“ರಾಣಿ ಇರುವೆಗಳ” ಅಕ್ರಮ ಸಾಗಣೆ: ನಾಲ್ವರಿಗೆ ಕೀನ್ಯಾದಲ್ಲಿ ಭಾರಿ ದಂಡ

ಕೀನ್ಯಾ :ಕೀನ್ಯಾದಲ್ಲಿ ವನ್ಯಜೀವಿ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ನಾಲ್ವರಿಗೆ $7,700 ದಂಡ ವಿಧಿಸಲಾಗಿದೆ. ಆನೆ ದಂತಗಳು ಮತ್ತು ಖಡ್ಗಮೃಗದ ಕೊಂಬುಗಳ ಕಳ್ಳಸಾಗಣೆ ಮಾಡಿರಬಹುದು ಎಂದು ನೀವು ಊಹೆ ಮಾಡಿದ್ರೆ ಖಂಡಿತ ಅದು ತಪ್ಪು.

ಇವರು ಇರುವೆಗಳ ಕಳ್ಳ ಸಾಗಣಿಕೆಯಲ್ಲಿ ತೊಡಗಿಕೊಂಡಿದ್ದರು.
ಕೀನ್ಯಾದ ಅಧಿಕಾರಿಗಳು ಏಪ್ರಿಲ್ 5 ರಂದು ದಾಳಿ ನಡೆಸಿ ಇಬ್ಬರು ಬೆಲ್ಜಿಯಂ ಹದಿಹರೆಯದವರು, ಒಬ್ಬ ವಿಯೆಟ್ನಾಂ ಪ್ರಜೆ ಮತ್ತು ಒಬ್ಬ ಸ್ಥಳೀಯನನ್ನು ಬಂಧಿಸಿದರು. ಅವರಿಂದ ಕಳ್ಳಸಾಗಣೆ ಮಾಡುತ್ತಿದ್ದ 5,440 ದೈತ್ಯ ಆಫ್ರಿಕನ್ ಹಾರ್ವೆಸ್ಟರ್ ರಾಣಿ ಇರುವೆಗಳನ್ನು ವಶಪಡಿಸಿಕೊಳ್ಳಲಾಯಿತು.
ನಿಜಕ್ಕೂ ಈ ರಾಣಿ ಇರುವೆಗಳ ಬೆಲೆ ತುಂಬಾ ಹೆಚ್ಚಾಗಿದ್ದು, ಅದನ್ನು ಕೇಳಿದರೆ ನೀವು ಆಘಾತಕ್ಕೊಳಗಾಗುತ್ತೀರಿ. ಏಷ್ಯಾ, ಉತ್ತರ ಅಮೆರಿಕಾ ಮತ್ತು ಯುರೋಪ್‌ನ ಆನ್‌ಲೈನ್ ಮಾರುಕಟ್ಟೆಯಲ್ಲಿ ಈ ಇರುವೆಗಳ ಬೆಲೆ 8,00,000 ಯುರೋಗಳು (ಭಾರತೀಯ ಕರೆನ್ಸಿಯಲ್ಲಿ 7 ಕೋಟಿ 66 ಲಕ್ಷ ರೂ.ಗಳಿಗಿಂತ ಹೆಚ್ಚು). ಎನ್ನಲಾಗಿದೆ.
ಪರಿಸರಕ್ಕೆ ಅಮೂಲ್ಯವಾದ ಸಣ್ಣ ಇರುವೆಗಳನ್ನು ( ಆಂಟ್ ಸ್ಮಗ್ಲಿಂಗ್ ) ಕಳ್ಳಸಾಗಣೆ ಮಾಡಲು ಪ್ರಾರಂಭಿಸಿದ್ದಾರೆ ಎನ್ನುವ ಪ್ರಕರಣದಲ್ಲಿ, ಕೀನ್ಯಾದ ನ್ಯಾಯಾಲಯವು ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ನಾಲ್ವರು ಜನರನ್ನು ಸಾವಿರಾರು ಇರುವೆಗಳನ್ನು ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಿ, ಅವರಿಗೆ 7,700 ಡಾಲರ್ (ರೂ. 6.5 ಲಕ್ಷಕ್ಕೂ ಹೆಚ್ಚು) ಭಾರಿ ದಂಡ ವಿಧಿಸಿತು. ಅಪ್ರಾಪ್ತ ವಯಸ್ಕರು ದಂಡ ಪಾವತಿಸದಿದ್ದರೆ, ಅವರನ್ನು 12 ತಿಂಗಳು ಜೈಲಿಗೆ ಕಳುಹಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ತಮ್ಮನ್ನು ಇರುವೆ ಪ್ರಿಯರು ಎಂದು ಬಣ್ಣಿಸಿಕೊಳ್ಳುವ ಬೆಲ್ಜಿಯಂನ ಹದಿಹರೆಯದವರಾದ ಲೋರ್ನಾಯ್ ಡೇವಿಡ್ ಮತ್ತು ಸೆಪ್ಪೆ ಲೋಡೆವಿಕ್ಸ್, ತಾವು ಇದನ್ನೆಲ್ಲಾ ಅಜ್ಞಾನದಿಂದ ಮಾಡಿದ್ದೇವೆ ಎಂದು ನ್ಯಾಯಾಲಯದಲ್ಲಿ ಹೇಳಿಕೊಂಡರು. ಆದರೆ ಅಧಿಕಾರಿಗಳು ಲೋರ್ನಾಯ್ ಅವರ ಫೋನ್‌ನಲ್ಲಿ ಅವರ ಸುಳ್ಳನ್ನು ಬಹಿರಂಗಪಡಿಸಿದರು. 2,500 ರಾಣಿ ಇರುವೆಗಳನ್ನು 200 ಡಾಲರ್‌ಗಳಿಗೆ (ಸುಮಾರು 17 ಸಾವಿರ ರೂಪಾಯಿ) ಖರೀದಿಸಿದ್ದರು. ಇರುವೆಗಳನ್ನು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಾಕುವುದು ಹವ್ಯಾಸವಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ರಾಣಿ ಇರುವೆಗಳು ಏಕೆ ಇಷ್ಟೊಂದು ಬೆಲೆಬಾಳುವವು?
ಮೊಟ್ಟೆ ಇಡಬಲ್ಲ ಏಕೈಕ ಇರುವೆ ಇದು. ಮೊಟ್ಟೆಗಳನ್ನು ಇಡುವ ಸಾಮರ್ಥ್ಯವಿರುವ ಏಕೈಕ ಇರುವೆಗಳಾಗಿರುವುದರಿಂದ ಅವುಗಳನ್ನು ಮೌಲ್ಯಯುತವೆಂದು ಪರಿಗಣಿಸಲಾಗುತ್ತದೆ. ಇವುಗಳ ಕಳ್ಳಸಾಗಣೆ ಕೀನ್ಯಾದ ವನ್ಯಜೀವಿ ಪರಿಸರ ವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ. ಮಣ್ಣಿನ ಆರೋಗ್ಯ ಮತ್ತು ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಮೆಸ್ಸರ್ ಸೆಫಲೋಟೇಸ್ ಇರುವೆಗಳು ನಿರ್ಣಾಯಕ ಪ್ರಭೇದಗಳಾಗಿವೆ ಎಂದು ಕೀನ್ಯಾ ವನ್ಯಜೀವಿ ಸೇವೆ ತಿಳಿಸಿದೆ.
ಕೀನ್ಯಾ ತನ್ನ ಜೀವವೈವಿಧ್ಯದ ಲೂಟಿಯನ್ನು ಸಹಿಸುವುದಿಲ್ಲ. ಅದು ಇರುವೆಯಾಗಿರಲಿ ಅಥವಾ ಆನೆಯಾಗಿರಲಿ, ನಾವು ಕಳ್ಳಸಾಗಣೆದಾರರನ್ನು ಪಟ್ಟುಬಿಡದೆ ಬೆನ್ನಟ್ಟುತ್ತೇವೆ ಎಂದು ಕೆಡಬ್ಲ್ಯೂಎಸ್ ಮಹಾನಿರ್ದೇಶಕ ಎರುಸ್ಟಸ್ ಕಂಗಾ ಹೇಳಿದರು
