Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವರದಕ್ಷಿಣೆ ಅಪರಾಧವಾದರೆ, ಜೀವನಾಂಶ ಕಾನೂನುಬದ್ಧ ಬೆಂಬಲವೇಕೆ?

Spread the love

ವರದಕ್ಷಿಣೆ:ಕಾನೂನು ಬದ್ಧ ಅಪರಾಧವಾಗಿದ್ದರೂ, ಇಂದಿಗೂ ನಮ್ಮ ದೇಶದಲ್ಲಿ ವರದಕ್ಷಿಣೆ ಕೊಡುವುದು, ತೆಗೆದುಕೊಳ್ಳುವಂತಹದ್ದು ನಡೆಯುತ್ತಲೇ ಇವೆ. ಇದೊಂದು ಕಡೆಯಾದರೆ, ಇನ್ನೊಂದು ಕಡೆ ಜೀವನಾಂಶಕ್ಕಾಗಿಯೇ (alimony) ಡಿವೋರ್ಸ್‌ಗಳು ಆಗುವಂತಹ ಘಟನೆಗಳು ಸಹ ನಡೆಯುತ್ತಿವೆ.

ಇವೆಲ್ಲದರ ಮಧ್ಯೆ ಹಲವರು ವರದಕ್ಷಿಣೆ ತೆಗೆದುಕೊಳ್ಳುವುದು ಅಪರಾಧವಾಗಿದ್ದರೆ, ಡಿವೋರ್ಸ್‌ ಬಳಿಕ ಹೆಂಡತಿ ಗಂಡನಿಂದ ಜೀವನಾಂಶ ತೆಗೆದುಕೊಳ್ಳುವುದು ಕೂಡ ತಪ್ಪು ಎಂದು ವಾದಿಸುತ್ತಿದ್ದಾರೆ. ಹೀಗಿರುವಾಗ ವರದಕ್ಷಿಣೆ ಅಪರಾಧವಾಗಿದ್ದರೆ, ಜೀವನಾಂಶ ಕೇಳುವುದು ಕಾನೂನು ಬದ್ಧವೇ? ಈ ಬಗ್ಗೆ ಭಾರತೀಯ ಕಾನೂನು ಏನು ಹೇಳುತ್ತೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ವರದಕ್ಷಿಣೆ ಅಪರಾಧ:

ವರದಕ್ಷಿಣೆ ಕೇಳುವುದು, ಕೊಡುವುದು ಎರಡೂ ಭಾರತೀಯ ಕಾನೂನಿನಲ್ಲಿ ಅಪರಾಧವಾಗಿದೆ. ಇಂದಿಗೂ ಕೂಡಾ ಅದೆಷ್ಟೋ ಕಡೆ ಈ ಪಿಡುಗು ಜಾರಿಯಲ್ಲಿದ್ದು, ವರದಕ್ಷಿಣೆ ಕಿರುಕುಳದಿಂದ ಹೆಣ್ಣು ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಇದಕ್ಕಾಗಿಯೇ 1961 ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ತರಲಾಯಿತು. ಈ ಕಾಯ್ದೆ ಜಾರಿಗೆ ಬಂದಾಗಿನಿಂದ ವರದಕ್ಷಿಣೆ ಕೇಳುವುದು, ಕೊಡುವುದು ಅಪರಾಧವೇ ಆಗಿದೆ. ಈ ಕಠಿಣ ಕಾನೂನು ಜಾರಿಯಲ್ಲಿದ್ದರೂ, ಹಲವೆಡೆ ಇಂದಿಗೂ ಈ ಪಿಡುಗು ಅಸ್ತಿತ್ವದಲ್ಲಿದೆ.

ಕೊಟ್ಟ ಮನೆಯಲ್ಲಿ ಮಗಳು ಚೆನ್ನಾಗಿರಬೇಕು ಎಂದು ಹೆತ್ತ ತಂದೆ ತಾಯಿ ಸಾಲ ಸೂಲ ಮಾಡಿ ಗಂಡಿನ ಕಡೆಯವರಿಗೆ ವರದಕ್ಷಿಣೆ ಕೊಡುತ್ತಾರೆ. ಆದರೆ ಮದುವೆಯ ಬಳಿಕ ಅದೇ ಹುಡುಗಿಗೆ ಅತ್ತೆ, ಮಾವ, ಗಂಡ ಸೇರಿ ಇನ್ನೂ ಜಾಸ್ತಿ ವರದಕ್ಷಿಣೆ ಕೊಡು ಎಂದು ಕಿರುಕುಳ ಕೊಡುತ್ತಾರೆ. ಹೀಗೆ ಅದೆಷ್ಟೋ ಹೆಣ್ಣು ಮಕ್ಕಳು ವರದಕ್ಷಿಣೆ ಕಿರುಕುಳ ತಡೆಯಲಾರದೆ ಪ್ರಾಣ ಬಿಟ್ಟರೆ, ಇನ್ನೂ ವರದಕ್ಷಿಣೆಗಾಗಿ ಅದೆಷ್ಟೋ ಹೆಣ್ಣು ಮಕ್ಕಳನ್ನು ಸಾಯಿಸಿದ ಪ್ರಕರಣಗಳೂ ನಡೆದಿವೆ. ಇದೇ ಕಾರಣಕ್ಕಾಗಿಯೇ ವರದಕ್ಷಿಣೆ ಕೇಳುವುದು, ಕೊಡುವುದು ಅಪರಾಧವಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಾರ, 2024 ರಲ್ಲಿ 7045 ಮಹಿಳೆಯರು ವರದಕ್ಷಿಣೆ ಕಿರುಕುಳದಿಂದಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳ ದತ್ತಾಂಶವನ್ನು ನೋಡಿದರೆ, 2017 ರಿಂದ 2021 ರವರೆಗೆ, ಭಾರತದಲ್ಲಿ ಒಟ್ಟು 35,493 ವರದಕ್ಷಿಣೆ ಕೊಲೆ ಪ್ರಕರಣಗಳು ವರದಿಯಾಗಿವೆ.

ವರದಕ್ಷಿಣೆಯನ್ನು ಕೊನೆಗೊಳಿಸಲು, ಭಾರತ ಸರ್ಕಾರವು ವರದಕ್ಷಿಣೆ ನಿಷೇಧ ಕಾಯ್ದೆ, 1961 ಅನ್ನು ಜಾರಿಗೆ ತಂದಿತು. ಈ ಕಾನೂನಿನ ಉದ್ದೇಶವು ಶಿಕ್ಷಿಸುವುದಲ್ಲ, ಬದಲಾಗಿ ಮಹಿಳೆಯರ ಘನತೆ ಮತ್ತು ಭದ್ರತೆಗೆ ಕಾನೂನುಬದ್ಧ ಹಕ್ಕುಗಳನ್ನು ನೀಡುವುದಾಗಿದೆ. ಇದರ ಜೊತೆಗೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304B ಅಡಿಯಲ್ಲಿ, ಒಬ್ಬ ಮಹಿಳೆ ಮದುವೆಯಾದ 7 ವರ್ಷಗಳ ಒಳಗೆ ಮರಣ ಹೊಂದಿದರೆ ಮತ್ತು ಸಾವಿಗೆ ಮೊದಲು ವರದಕ್ಷಿಣೆಗಾಗಿ ಹಿಂಸೆ ನೀಡಲಾಗಿದೆ ಎಂದು ಸಾಬೀತಾದರೆ, ಅದನ್ನು ವರದಕ್ಷಿಣೆ ಕೊಲೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಪ್ರಕರಣದಲ್ಲಿ, ಆರೋಪಿಗಳಿಗೆ 7 ವರ್ಷದಿಂದ ಜೀವಾವಧಿಯವರೆಗೆ ಜೈಲು ಶಿಕ್ಷೆಯಾಗಬಹುದು. ಹೀಗೆ ವರದಕ್ಷಿಣೆ ಅಪರಾಧವಾಗಿರುವಾಗ, ಗಂಡು ಹೆಣ್ಣಿಗೆ ಜೀವನಾಂಶ ನೀಡಬೇಕು ಎನ್ನುವುದು ಎಷ್ಟು ಸರಿ ಎಂಬುವುದು ಹಲವರ ವಾದ.
ಜೀವನಾಂಶ ಕೇಳುವುದು ಕಾನೂನುಬದ್ಧವಾಗಿದೆಯೇ?

ಈಗ ಜೀವನಾಂಶದ ಬಗ್ಗೆ ಮಾತನಾಡುವುದಾದರೆ, ವಿಚ್ಛೇದನ ಪಡೆದ ನಂತರ ಪುರುಷ ತನ್ನ ಮಾಜಿ ಸಂಗಾತಿಗೆ ಇಂತಿಷ್ಟು ಜೀವನಾಂಶ ನೀಡಲೇಬೇಕು. ಆರ್ಥಿಕ ಬೆಂಬಲವನ್ನು ನೀಡುವುದು ಇದರ ಉದ್ದೇಶವಾಗಿದೆ. ಕೆಲ ಮಹಿಳೆಯರು ಮದುವೆಯ ನಂತರ, ತಮ್ಮ ಉದ್ಯೋಗ ತ್ಯಜಿಸಿ ತಮ್ಮ ಗಂಡಂದಿರ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಹೌದು ಅತ್ತೆ, ಮಾವ ಗಂಡ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಮಹಿಳೆಯರು ಉದ್ಯೋಗ ತ್ಯಜಿಸುತ್ತಾರೆ. ಇಂತಹ ಸಂದರ್ಭದಲ್ಲಿ ಯಾವುದೋ ಕಾರಣಕ್ಕೆ ಡಿವೋರ್ಸ್‌ ಆದ್ರೆ, ಜೀವನಾಂಶವು ಅವರಿಗೆ ಒಂದು ರೀತಿಯಲ್ಲಿ ಬೆಂಬಲವಾಗುತ್ತದೆ.

ಭಾರತದಲ್ಲಿ ಅನೇಕ ಮಹಿಳೆಯರು ಮದುವೆಯ ನಂತರ ಹೊರಗಡೆ ದುಡಿಯಲು ಹೋಗದೆ, ನಿಸ್ವಾರ್ಥದಿಂದ ಮನೆಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸುತ್ತಾರೆ, ಮಕ್ಕಳನ್ನು ಬೆಳೆಸುತ್ತಾರೆ ಮತ್ತು ಕುಟುಂಬದ ಏಳಿಗೆಗಾಗಿ ತಮ್ಮದೇ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಾರೆ ಎಂದು ಎಂದು ಭಾರತೀಯ ಕಾನೂನು ಸಹ ಒಪ್ಪಿಕೊಳ್ಳುತ್ತದೆ. ಆದರೆ ಈ ಮನೆಕೆಲಸಗಳನ್ನು ಮಾಡಿದ್ದಕ್ಕೆ ಅವರಿಗೆ ಯಾವುದೇ ಹಣ ಸಿಗುವುದಿಲ್ಲ. ಮತ್ತೊಂದೆಡೆ, ಯಾವುದೋ ಕಾರಣಕ್ಕೆ ಗಂಡ ಹೆಂಡತಿಯ ನಡುವೆ ಮನಸ್ತಾಪ ಏರ್ಪಟ್ಟು ವಿಚ್ಛೇದನವಾದಾಗ, ಒಂಟಿಯಾಗಿ ಜೀವನ ಸಾಗಿಸಲು ಆ ಮಹಿಳೆಯರ ಬಳಿ ಹಣ, ಉದ್ಯೋಗ, ಉಳಿತಾಯ ಯಾವುದು ಇರುವುದಿಲ್ಲ. ಆದ್ದರಿಂದ, ಭಾರತೀಯ ಕಾನೂನುಗಳು CrPC ಸೆಕ್ಷನ್ 125 ಮತ್ತು ಕೌಟುಂಬಿಕ ಹಿಂಸಾಚಾರ ಕಾಯ್ದೆ 2005 ರ ಅಡಿಯಲ್ಲಿ ಅಂತಹ ಮಹಿಳೆಯರು ವಸತಿ, ಆಹಾರ ಮತ್ತು ಇತರ ಅಗತ್ಯಗಳಿಗಾಗಿ ಜೀವನಾಂಶವನ್ನು ಪಡೆಯಬಹುದು ಮತ್ತು ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸ, ಅವರನ್ನು ನೋಡಿಕೊಳ್ಳುವ ಸಲುವಾಗಿ ಜೀವನಾಂಶ ಪಡೆಯಬಹುದು ಎಂದು ಖಚಿತಪಡಿಸಿವೆ. ಇದರಿಂದ ಅವರು ಯಾರ ಮುಂದೆಯೂ ಕೈ ಚಾಚುವ ಅಗತ್ಯ ಇರುವುದಿಲ್ಲ.

ಒಂದು ವೇಳೆ ಗಂಡ ತಿಂಗಳಿಗೆ 1 ಲಕ್ಷ ರೂಪಾಯಿ ಗಳಿಸುತ್ತಿದ್ದರೆ ಮತ್ತು ಹೆಂಡತಿ ಕೂಡ ಅಷ್ಟೇ ಸಂಪಾದಿಸುತ್ತಿದ್ದು, ಆಕೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಜೀವನಾಂಶ ನೀಡುವ ಅಗತ್ಯವಿರುವುದಿಲ್ಲ. ಆದರೆ ಮಕ್ಕಳ ಆರೈಕೆಯ ದೃಷ್ಟಿಯಿಂದ ನ್ಯಾಯಾಲಯ ಇಂತಹ ಸಂದರ್ಭದಲ್ಲೂ ಆರ್ಥಿಕ ಸಹಾಯ ನೀಡಲು ಆದೇಶಿಸುವ ಸಾಧ್ಯತೆ ಇರುತ್ತದೆ.


Spread the love
Share:

administrator

Leave a Reply

Your email address will not be published. Required fields are marked *