ಐಐಎಸ್ಸಿ ಮಹಿಳಾ ವಿಜ್ಞಾನಿಗೆ ‘ಡಿಜಿಟಲ್ ಅರೆಸ್ಟ್’ ಬೆದರಿಕೆ: ₹8.8 ಲಕ್ಷ ವಂಚನೆ, ವಂಚಕರ ಕೈಚಳಕ ಹೀಗಿದೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಯ ಜಾಲ ಹೆಚ್ಚುತ್ತಲೇ ಇದೆ. ಪ್ರಖ್ಯಾತ ನಟರು, ಶ್ರೀಮಂತರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುವ ಈ ವಂಚಕರು ಈಗ ಜನ ಸಾಮಾನ್ಯರನ್ನೂ ಬಿಡುತ್ತಿಲ್ಲ. ಹೀಗೆಯೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಐಐಎಸ್ಸಿಯ ನ್ಯೂ ಹೌಸಿಂಗ್ ಕಾಲೋನಿ ನಿವಾಸಿ ಮಹಿಳಾ ವಿಜ್ಞಾನಿ ಡಾ.ಸಂಧ್ಯಾ ಡಿಜಿಟಲ್ ಅರೆಸ್ಟ್ ಒಳಗಾಗಿದ್ದಾರೆ.ಸೈಬರ್ ವಂಚಕರು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಮಾನವ ಕಳ್ಳ ಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ ಎಂದು ಬೆದರಿಕೆ ಹಾಕಿದ್ದು, ಜೊತೆಗೆ ಬರೋಬ್ಬರಿ 8.8 ಲಕ್ಷ ರೂ. ದೋಚಿದ್ದಾರೆ.

ಮಹಿಳಾ ವಿಜ್ಞಾನಿ ಮೋಸ ಹೋಗಿದ್ದೇಗೆ?
ಸೆ.16ರಂದು ಸಂಧ್ಯಾ ಅವರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ‘ನಿಮ್ಮ ಮೊಬೈಲ್ ನಂಬರ್ ಬೇರೆ ಕಡೆಗಳಲ್ಲಿ ಬಳಸಲಾಗುತ್ತಿದೆ’ ಎಂದಿದ್ದಾನೆ. ಕೆಲ ಹೊತ್ತಿನ ಬಳಿಕ ಮತ್ತೊಂದು ನಂಬರ್ನಿಂದ ಸಂಧ್ಯಾ ಹೆಸರಿನಲ್ಲಿ 17 ಪ್ರಕರಣಗಳು ದಾಖಲಾಗಿವೆ ಎಂದು ಮೆಸೇಜ್ ಮಾಡಿದ್ದಾನೆ. ಅಷ್ಟೇ ಅಲ್ಲದೇ ‘ಈ ಪ್ರಕರಣದ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ನಿಮ್ಮ ಬಳಿ ಮಾತನಾಡುತ್ತಾರೆ’ ಎಂದು ಇನ್ನೋರ್ವ ಕರೆ ಮಾಡಿದ್ದಾನೆ. ‘ನೀವು ಮಾನವ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ, ಸುಪ್ರೀಂ ಕೋರ್ಟ್ ಕೆಲ ದಾಖಲೆಗಳನ್ನು ತೋರಿಸಿ, ನಿಮ್ಮನ್ನು ಸಿಬಿಐ ಅಧಿಕಾರಿಗಳು ಅರೆಸ್ಟ್ ಮಾಡುತ್ತಾರೆ’ ಎಂದು ಬೆದರಿಕೆ ಹಾಕಿದ್ದಾನೆ.
ಅದಕ್ಕೆ ಗಾಬರಿಗೊಂಡ ಸಂಧ್ಯಾ , ಆ ರೀತಿ ಯಾವುದೇ ಅಕ್ರಮ ಕೆಲಸದಲ್ಲಿ ತಾನು ತೊಡಗಿಲ್ಲ ಎಂದಿದ್ದಾರೆ. ಆದರೂ ಪ್ರಕರಣದಿಂದ ಪಾರಾಗಬೇಕಾದರೆ ಅವರು ಸೂಚಿಸಿದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬೇಕೆಂದು ಹೆದರಿಸಿದ್ದಾರೆ. 8.8 ಲಕ್ಷ ರೂ.ಗಳನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ. ವಿಜ್ಞಾನಿ ಸಂಧ್ಯಾ ದೂರಿನ ಮೇರೆಗೆ ಕೇಂದ್ರ ವಿಭಾಗದ CEN ಠಾಣೆಯಲ್ಲಿ FIR ದಾಖಲಾಗಿದೆ.
