ಅಕ್ರಮ ಗೋವು ಸಾಗಾಟ ಪ್ರಕರಣ; ಎಫ್‌ಐಆರ್ ದಾಖಲಿಸದ ಹುಕ್ಕೇರಿ ಪಿಎಸ್‌ಐ ಅಮಾನತು!

ಬೆಳಗಾವಿ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡಿದವರ ವಿರುದ್ಧ ಎಫ್ಐಆರ್ (FIR) ದಾಖಲಿಸದೆ ಬಿಟ್ಟು ಕಳುಹಿಸಿದ್ದಕ್ಕೆ ಹುಕ್ಕೇರಿ ಪೊಲೀಸ್ ಠಾಣೆ (Hukkeri Police Station) ಪಿಎಸ್ಐ ನಿಖಿಲ್ ಕಾಂಬ್ಳೆ ಅವರನ್ನು ಅಮಾನತುಗೊಳಿಸಿ ಎಸ್ಪಿ ಭೀಮಾಶಂಕರ ಗುಳೇದ್ ಆದೇಶ ಹೊರಡಿಸಿದ್ದಾರೆ.

ಶ್ರೀರಾಮಸೇನೆ ಕಾರ್ಯಕರ್ತರು ಜೂನ್ 26ರಂದು ಗೋವು ಸಾಗಿಸುತ್ತಿದ್ದ ವಾಹನ ಹಿಡಿದು ಠಾಣೆಗೆ ತಂದಿದ್ದರು.
ಈ ವೇಳೆ ಪಿಎಸ್ಐ ನಿಖಿಲ್ ಕಾಂಬ್ಳೆ ಅಕ್ರಮವಾಗಿ ಗೋವು ಸಾಗಣೆ ಸಂಬಂಧ ಕೇಸ್ ದಾಖಲಿಸದೆ ಬಿಟ್ಟು ಕಳುಹಿಸಿದ್ದರು. ಅಲ್ಲದೆ, ಮೇಲಧಿಕಾರಿಗಳ ಗಮನಕ್ಕೂ ತಂದಿರಲಿಲ್ಲ. ಪೊಲೀಸ್ ಠಾಣೆಗೆ ಬಂದ ಶ್ರೀರಾಮಸೇನೆ ಕಾರ್ಯಕರ್ತರಲ್ಲಿ ಗಡಿಪಾರಾದ ರೌಡಿಶೀಟರ್ ಮಹಾವೀರ ಸೊಲ್ಲಾಪುರೆ ಕೂಡ ಇದ್ದನು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪಿಎಸ್‌ಐ ನಿಖಿಲ್ ಕಾಂಬ್ಳೆ ಅವರನ್ನು ಅಮಾನತುಗೊಳಿಸಲಾಗಿದೆ.
ಇಂಗಳಿಗಿ ಚಲೋ ಕರೆ ಕೊಟ್ಟ ಶ್ರೀರಾಮಸೇನೆ
ಇಂಗಳಿ ಗ್ರಾಮದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಇಂಗಳಿಗೆ ಚಲೋ ಕರೆ ಕೊಟ್ಟಿದ್ದಾರೆ. ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 3-4 ದಿನದ ಹಿಂದೆ ಇಂಗಳಿ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಸುಳ್ಳಿನ ಕಂತೆಯನ್ನ ಸೃಷ್ಟಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಕ್ಕೇರಿ ಪೊಲೀಸರಿಗೆ 30 ಸಾವಿರ ರೂ. ಕೊಟ್ಟು ಆಕಳು ಬಿಡಿಸಿಕೊಂಡು ಬಂದಿದ್ದೇವೆ ಅಂತ ಮಹಿಳೆ ಹೇಳಿದ್ದಾರೆ. ಆಕಳು ಚೆನ್ನಾಗಿದ್ದರೇ ಗೋ ಶಾಲೆಗೆ ಆಕಳನ್ನು ಏಕೆ ಕಳುಹಿಸಿದ್ರಿ? ನಮ್ಮ ಕಾರ್ಯಕರ್ತರು ಮಹಿಳೆಯರನ್ನು ಎಳೆದಾಡಿದರು ಅಂತ ಎಸ್ಪಿ ಹೇಳುತ್ತಾರೆ. ಕಾರ್ಯಕರ್ತರು ಮನೆಯೊಳಗೆ ಬಂದಿಲ್ಲ ಅಂತ ಮಹಿಳೆ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ನಮ್ಮ ಕಾರ್ಯಕರ್ತನಿಗೆ ರೌಡಿ ಶೀಟರ್ ಅಂತೀರಿ. ಗಡಿ ಪಾರಾದವರು ನಿಮ್ಮ ಪೊಲೀಸ್ ಠಾಣೆಗೆ ಬಂದಾಗ ನೀವು ಏಕೆ ಬಂಧಿಸಲಿಲ್ಲ. ನಮ್ಮ ಕಾರ್ಯಕರ್ತರು ಪೊಲೀಸರಿಗೆ ಯಾವ ಪತ್ರವನ್ನು ಬರೆದುಕೊಟ್ಟಿಲ್ಲ. ಜುಲೈ 3ರಂದು ಇಂಗಳಿ ಚಲೋ ಕರೆ ಕೊಟ್ಟಿದ್ದೇವೆ. ಎಂಎಲ್ಸಿ ಸಿಟಿ ರವಿ ಸೇರಿದಂತೆ ವಿವಿಧ ಮಠಾಧೀಶರು ಬರುತ್ತಾರೆ. ಆರೋಪಿಗಳು ಮುಸ್ಲಿಮರಾಗಿದ್ದರೇ ನೀವು ಬಂಧಿಸಲ್ಲ ಎಂದು ವಾಗ್ದಾಳಿ ಮಾಡಿದರು.
ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸದಿದ್ದರೇ ಹೋರಾಟ ಮಾಡುತ್ತೇವೆ. ನಮ್ಮ ಕಾರ್ಯಕರ್ತರನ್ನು ಹೊಡೆಯುವಾಗ ಗ್ರಾಮದ ಮುಖಂಡರು ಎಲ್ಲಿದ್ದರು? ಊರಿಗೆ ಬರಬೇಡಿ ಅಂತ ಹೇಳಲು ಇವರು ಯಾರು? ಈ ಸರ್ಕಾರದಲ್ಲಿ ಹಿಂದು ಮುಖಂಡರು, ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.
