ಅಕ್ರಮ ದೇವಸ್ಥಾನ ನೆಲಸಮ, ಬಯಲಾಯ್ತು ಸ್ವಿಮ್ಮಿಂಗ್ ಪೂಲ್, ಬಾತ್ ಟಬ್ ಒಳಗೊಂಡ ಐಷಾರಾಮಿ ಕೊಠಡಿಗಳು!

ಜಾಮ್ನಗರ (ಗುಜರಾತ್): ಕಳೆದ ವಾರಾಂತ್ಯದಲ್ಲಿ ಗುಜರಾತ್ನ ಜಾಮ್ನಗರದ ಜಿಲ್ಲಾಡಳಿತ ನೆಲಸಮಗೊಳಿಸಿದ್ದ ಅಕ್ರಮವಾಗಿ ನಿರ್ಮಿಸಲಾಗಿದ್ದ ದೇವಸ್ಥಾನವಿದ್ದ ಸ್ಥಳದಲ್ಲಿ ಒಂದು ಈಜು ಕೊಳ, ಒಂದು ಅತ್ಯಾಧುನಿಕ ಬಾತ್ ಟಬ್ ಹಾಗೂ ಅಮೃತಶಿಲೆಯ ನೆಲಹಾಸು ಹೊಂದಿರುವ ಕೊಠಡಿ ಇದ್ದದ್ದು ಬೆಳಕಿಗೆ ಬಂದಿದೆ
ಈ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದ್ದ ಈ ಅಕ್ರಮವಾಗಿ ದೇವಸ್ಥಾನವಿದ್ದ ಸ್ಥಳದಲ್ಲಿ ಮತ್ತಷ್ಟು ಅಕ್ರಮ ಕಟ್ಟಡಗಳೂ ಕಂಡು ಬಂದಿದ್ದು, ಈ ಅಕ್ರಮ ನಿರ್ಮಾಣಗಳಿಂದಾಗಿ ನಾಗ್ಮತಿ ನದಿ ಹರಿವಿಗೆ ತೊಡಕಾಗುತ್ತಿದ್ದುದರಿಂದ, ಭಾರಿ ಪ್ರಮಾಣದ ನೆಲಸಮ ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು.
ಜಾಮ್ನಗರ ಪೊಲೀಸರ ಪ್ರಕಾರ, ಸುಮಾರು 11,000 ಚದರ ಅಡಿಗಳಷ್ಟು ವಿಸ್ತಾರವಾಗಿ ಹರಡಿಕೊಂಡಿದ್ದ ಈ ಅಕ್ರಮ ದೇವಸ್ಥಾನವಿದ್ದ ಸ್ಥಳವು ಒಂದು ತೋಟ, ಒಂದು ಈಜು ಕೊಳ ಹಾಗೂ ಹಲವು ವೈಭವೋಪೇತವಾಗಿ ಅಲಂಕೃತಗೊಂಡಿದ್ದ ಕೊಠಡಿಗಳನ್ನು ಹೊಂದಿದ್ದವು ಎನ್ನಲಾಗಿದೆ.
ಈ ಕೊಠಡಿಗಳ ಪೈಕಿ, ಬಾತ್ ಟಬ್ ಹೊಂದಿದ್ದ ಮತ್ತೊಂದು ಪ್ರತ್ಯೇಕ ಕೊಠಡಿಗೆ ಹೊರಗಿನವರಿಗೆ ಪ್ರವೇಶವಿಲ್ಲ ಎಂಬ ಚೀಟಿಯನ್ನೂ ಅಂಟಿಸಲಾಗಿತ್ತು. ಇದು ಸಂಶಯಕ್ಕೆ ಕಾರಣವಾಗಿತ್ತು. ಕುತೂಹಲಕರ ಸಂಗತಿಯೆಂದರೆ, ಮತ್ತೊಂದು ನಾಮಫಲಕದಲ್ಲಿ ಯಾವುದೇ ದೇಣಿಗೆಯನ್ನು ಸ್ವೀಕರಿಸಲಾಗುವುದಿಲ್ಲ ಎಂದೂ ಬರೆಯಲಾಗಿತ್ತು. ಇದರಿಂದಾಗಿ, ಈ ಐಷಾರಾಮಿ ನಿರ್ಮಾಣಕ್ಕೆ ಹಣ ಎಲ್ಲಿಂದ ಬಂತು ಎಂದು ಕುರಿತು ಸ್ವತಃ ಅಧಿಕಾರಿಗಳೇ ಗೊಂದಲಗೊಂಡಿದ್ದಾರೆ ಎಂದು India Today ವರದಿ ಮಾಡಿದೆ.
ಮಳೆಗಾಲದಲ್ಲಿ ನದಿಯ ಹಾದಿಗೆ ಅಡ್ಡಿಯಾಗುವ ಮೂಲಕ ಅಕ್ರಮ ಕಟ್ಟಡವು ತೀವ್ರ ಪ್ರವಾಹಕ್ಕೆ ಕಾರಣವಾಗಿದ್ದವು ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರೇಮ್ ಸುಖ್ ದೇಲು ಹೇಳಿದ್ದಾರೆ. “ಅಕ್ರಮವಾಗಿ ದೇವಸ್ಥಾನವಿದ್ದ ಸ್ಥಳವನ್ನು 11,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿತ್ತು. ಇದು ನದಿಯ ಹರಿವಿನ ಮೇಲೆ ಪರಿಣಾಮ ಬೀರಿದೆ. ಈ ಪ್ರಕರಣವು ಪೊಲೀಸರ ಗಮನಕ್ಕೆ ಬಂದಾಗ, ದೇವಸ್ಥಾನ ಮತ್ತು ಇತರ ಅಕ್ರಮ ಕಟ್ಟಡಗಳನ್ನು ಕೆಡವಲಾಗಿದೆ. ದೇವಸ್ಥಾನವಿದ್ದ ಸ್ಥಳದಲ್ಲಿ ಒಂದು ಫಾರ್ಮ್ ಹೌಸ್, ಈಜುಕೊಳ, ಬಾತ್ ಟಬ್ ಮತ್ತು ವಿಶಾಲವಾದ ಕೊಠಡಿಗಳು ಕಂಡುಬಂದಿವೆ” ಎಂದು ಅವರು ಹೇಳಿದ್ದಾರೆ.
ಪೊಲೀಸ್ ಕಣ್ಗಾವಲಿನಲ್ಲಿ ನಡೆಸಲಾದ ಅಕ್ರಮ ಕಟ್ಟಡ ಕೆಡಹುವ ಕಾರ್ಯಾಚರಣೆಯಲ್ಲಿ 12 ಜೆಸಿಬಿಗಳು, ಮೂರು ಹಿಟಾಚಿ ಯಂತ್ರಗಳು ಮತ್ತು 13 ಟ್ರ್ಯಾಕ್ಟರ್ಗಳು, ಸುಮಾರು 100 ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಈ ಅಕ್ರಮ ಕಟ್ಟದ ಹೊಂದಿದ್ದ ಧಾರ್ಮಿಕ ಸ್ಥಳದ ಭೂಮಿಯ ಅಂದಾಜು ಮೌಲ್ಯ ಸುಮಾರು 200 ಕೋಟಿ ರೂ. ಎಂದು ಮೂಲಗಳು ಬಹಿರಂಗಪಡಿಸಿವೆ ಎಂದು NDTV ವರದಿ ಮಾಡಿದೆ.