ಭಾರತ–ಪಾಕ್ ನಡುವೆ ಮತ್ತೆ ಯುದ್ಧ ಸಂಭವಿಸಿದರೆ, ಸೌದಿ ಅರೇಬಿಯಾ ಪಾಕಿಸ್ತಾನದ ಬೆನ್ನಿಗೆ ನಿಲ್ಲಲಿದೆ

ನವದೆಹಲಿ: ಆಪರೇಷನ್ ಸಿಂದೂರ್ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಯುದ್ಧದ ವಾತಾವರಣ ತುಸು ತಣ್ಣಗಾಗಿದ್ದರೂ ಉಭಯ ದೇಶಗಳ ನಡುವಣ ಸಮಸ್ಯೆಗಳು ಬಗೆಹರಿದಿಲ್ಲ. ಇದೇ ಸಂದರ್ಭದಲ್ಲಿ, ಭಾರತದೊಂದಿಗೆ ಅತಿದೊಡ್ಡ ಪಾಲುದಾರಿಕೆ ಹೊಂದಿರುವ ಸೌದಿ ಅರೇಬಿಯಾ ಜತೆ ಪಾಕಿಸ್ತಾನ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ. ಸೌದಿ ಅರೇಬಿಯಾ ಜತೆ ಭಾರತದ ಬಾಂಧವ್ಯ, ವ್ಯಾಪಾರ-ವಹಿವಾಟು ಚೆನ್ನಾಗಿದೆ. ಇಂಥ ಪರಿಸ್ಥಿತಿಯಲ್ಲಿ ಒಂದು ವೇಳೆ ಮತ್ತೆ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧ ಸಂಭವಿಸಿದರೆ ಸೌದಿ ಅರೇಬಿಯಾ ಯಾರ ಪರ ನಿಲ್ಲಲಿದೆ ಎಂಬ ಪ್ರಶ್ನೆಗೆ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್ (khawaja Asif) ಏನು ಹೇಳಿದ್ದಾರೆ ಗೊತ್ತೇ!? ‘ಖಂಡಿತವಾಗಿಯೂ ನಮ್ಮ ಬೆಂಬಲಕ್ಕೆ ಬರಲಿದೆ’ ಎಂದಿದ್ದಾರೆ.

ಏನಿದು ಪಾಕಿಸ್ತಾನ – ಸೌದಿ ಅರೇಬಿಯಾ ನಡುವಣ ಒಪ್ಪಂದ?
ಪರಸ್ಪರ ರಕ್ಷಣಾ ಕಾರ್ಯತಂತ್ರ ಒಪ್ಪಂದಕ್ಕೆ ಸೌದಿ ಅರೇಬಿಯ ಮತ್ತು ಪಾಕಿಸ್ತಾನ ಬುಧವಾರ ಸಹಿ ಹಾಕಿದ್ದವು. ಈ ವಿಚಾರವಾಗಿ ಇಸ್ಲಾಮಬಾದ್ನಲ್ಲಿ ಶುಕ್ರವಾರ ಪಾಕ್ ರಕ್ಷಣಾ ಸಚಿವ ಮಾತನಾಡಿದ್ದು, ಇದೊಂದು ನ್ಯಾಟೋ ಮಾದರಿಯ ಒಪ್ಪಂದ. ಈ ಒಪ್ಪಂದದಲ್ಲಿ ಇನ್ನಷ್ಟು ಅರಬ್ ದೇಶಗಳು ಸೇರ್ಪಡೆಯಾಗುವ ಸಾಧ್ಯತೆಯ ಬಾಗಿಲು ಮುಚ್ಚಿಲ್ಲ ಎಂದಿದ್ದಾರೆ.
ಮುಸ್ಲಿಂ ದೇಶಗಳ ರಕ್ಷಣೆಗೆ ಒಪ್ಪಂದ ಎಂದ ಪಾಕ್ ಸಚಿವ
ಇದು ಆಕ್ರಮಣಕಾರಿ ಒಪ್ಪಂದವಲ್ಲ. ಬದಲಿಗೆ ನ್ಯಾಟೋ ಮಾದರಿಯ ರಕ್ಷಣಾತ್ಮಕ ಒಪ್ಪಂದ. ವಿಶೇಷವಾಗಿ, ಮುಸ್ಲಿಂ ದೇಶಗಳಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಒಟ್ಟಾಗಿ ಹೋರಾಟ ಮಾಡಲು ಇಂತಹ ಒಪ್ಪಂದದ ಅಗತ್ಯವಿದೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಪ್ರತಿಪಾದಿಸಿದ್ದಾರೆ.
ಇದೇ ವೇಳೆ, ಮತ್ತೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಸಂಭವಿಸಿದರೆ ಸೌದಿ ಅರೇಬಿಯಾ ನಿಮ್ಮ ಪರ ನಿಲ್ಲಲಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಖಂಡಿತವಾಗಿಯೂ’ ಎಂದು ಹೇಳಿದ್ದಾರೆ.
ಸೌದಿ ಒಪ್ಪಂದದ ಕುರಿತು ಭಾರತದ ಪ್ರತಿಕ್ರಿಯೆ ಏನು?
ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಣ ಒಪ್ಪಂದದ ಬಗ್ಗೆ ಭಾರತ ಕೂಡ ಪ್ರತಿಕ್ರಿಯಿಸಿದೆ. ಸೌದಿ ಅರೇಬಿಯಾದೊಂದಿಗೆ ಭಾರತ ಅನೇಕ ವ್ಯವಹಾರ ಪಾಲುದಾರಿಕೆ ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವಣ ವ್ಯವಹಾರ ಗಮನಾರ್ಹವಾಗಿ ಪ್ರಗತಿಯಾಗಿದೆ. ಉಭಯ ದೇಶಗಳ ಹಿತಾಸಕ್ತಿ ಮತ್ತು ಬಾಂಧವ್ಯ ಕುರಿತ ಸೂಕ್ಷ್ಮ ವಿಚಾರಗಳನ್ನು ಸೌದಿ ಅರೇಬಿಯಾ ಗಮನದಲ್ಲಿ ಇಟ್ಟುಕೊಳ್ಳುತ್ತದೆ ಎಂಬ ಭರವಸೆ ಇದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಚೈಸ್ವಾಲ್ ಪ್ರತಿಕ್ರಿಯಿಸಿದ್ದಾರೆ.
