ಕಲಾದಗಿಯಲ್ಲಿ ಅಕ್ರಮ ಮದ್ಯ ಸಾಗಾಟ: ಅಬಕಾರಿ ಇಲಾಖೆ ದಾಳಿ!

ಕಲಾದಗಿ: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಕಾರಿನ ಮೇಲೆ ಖಜ್ಜಿಡೋಣಿ ಬಳಿ ಅಬಕಾರಿ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ, 86 ಬಾಟಲ್ ಮದ್ಯ, ಕಾರು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ ಘಟನೆ ಜ.17ರ ಶನಿವಾರ ನಡೆದಿದೆ.


ಶನಿವಾರ ಬೆಳಗಿನ ಜಾವ ಖಜ್ಜಿಡೋಣಿ ಗ್ರಾಮದ ಶಾಲೆಯ ಎದುರುಗಡೆ ರಸ್ತೆಯಲ್ಲಿ ಅಬಕಾರಿ ಇಲಾಖೆಯ ಅಧಿಕ್ಷಕ ಹಣಮಂತ ಭಜಂತ್ರಿ ಅವರ ನೇತೃತ್ವದಲ್ಲಿ ಜಿಲ್ಲಾ ವಿಚಕ್ಷಣಧಳದ ಅಬಕಾರಿ ನೀರಿಕ್ಷಕರಾದ ಅಜಯ್ ಉಮದಿ, ಅರುಣ ಜೇವರಗಿ ಹಾಗೂ ಉಪ ನೀರಿಕ್ಷಕರಾದ ಮಹಾದೇವ ನಾಯಕ ಮತ್ತು ಸಿಬ್ಬಂದಿಗಳಾದ ಮಹಾಂತಪ್ಪ ಸುಳಿಭಾವಿ, ನಾಗರಾಜ ತಳವಾರ ಹಾಗೂ ಗೃಹ ರಕ್ಷಕ ಸಿಬ್ಬಂದಿಗಳೊಂದಿಗಿನ ತಂಡ ಕಾರಿನ ಮೇಲೆ ದಾಳಿ ಮಾಡಿದೆ.

ಫಾರ್ ಡಿಫೆನ್ಸ್ ಪರ್ಪಸ್ ಒನ್ಲಿ ಎಂದು ನಮೂದು ಮಾಡಿರುವ, ಬ್ಲಾಕ್ ಯಂಡ್ ವೈಟ್ ವಿಸ್ಕಿ, 100 ಪೆಪ್ಪರ್ ವಿಸ್ಕಿ, ಬ್ಲೆಂಡರ್ಸ ಪ್ರೈಡ್ ವಿಸ್ಕಿಯ ಒಟ್ಟು 86 ಮದ್ಯದ ಬಾಟಲ್ ಗಳನ್ನು ವಶಪಡಿಸಿಕೊಂಡು ಬಸವನ ಬಾಗೇವಾಡಿಯ ಆರೋಪಿ ಸಿದ್ದಣ್ಣ ಶಿವಪ್ಪ ಕುಂಬಾರ ಎಂಬಾತನನ್ನು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.