ಗಾಜಾ ಯುದ್ಧ ತಕ್ಷಣ ನಿಲ್ಲಲಿ: 25 ದೇಶಗಳಿಂದ ಇಸ್ರೇಲ್‌ಗೆ ಜಂಟಿ ಆಗ್ರಹ!

ಲಂಡನ್: ಬ್ರಿಟನ್, ಫ್ರಾನ್ಸ್ ಮತ್ತು ಹಲವಾರು ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಇಪ್ಪತ್ತೈದು ದೇಶಗಳು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿ, ಗಾಜಾದಲ್ಲಿನ ಯುದ್ಧ “ಈಗ ಕೊನೆಗೊಳ್ಳಬೇಕು” ಮತ್ತು ಇಸ್ರೇಲ್ ಅಂತರರಾಷ್ಟ್ರೀಯ ಕಾನೂನನ್ನು ಪಾಲಿಸಬೇಕು ಎಂದು ಆಗ್ರಹಿಸಿವೆ.

ಆಸ್ಟ್ರೇಲಿಯಾ, ಕೆನಡಾ ಮತ್ತು ಜಪಾನ್ ಸೇರಿದಂತೆ ದೇಶಗಳ ವಿದೇಶಾಂಗ ಸಚಿವರು “ಗಾಜಾದಲ್ಲಿ ನಾಗರಿಕರ ನೋವು ತೀವ್ರವಾಗತೊಡಗಿವೆ” ಎಂದು ಹೇಳಿದ್ದಾರೆ.”ಗಾಜಾಗೆ ನೀಡಲಾಗುತ್ತಿರುವ ನೆರವಿಗೆ ಕೊಕ್ಕೆ ಹಾಕುತ್ತಿರುವುದು ಮತ್ತು ಆಹಾರದ ಮೂಲಭೂತ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸುತ್ತಿರುವ ಮಕ್ಕಳು ಸೇರಿದಂತೆ ನಾಗರಿಕರ ಅಮಾನವೀಯ ಹತ್ಯೆ ಖಂಡನೀಯ, “ಇಸ್ರೇಲ್ ಸರ್ಕಾರದ ನೆರವು ವಿತರಣಾ ಮಾದರಿ ಅಪಾಯಕಾರಿಯಾಗಿದ್ದು, ಅಸ್ಥಿರತೆಯನ್ನು ಹೆಚ್ಚಿಸುತ್ತದೆ ಮತ್ತು ಗಾಜಾ ನಿವಾಸಿಗಳ ಮಾನವ ಘನತೆಯನ್ನು ಕಸಿದುಕೊಳ್ಳುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಾಗರಿಕ ಜನಸಂಖ್ಯೆಗೆ ಅಗತ್ಯ ಮಾನವೀಯ ಸಹಾಯವನ್ನು ಇಸ್ರೇಲ್ ಸರ್ಕಾರ ನಿರಾಕರಿಸುವುದು ಸ್ವೀಕಾರಾರ್ಹವಲ್ಲ. ಇಸ್ರೇಲ್ ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ತನ್ನ ಬಾಧ್ಯತೆಗಳನ್ನು ಪಾಲಿಸಬೇಕು” ಎಂದು ಅದು ಹೇಳಿದೆ.
ಸಹಿ ಮಾಡಿದವರಲ್ಲಿ ಸುಮಾರು 20 ಯುರೋಪಿಯನ್ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳು ಹಾಗೂ ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಮತ್ತು ಸಮಾನತೆ, ಸನ್ನದ್ಧತೆ ಮತ್ತು ಬಿಕ್ಕಟ್ಟು ನಿರ್ವಹಣೆಗಾಗಿ EU ಆಯುಕ್ತರು ಸೇರಿದ್ದಾರೆ. ಅಮೆರಿಕ ಮತ್ತು ಜರ್ಮನಿ ಹೇಳಿಕೆಗೆ ಸಹಿ ಹಾಕಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಸಹಿ ಹಾಕಿದ ಸದಸ್ಯರು ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ್ದು ಈ ಪ್ರದೇಶದಲ್ಲಿ ಶಾಂತಿಗೆ ರಾಜಕೀಯ ಮಾರ್ಗವನ್ನು ಬೆಂಬಲಿಸಲು ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
