ್ಥೆಯಾದ ಡೊಸೋ ಏವಿಯೇಶನ್ ಷೇರುಬೆಲೆ ಏರಿದೆ. ಭಾರತದ ಬಿಇಎಲ್, ಎಚ್​​​ಎಎಲ್ ಇತ್ಯಾದಿ ಡಿಫೆನ್ಸ್ ಕ್ಷೇತ್ರದ ಕಂಪನಿಗಳ ಷೇರುಗಳಿಗೂ ಬೇಡಿಕೆ ಹೆಚ್ಚಿದೆ.

ಕೆಲ ಮಾಧ್ಯಮಗಳಲ್ಲಿ ಚೀನೀ ಜೆಟ್​​​ಗಳು ರಫೇಲ್​​ಗಿಂತ ಹೆಚ್ಚು ಪರಿಣಾಮಕಾರಿ ಎಂದು ಬಿಂಬಿಸುವಂತಹ ವರದಿಗಳನ್ನು ಪ್ರಕಟಿಸಿದ್ದರ ಫಲವಾಗಿ ಚೀನೀ ಸ್ಟಾಕುಗಳ ಮೌಲ್ಯ ಏರಿಕೆ ಆಗಿತ್ತು. ಈಗ ಭಾರತದ ಸೇನಾಧಿಕಾರಿಗಳು ಚೀನೀ ಶಸ್ತ್ರಾಸ್ತ್ರಗಳ ದೌರ್ಬಲ್ಯವನ್ನು ಸಾಕ್ಷ್ಯ ಸಮೇತವಾಗಿ ತೋರಿಸಿದ ಬಳಿಕ ಹೂಡಿಕೆದಾರರಿಗೆ ವಾಸ್ತವ ಸಂಗತಿ ಗೊತ್ತಾಗಿರಬಹುದು.

ಪಾಕಿಸ್ತಾನ ವಾಯುಪಡೆಯ ಪ್ರಮುಖ ಶಸ್ತ್ರಾಸ್ತ್ರಗಳನ್ನು ಚೀನಾ, ಅಮೆರಿಕ ಹಾಗು ಟರ್ಕಿ ದೇಶಗಳು ಸರಬರಾಜು ಮಾಡುತ್ತವೆ. ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಂ ಸಂಪೂರ್ಣವಾಗಿ ಚೀನಾ ನಿರ್ಮಿತವಾದುವು. ಪಾಕಿಸ್ತಾನದಲ್ಲಿರುವ ಜೆಟ್​​​ಗಳಲ್ಲಿ ಹೆಚ್ಚಿನವು ಅಮೆರಿಕ ಮತ್ತು ಚೀನಾದಿಂದ ನೀಡಲಾಗಿರುವಂಥವು. ಚೀನಾ ನಿರ್ಮಿತ ಏರ್ ಡಿಫೆನ್ಸ್ ಸಿಸ್ಟಂ ವಿಶ್ವದ ಅತ್ಯುತ್ತಮ ರಕ್ಷಣಾ ಕೋಟೆಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು. ಆದರೆ, ಭಾರತದ ಆಪರೇಷನ್ ಸಿಂದೂರದಲ್ಲಿ ಈ ರಕ್ಷಣಾ ಕೋಟೆ ಅಭೇದ್ಯ ಅಲ್ಲ ಎಂಬುದು ಸ್ಪಷ್ಟವಾಗಿ ಸಾಬೀತಾಗಿದೆ.

ಇನ್ನೊಂದೆಡೆ, ರಷ್ಯಾ, ಇಸ್ರೇಲ್ ಹಾಗೂ ದೇಶೀಯ ನಿರ್ಮಿತ ರಕ್ಷಣಾ ವ್ಯವಸ್ಥೆ ಹೊಂದಿದ್ದ ಭಾರತವು ಪಾಕಿಸ್ತಾನದಿಂದ ಹಾರಿ ಬಂದ ನೂರಾರು ಡ್ರೋನ್​​ಗಳನ್ನು ತಡೆಯಲು ಯಶಸ್ವಿಯಾಗಿದೆ.


Spread the love
Share:

administrator

Leave a Reply

Your email address will not be published. Required fields are marked *