ಸಾರ್ವಜನಿಕ ಹಿತ ದೃಷ್ಟಿಯಿಂದ ಹೈಕೋರ್ಟ್ ಆದೇಶ: ಬುಧವಾರದ ಸಾರಿಗೆ ಮುಷ್ಕರ ತಾತ್ಕಾಲಿಕವಾಗಿ ಮುಂದೂಡಿಕೆ

ಬೆಂಗಳೂರು: ಬುಧವಾರ ನಡೆಯಬೇಕಿದ್ದ ಸಾರಿಗೆ ಮುಷ್ಕರವನ್ನು ಮುಂದೂಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ಸಾರಿಗೆ ನೌಕರರ ಬೇಡಿಕೆ ಈಡೇರಿಸಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರವಹಿಸಲು ಸರ್ಕಾರಕ್ಕೆ ಸೂಚನೆ ನೀಡುವಂತೆ ವಕೀಲ ಅಮೃತೇಶ್ ಅವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇಂದು ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್ ಕಲಾಪ ಇಲ್ಲದ ಕಾರಣ ನ್ಯಾ.ಕೆ.ಎಸ್.ಮುದಗಲ್, ನ್ಯಾ.ಎಂ.ಜಿ.ಎಸ್. ಕಮಲ್ ಅವರ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯಿತು
ಅರ್ಜಿದಾರರ ಪರ ಹಾಜರಾಗಿದ್ದ ದೀಕ್ಷಾ ಅಮೃತೇಶ್ ಅವರು, ಜುಲೈ 15ರಂದು ಪ್ರತಿಭಟನಾಕಾರರು ನೋಟಿಸ್ ನೀಡಿದ್ದಾರೆ. ಆದರೆ ಈಗ ಪ್ರತಿಭಟನೆ ನಡೆಸದಂತೆ ಎಸ್ಮಾ ಜಾರಿಗೊಳಿಸಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.
ಈ ವೇಳೆ ಸರ್ಕಾರದ ಪರ ಹಾಜರಾದ ವಕೀಲೆ, ನಿಲೋಫರ್ ಅಕ್ಬರ್, ಸಿಎಂ ಸಿದ್ದರಾಮಯ್ಯನವರು ಸಾರಿಗೆ ನೌಕರರ ಜೊತೆ ಸಭೆ ನಡೆಸುತ್ತಿದ್ದು ಪ್ರಗತಿಯಲ್ಲಿದೆ ಎಂಬ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದರು.
ವಾದ ಅಲಿಸುವ ವೇಳೆ, ಇದು ಅರ್ಜಿದಾರರ ಪ್ರಾಮಾಣಿಕತೆಗೆ ಸಂಬಂಧಿಸಿದ ವಿಚಾರವಾಗಿದ್ದು ಅವರ ಕಳಕಳಿಯನ್ನ ನೀವು ನೋಡಬೇಕು. ಸರ್ಕಾರ ಇನ್ನೊಬ್ಬರ ಹೆಗಲ ಮೇಲೆ ಇಟ್ಟು ಶೂಟ್ ಮಾಡಬಾರದು ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತು.
ಕೊನೆಗೆ ಇಂದು ಮುಖ್ಯಮಂತ್ರಿಗಳು ಸಭೆ ನಡೆಸುತ್ತಿದ್ದಾರೆ. ಒಂದು ದಿನ ಸಾರಿಗೆ ಮುಷ್ಕರ ಮುಂದೂಡಬಹುದು ಎಂದು ಹೇಳಿ ಬುಧವಾರಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತು.
