2.7 ಡಿಗ್ರಿ ತಾಪಮಾನ ಏರಿಕೆಯಾದರೆ ಕೇವಲ ಶೇ.25ರಷ್ಟು ಹಿಮವೇ ಉಳಿಯಲಿದೆ!

ನವದೆಹಲಿ: ಕೇವಲ 2 ಡಿಗ್ರಿ ಸೆಲ್ಸಿಯಸ್ ನಷ್ಟು ಜಾಗತಿಕ ತಾಪಮಾನ ಏರಿಕೆಯಾದರೂ, ಈ ಶತಮಾನದ ಅಂತ್ಯದ ವೇಳೆಗೆ ಹಿಂದೂ ಕುಷ್ ಹಿಮಾಲಯ ಪರ್ವತಗಳಲ್ಲಿನ ಹಿಮದ ಪ್ರಮಾಣದಲ್ಲಿ ಶೇ.75ರಷ್ಟು ಕುಸಿತವಾಗಲಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಕೈಗಾರಿಕಾ ಕ್ರಾಂತಿಯ ವೇಳೆಯ ತಾಪಮಾನಕ್ಕೆ ಹೋಲಿಸಿದಲ್ಲಿ ಪ್ರಸ್ತುತ ದಿನಮಾನದ ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ಮೀರಬಾರದು ಎಂಬ 2015ರ ಪ್ಯಾರಿಸ್ ಒಪ್ಪಂದಕ್ಕೆ ವಿವಿಧ ರಾಷ್ಟ್ರಗಳು ಸಹಿ ಹಾಕಿವೆ.
ಈ ಒಪ್ಪಂದಕ್ಕೆ ಎಲ್ಲಾ ದೇಶಗಳು ಬದ್ಧವಾದದ್ದೇ ಆದಲ್ಲಿ ಹಿಮಾಲಯ ಹಾಗೂ ಯುರೋಪ್‌ನ ಕಾಕಾಸಸ್ ಪರ್ವತಗಳಲ್ಲಿನ ಕನಿಷ್ಠ ಶೇ.40-45ರಷ್ಟು ಹಿಮ ನೀರ್ಗಲ್ಲುಗಳನ್ನು ಉಳಿಸಿಕೊಳ್ಳಬಹುದು ಎಂದು ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಶತಮಾನದ ಅಂತ್ಯದೊಳಗೆ ಜಾಗತಿಕ ತಾಪಮಾನ 2.7 ಡಿಗ್ರಿ ಸೆಲ್ಸಿಯಸ್ ನಷ್ಟು ಏರಿಕೆಯಾದರೆ, ವಿಶ್ವದಲ್ಲಿ ಕೇವಲ ಶೇ.25ರಷ್ಟು ನೀರ್ಗಲ್ಲುಗಳು ಉಳಿಯಲಿವೆ ಎಂದೂ ಅಧ್ಯಯನದಲ್ಲಿ ಎಚ್ಚರಿಸಲಾಗಿದೆ.
ವಿವಿಧ ರಾಷ್ಟ್ರಗಳ ಪ್ರತಿನಿಧಿಗಳ ಹಾಜರಾತಿಯೊಂದಿಗೆ ವಿಶ್ವ ಸಂಸ್ಥೆ ನೇತೃತ್ವದಲ್ಲಿ ತಜಕೀಸ್ತಾನದ ದುಶಾಂಬೆಯಲ್ಲಿ ನೀರ್ಗಲ್ಲುಗಳ ಬಗ್ಗೆ ಮೊದಲ ಸಮ್ಮೇಳನ ಶುಕ್ರವಾರದಿಂದ ಪ್ರಾರಂಭವಾಗಿರುವ ವೇಳೆಯೇ ಈ ವರದಿ ಪ್ರಕಟವಾಗಿದೆ.