ಬೆಂಗಳೂರಿನಲ್ಲಿ ₹50 ಲಕ್ಷ ಸಂಬಳ ₹25 ಲಕ್ಷಕ್ಕೆ ಸಮ: ದುಬಾರಿ ಜೀವನ ವೆಚ್ಚದ ಬಗ್ಗೆ ಟೆಕ್ಕಿಗಳಲ್ಲಿ ಭಾರೀ ಚರ್ಚೆ

ಬೆಂಗಳೂರು;ಬೆಂಗಳೂರು ಭಾರತದ ಐಟಿ ಹಬ್ ಎಂಬುದು ಎಲ್ಲರಿಗೂ ತಿಳಿದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾರ್ಷಿಕ 50 ಲಕ್ಷ ರೂ. ಸಂಬಳವೂ ಈಗ ಕೇವಲ 25 ಲಕ್ಷ ರೂ.ನಂತೆ ಭಾಸವಾಗುತ್ತಿದೆ ಎಂಬ ಪ್ರಶ್ನೆ ಇತ್ತೀಚೆಗೆ ಟೆಕ್ ರಾಜಧಾನಿಯ ಸಂಬಳದ ಬಗ್ಗೆ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಚರ್ಚೆ ಈಗ “ನೀವು ಬೆಂಗಳೂರಿನಲ್ಲಿ 1 ಕೋಟಿ ರೂ.ಗಿಂತ ಹೆಚ್ಚು ಗಳಿಸದಿದ್ದರೆ, ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೊರಡುವುದೇ ಲೇಸು” ಎಂಬ ಮಟ್ಟಿಗೆ ತಲುಪಿದೆ. ಅನೇಕರು 50 ಲಕ್ಷ ಸಂಬಳವೂ ಇಲ್ಲಿ ಸಾಕಾಗುತ್ತಿಲ್ಲ, ಮನೆ ಬಾಡಿಗೆ, ಜೀವನೋಪಾಯ ವೆಚ್ಚ ಮತ್ತು ಉದ್ಯೋಗದ ಒತ್ತಡದಿಂದಾಗಿ ಈಗ 1 ಕೋಟಿ ಸಂಬಳವೇ ಸಾಮಾನ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ, “50 ಲಕ್ಷ ಸಂಬಳ ಬಂದರೂ 25 ಲಕ್ಷದಷ್ಟೇ ಉಪಯೋಗ ಅಲ್ವಾ?” ಎಂಬ ಪ್ರಶ್ನೆಯನ್ನು ಸೌರವ್ ದತ್ತ ಎಂಬವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಅವರು ಬೆಂಗಳೂರಿನ ದುಬಾರಿ ಜೀವನದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ಐಟಿ ಕ್ಷೇತ್ರದಲ್ಲಿ ತುಂಬಾ ಜನ 50 ಲಕ್ಷ ಸಂಬಳ ಪಡೆಯುತ್ತಿದ್ದಾರೆ ಎಂದು ಕೇಳಿದ್ದೇನೆ. ಆದರೆ ಬೆಂಗಳೂರಿನಲ್ಲಿ 50 ಲಕ್ಷ ಎನ್ನುವುದು 25 ಲಕ್ಷಕ್ಕೆ ಸಮವಾಗಿದೆ. ಈ ಅಭಿಪ್ರಾಯವನ್ನು ಯಾರಾದರೂ ಟೆಕ್ಕಿಗಳು ಖಚಿತಪಡಿಸುತ್ತೀರಾ?” ಎಂದು ಅವರು ಪೋಸ್ಟ್ ಮಾಡಿದ್ದಾರೆ.ಈ ಪೋಸ್ಟ್ ಬಹುಬೇಗನೇ ವೈರಲ್ ಆಗಿದ್ದು, ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. “ಬೆಂಗಳೂರು ನಗರದಲ್ಲಿ ಜೀವನ ನಿರ್ವಹಣೆ ತುಂಬಾ ದುಬಾರಿಯಾಗಿದೆ. 50 ಲಕ್ಷ ಸಂಬಳವೂ ಸಾಲದು” ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಹಲವರು ಇದೇ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕೆಲವರು “50 ಲಕ್ಷ ಸಂಬಳ ಯಾವ ಟೆಕ್ಕಿಗೂ ಸಿಗುತ್ತಿಲ್ಲ, ಇದು ಕೆಲವರ ಊಹೆಗೆ ಮಾತ್ರ ಸೀಮಿತ” ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಹೆಚ್ಚಿನವರು “50 ಲಕ್ಷ ಸಂಬಳ ಸಿಗೋದು ನಿಜ” ಎಂದು ಒಪ್ಪಿಕೊಂಡಿದ್ದಾರೆ.ಇನ್ನೊಂದು ಪ್ರಮುಖ ಅಂಶವೆಂದರೆ, ಬೆಂಗಳೂರಿನಲ್ಲಿ ಪ್ರತಿಯೊಂದು ಸೇವೆಯ ಶುಲ್ಕ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದ ಐಟಿ ಉದ್ಯೋಗಿಗಳು ಹೆಚ್ಚಿನ ಸಂಬಳವನ್ನು ಗಳಿಸುತ್ತಿದ್ದರೂ, ಅವರ ಖರ್ಚು ಕೂಡ ಹೆಚ್ಚಾಗಿ, ಹಣ ಉಳಿಸುವ ಸಾಮರ್ಥ್ಯ ಕುಂದುತ್ತಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.